Spread the love

ಭಾರತದ ಸ್ವಾತಂತ್ರ್ಯೋತ್ಸವ ಆಚರಿಸುವ ಕೆಲವೇ ಗಂಟೆಗಳ ಮುನ್ನ ಒಂದು ಆತ್ಮಾವಲೋಕನ ಮತ್ತು ಪ್ರತಿಜ್ಞಾ ವಿಧಿ……………

ಉಕ್ಕಿ ಹರಿಯುವ ದೇಶಪ್ರೇಮ………..

ಎಲ್ಲೆಲ್ಲೂ ರಾಷ್ಟ್ರಗೀತೆ – ರಾಷ್ಟ್ರಧ್ವಜ…….

ಜೈ ಭಾರತ್ ಘೋಷಣೆ……

ತುಂಬಾ ಸಂತೋಷ……

ಆದರೆ,
ಸೂಕ್ಷ್ಮವಾಗಿ ಗಮನಿಸಿ ಮತ್ತು ನೆನಪಿಡಿ………

ಇದೇ ಬಾಯಿಗಳೇ ದ್ವೇಷ ಕಾರುವ, ರಕ್ತ ಹೀರುವ ಘೋಷಣೆ ಕೂಗುವುದು…..

ಇದೇ ಕಣ್ಣುಗಳೇ ಸಾವುಗಳನ್ನು ಸಂಭ್ರಮಿಸಿ ಕ್ರೂರತೆ ಮೆರೆಯುವುದು….

ಇದೇ ಕೈಗಳೇ ಭ್ರಷ್ಟ ಲಂಚದ ಹಣಕ್ಕೆ
ಕೈ ಚಾಚುವುದು…..

ಇದೇ ಕಾಲುಗಳೇ ಹಣ, ಹೆಂಡ ಪಡೆದು ಮತದಾನ ಕೇಂದ್ರಕ್ಕೆ ಸಾಗುವುದು….

ಇದೇ ತೋಳುಗಳೇ ಅತ್ಯಾಚಾರಕ್ಕೆ ಬಳಸಲ್ಪಡುವುದು….

ಇದೇ ಮನಸ್ಸುಗಳೇ ಇಂದು ದೇಶದಲ್ಲಿ ಅರಾಜಕತೆ ಅಸಹಿಷ್ಣುತೆ ಉಂಟು ಮಾಡುತ್ತಿರುವುದು………..

ಜನರನ್ನು ಟೀಕಿಸಿದ್ದಕ್ಕೆ ಬೇಸರವಾಗುತ್ತಿದೆಯೇ ?

ಬನ್ನಿ ನನ್ನೊಂದಿಗೆ…..

ಇಡೀ ದೇಶದ ಸರ್ಕಾರಿ ಕಚೇರಿಗಳಲ್ಲಿ, ಆಸ್ಪತ್ರೆಯಿಂದ ವಿಧಾನಸೌಧದ ವರೆಗೆ,
ಜಮೀನು ನೋಂದಣಿ ಕಚೇರಿಯಿಂದ ಮರಣ ನೋಂದಣಿ ಕಚೇರಿಯವರೆಗೆ ಲಂಚವಿಲ್ಲದೆ ಕೆಲಸವಾಗುವುದು ಅಪರೂಪ.

ಒಡವೆ ಧರಿಸಿದ ಒಂಟಿ ಹೆಣ್ಣು ಇಲ್ಲಿ ಸುರಕ್ಷಿತ ಎಂದು ಹೇಳುವ ಒಂದೇ ಒಂದು ಜನನಿಬಿಡ ಬಸ್ ನಿಲ್ದಾಣ ಅಥವಾ ರೈಲು ನಿಲ್ದಾಣವನ್ನು ತೋರಿಸಿ.

ಕಾನೂನು ತಜ್ಞರ ಸಲಹೆ ಪಡೆಯದೆ ಕೇವಲ ನಂಬಿಕೆಯ ಆಧಾರದ ಮೇಲೆ ಮನೆ ಅಥವಾ ಜಮೀನು ಖರೀದಿಸುವ ಧೈರ್ಯ ಎಷ್ಟು ಜನರಿಗಿದೆ.

