
ದಿನಾಂಕ:19-08-2025(ಹಾಯ್ ಉಡುಪಿ ನ್ಯೂಸ್)
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗಿರುವ ಸಾಮೂಹಿಕ ಅಂತ್ಯಕ್ರಿಯೆಯ ಆರೋಪ ಹಾಗೂ ಆ ಮೂಲಕ ಕ್ಷೇತ್ರದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂಬ ವಿಷಯ ಇಂದು ಸದನದಲ್ಲಿ ಭಾರಿ ಸದ್ದು ಮಾಡಿ, ಆಡಳಿತ- ವಿಪಕ್ಷಗಳ ನಡುವಿನ ವಾಕ್ಸಮರಕ್ಕೆ ಕಾರಣವಾಯಿತು.
ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಯುತ್ತಿದ್ದು ಈ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು. ಧರ್ಮಸ್ಥಳದ ವಿಚಾರದಲ್ಲಿ ಬಹಳ ದೊಡ್ಡ ಷಡ್ಯಂತ್ರವೇ ಇದೆ ಎಂದು ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ಕೊಟ್ಟಿದ್ದಾರೆ. ಧರ್ಮಸ್ಥಳದಲ್ಲಿ ಯಾವ ರೀತಿ ನಡೆಯುತ್ತಿದೆ ಎಂಬ ಬಗ್ಗೆ ಗೃಹ ಸಚಿವರು ಉತ್ತರ ನೀಡಬೇಕು ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು. ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ’28 ಕೊಲೆ ಮಾಡಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದ್ದ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಕ್ರಮ ಏಕೆ ಕೈಗೊಂಡಿಲ್ಲ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಪರಮೇಶ್ವರ್, ನಾವೇನು ಸುಮ್ಮನೆ ಕುಳಿತಿಲ್ಲ ಮೌನವಾಗೇನೂ ಇಲ್ಲ.. ಸೂಕ್ತ ಉತ್ತರ ನೀಡುತ್ತೇವೆ.. ಕ್ರಮ ಕೈಗೊಳ್ಳಲು ಮಂಗಳೂರು ಪೊಲೀಸ್ ಕಮಿಷನರ್ ಗೆ ಸೂಚನೆ ಕೊಟ್ಟಿದ್ದೇನೆ. ಸರ್ಕಾರವೇನೂ ಅಸಹಾಯಕವಾಗಿ ಕುಳಿತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.