
ದಿನಾಂಕ:19-08-2025 (ಹಾಯ್ ಉಡುಪಿ ನ್ಯೂಸ್)
ಸೌಜನ್ಯ ಕೊಲೆ ಪ್ರಕರಣ ಮತ್ತು ಎರಡು ದಶಕಗಳ ಅವಧಿಯಲ್ಲಿ ಧರ್ಮಸ್ಥಳದಾದ್ಯಂತ ನಡೆದಿದೆ ಎನ್ನಲಾದ ಸರಣಿ ಕೊಲೆಗಳು, ಅತ್ಯಾಚಾರಗಳು ಮತ್ತು ಸಮಾಧಿಗಳ ಕುರಿತ ಆರೋಪಗಳು “ಆಧಾರ ರಹಿತ ಹಾಗೂ ಸುಳ್ಳು” ಎಂದು ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಧರ್ಮಸ್ಥಳ ವಿರುದ್ಧದ ಆರೋಪಗಳಿಗೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಅವರು, ಸತ್ಯ ಬಹಿರಂಗಪಡಿಸಲು ರಾಜ್ಯ ಸರ್ಕಾರ ರಚಿಸಿರುವ ಎಸ್‌ಐಟಿಯನ್ನು ಸ್ವಾಗತಿಸಿದರು. ಈ ಆರೋಪಗಳ ತನಿಖೆಗಾಗಿ ಎಸ್ಐಟಿ ಶ್ರಮಿಸುತ್ತಿದ್ದು ಇದು ಅಂತಿಮವಾಗಿ ಮಾನವ ಅವಶೇಷಗಳನ್ನು ಪತ್ತೆಹಚ್ಚಲು ಹಲವಾರು ಸ್ಥಳಗಳಲ್ಲಿ ಉತ್ಖನನ ನಡೆಸಿದೆ. ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರಂತರ ಹೋರಾಟಗಳು ನಡೆಯುತ್ತಿವೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಷಯಗಳನ್ನು ಬಿಂಬಿಸುವ ರೀತಿ ನೈತಿಕವಾಗಿ ತಪ್ಪು. ಇದರಿಂದ ನನಗೆ ನಿಜವಾಗಿಯೂ ನೋವಾಗಿದೆ ಎಂದರು. ಧರ್ಮಸ್ಥಳ ಮತ್ತು ಅದರ ಟ್ರಸ್ಟ್ ಅನ್ನು ಗುರಿಯಾಗಿಸಿಕೊಂಡು 14 ವರ್ಷಗಳಿಗೂ ಹೆಚ್ಚು ಕಾಲದಿಂದ ಸಂಘಟಿತ ಅಭಿಯಾನ ನಡೆಸಲಾಗುತ್ತಿದೆ ಎಂದು ಹೆಗ್ಗಡೆ ಆರೋಪಿಸಿದರು.