ಒಂದು ಕಡೆ ಡ್ರಗ್ ಮಾಫಿಯಾ, ಇನ್ನೊಂದು ಕಡೆ ಲ್ಯಾಂಡ್ ಮಾಫಿಯಾ, ಕ್ಯಾಪಿಟೇಷನ್ ಮಾಫಿಯಾ, ಶುಗರ್ ಮಾಫಿಯಾ, ಗಣಿ ಮಾಫಿಯಾ, ವಾಟರ್ ಮಾಫಿಯಾ ಜೊತೆಗೆ ಜಾತಿ ಧರ್ಮ ಮುಂತಾದ ವಿಭಜಕ ಶಕ್ತಿಗಳು ಇಡೀ ಆಡಳಿತ ಯಂತ್ರವನ್ನು ನಿಯಂತ್ರಿಸುತ್ತಿವೆ.

ಆದರೆ ‌ದೇಶಭಕ್ತಿ ಮಾತ್ರ ಉಕ್ಕಿ ಹರಿಯುತ್ತದೆ.

ದೇಶಭಕ್ತಿ ಕೇವಲ ಘೋಷಣೆಯಲ್ಲ. ಅದು ನಡವಳಿಕೆ.
ದುರುಳ ನಾಯಕರಿಂದ ಮಕ್ಕಳಿಗೆ ಶಾಲೆಯಲ್ಲಿ ನೀತಿ ಪಾಠ ಹೇಳಿಸಿ ಸ್ವಾತಂತ್ರ್ಯೋತ್ಸವ ಆಚರಿಸಿದರೆ ಆ ಕಪಟತನದ ಮುಖವಾಡ ಮುಂದಿನ ದಿನಗಳಲ್ಲಿ ಮಕ್ಕಳಿಗೆ ತಿಳಿಯುವುದಿಲ್ಲವೇ ?

ನುಡಿದಂತೆ ನಡೆಯಿರಿ
ಇಲ್ಲವೇ
ನಡೆದಂತೆ ನುಡಿಯಿರಿ.

ಅದೇ ದೇಶಪ್ರೇಮ.

ಸರಳತೆ ಸಭ್ಯತೆ ಪ್ರೀತಿ ವಿಶ್ವಾಸವಿಲ್ಲದ ಪೇಪರ್ ಟೈಗರ್ ಗಳೋ, ಟಿವಿ ಟೈಗರ್ ಗಳೋ, ಯೂಟ್ಯೂಬ್ ಟೈಗರ್ ಗಳೋ, ಭಾಷಣಗಳ ಟೈಗರ್ ಗಳೋ ಆಗಿ ಒಣ ವೇದಾಂತ ಹೇಳುತ್ತಾ ಪ್ರಚಾರದ ಹಂಗಿಗೆ ಬಿದ್ದು ಬುದ್ದಿವಂತರೆಂಬ ಭ್ರಮೆಗೆ ಒಳಗಾಗಿ ವ್ಯಕ್ತಿತ್ವವೇ ಇಲ್ಲದ ಟೊಳ್ಳು ದೇಶಪ್ರೇಮ ಅಪಾಯಕಾರಿ.

ಮಾತಿನರಮನೆಯಲ್ಲಿ ಅರಳುವುದು ಮುಖವಾಡ,
ನರನಾಡಿಗಳಲ್ಲಿ ಸಮಾನತೆ, ಸೌಹಾರ್ಧತೆ ಅಡಗಿರುವುದು ದೇಶಪ್ರೇಮ.

ವಂದೇ ಮಾತರಂ ಎಂದು ಕೂಗುವುದು
ದೇವಸ್ಥಾನಗಳಿಗೆ ಪ್ರವೇಶ ನಿರಾಕರಿಸುವುದು.
ವಂದೇ ಮಾತರಂ ಎನ್ನುವುದು ಮಠದಲ್ಲಿ ಪಂಕ್ತಿಬೇದ ಮಾಡುವುದು ಮತ್ತು ಅದನ್ನು ಸಮರ್ಥಿಸುವುದು.
ವಂದೇ ಮಾತರಂ ಎನ್ನುವುದು ಜಾತಿ ಸರ್ಟಿಫಿಕೇಟ್ ಹಂಚುವುದು.
ವ್ಯಕ್ತಿ ಸ್ವಾತಂತ್ರ್ಯ ಗೌರವಿಸದೆ ಇನ್ನೊಬ್ಬರನ್ನು ಹಂಗಿಸುವುದು,

ಛೆ…….

ನಮ್ಮ ನಡವಳಿಕೆ – ವರ್ತನೆ – ದಿನನಿತ್ಯದ ಒಳ್ಳೆಯ, ಮೌಲ್ಯಯುತ ಚಟುವಟಿಕೆಗಳೇ ನಮ್ಮ ದೇಶಪ್ರೇಮ.

ಕೇವಲ ಜೈ ಭಾರತ್ ಘೋಷಣೆಯಲ್ಲ……

ಒಳ್ಳೆಯವರಾಗಿ,
ಒಳ್ಳೆಯದನ್ನು ಪ್ರೋತ್ಸಾಹಿಸಿ,
ಕೆಟ್ಟದ್ದನ್ನು ತಿರಸ್ಕರಿಸಿ…….

ಈ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ನಾವು ಮಾಡಬಹುದಾದ ಸಂಕಲ್ಪಗಳು, ಕರ್ತವ್ಯಗಳು ಮತ್ತು ಜವಾಬ್ದಾರಿ……..

ಎಲ್ಲರಿಗೂ ತಿಳಿದಿರುವ, ಭಾರತದ ಪ್ರಗತಿಗೆ ಮಾರಕವಾಗಿರುವ ಕೆಲವು ಶಾಪಗ್ರಸ್ತ ಸಮಸ್ಯೆಗಳಿಗೆ ಸಾಮಾನ್ಯ ವ್ಯಕ್ತಿಗಳಾಗಿರುವ ನಾವು ಕೊಡಬಹುದಾದ ಅಣುವಿನ ಕಣದಷ್ಟು ಕೊಡುಗೆ ಇದು………

ಮೊದಲನೆಯ ಸಮಸ್ಯೆ ಜಾತಿ ಪದ್ದತಿ. ಇದು ಸೃಷ್ಟಿಯಾಗಲು ಕಾರಣವೇನೆ ಇರಲಿ ಇಂದಿಗೂ ಭಾರತದ ಅಭಿವೃದ್ಧಿಗೆ ಕಂಟಕವಾಗಿರುವುದು ಜಾತಿ ವ್ಯವಸ್ಥೆ. ಯಾವುದೇ ವೈಜ್ಞಾನಿಕ ಆಧಾರವಿಲ್ಲದೆ ಹುಟ್ಟಿನಿಂದ ನಿರ್ಧರಿಸಲ್ಪಡುವ ಇದು ಎಲ್ಲಾ ಕ್ಷೇತ್ರಗಳಲ್ಲಿ ಹರಡಿ ಜಾತಿಯ ಕಾರಣದಿಂದ ದುಷ್ಟರು ಸಹ ಮುಖ್ಯವಾಹಿನಿಗೆ ಬರುವಂತಾಗಿದೆ. ಆದ್ದರಿಂದ ಇನ್ನು ಮುಂದೆ ನಾವು ಸಾಧ್ಯವಾದಷ್ಟು ಜಾತಿಗಳ ಬಗ್ಗೆ ನಿರ್ಲಕ್ಷ್ಯ ಮತ್ತು ನಿರ್ಮೋಹಿತರಾಗುತ್ತೇವೆ. ವೈಯಕ್ತಿಕ ಮಟ್ಟದಲ್ಲಿ ತೀರಾ ಅನಿವಾರ್ಯವಾದ ಕೆಲವು ಕಟ್ಟುಪಾಡುಗಳನ್ನು ಹೊರತುಪಡಿಸಿ ಸಾರ್ವಜನಿಕವಾಗಿ ಜಾತಿಯ ಹೆಸರಿನಲ್ಲಿ ಗುರುತಿಸಿಕೊಳ್ಳುವುದಿಲ್ಲ. ಚುನಾವಣೆಯಲ್ಲಿ ಜಾತಿ ನೋಡಿ ಮತ ಹಾಕುವುದಿಲ್ಲ. ಅತಿಮುಖ್ಯವಾಗಿ ಅಸ್ಪೃಶ್ಯತೆಯನ್ನು ಆಚರಿಸುವುದಿಲ್ಲ, ಸಹಿಸುವುದಿಲ್ಲ ಮತ್ತು ನಮ್ಮ ಅರಿವಿಗೆ ಬಂದರೆ ಅದರ ನಿರ್ಮೂಲನೆಗೆ ಕಾಯಾ ವಾಚಾ ಮನಸಾ ಶ್ರಮಿಸುತ್ತೇವೆ…….

ಎರಡನೆಯ ಅತಿದೊಡ್ಡ ಸಮಸ್ಯೆ ಭ್ರಷ್ಟಾಚಾರ. ವ್ಯಾವಹಾರಿಕ ಜಗತ್ತಿನಲ್ಲಿ ನಾವೆಲ್ಲರೂ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಭ್ರಷ್ಟಾಚಾರಿಗಳೇ ಆಗಿದ್ದೇವೆ. ಆದರೆ ಇನ್ನು ಮುಂದೆ ನಾವು ಸಾಧ್ಯವಾದಷ್ಟು ಭ್ರಷ್ಟ ಹಣ ಎಂದು ತಿಳಿದುಬರುವ ಹಣದ ವ್ಯವಹಾರವನ್ನು ಕಡಿಮೆ ಮಾಡುತ್ತೇವೆ. ಕೊಡುವ ಅಥವಾ ತೆಗೆದುಕೊಳ್ಳುವ ವಿಷಯದಲ್ಲಿ ಆತ್ಮಸಾಕ್ಷಿಯ ಕರೆಗೆ ಓಗೊಟ್ಟು ಆದಷ್ಟು ಪ್ರಾಮಾಣಿಕವಾಗಿ ಇರಲು ಪ್ರಯತ್ನಿಸುತ್ತೇವೆ. ಕ್ರಮೇಣ ಕೆಲವು ವರ್ಷಗಳಲ್ಲಿ ಸಂಪೂರ್ಣ ತ್ಯಜಿಸಲು ಪ್ರಯತ್ನಿಸುತ್ತೇವೆ ಮತ್ತು ನಮ್ಮ ವ್ಯಾಪ್ತಿಗೆ ಬರುವ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುತ್ತೇವೆ……

ಮೂರನೆಯದಾಗಿ ಪರಿಸರ ನಾಶ ಅತ್ಯಂತ ಗಂಭೀರ ಸಮಸ್ಯೆಗಳನ್ನು ತಂದೊಡ್ಡಿದೆ. ಕೇವಲ ಪರಿಸರ ಮಾತ್ರ ನಾಶವಾಗುತ್ತಿಲ್ಲ. ದೇಶದ ಜನರ ಆರೋಗ್ಯ, ಭಯಾನಕ ನೈಸರ್ಗಿಕ ವಿಕೋಪಗಳು, ಕೃಷಿಯ ಮೇಲಿನ ದುಷ್ಪರಿಣಾಮ ಎಲ್ಲವೂ ದೇಶದ ಅಭಿವೃದ್ಧಿಗೆ ಮಾರಕವಾಗಿದೆ. ಆದ್ದರಿಂದ ನಾವುಗಳು ನಮ್ಮ ಅರಿವಿನ ಮಿತಿಯಲ್ಲಿ ಪರಿಸರಕ್ಕೆ ಹಾನಿಯಾಗುವ, ಆಹಾರದ ಕಲಬೆರಕೆಯನ್ನು, ಕೃತಕ ರಾಸಾಯನಿಕ ಉಪಯೋಗಿಸುವುದನ್ನು, ಆಹಾರ ವ್ಯರ್ಥವಾಗುವುದನ್ನು, ನೀರು ಮತ್ತು ಗಾಳಿ ಮಲಿನವಾಗುವುದನ್ನು ವೈಯಕ್ತಿಕ ಮಟ್ಟದಲ್ಲಿ ಮತ್ತು ಸಾಮೂಹಿಕ ಪ್ರಯತ್ನಗಳ ಮೂಲಕ ತಡೆಯಲು ಪ್ರಯತ್ನಿಸುತ್ತೇವೆ. ಪರಿಸರವು ಸಹ ನನ್ನ ಕುಟುಂಬದ ಒಂದು ಪರೋಕ್ಷ ಆಸ್ತಿ ಎಂದು‌ ಪರಿಗಣಿಸಿ ಅದರ ರಕ್ಷಣೆಗೆ ಶ್ರಮಪಡುತ್ತೇವೆ….

ನಾಲ್ಕನೆಯ ಮತ್ತು ಇತ್ತೀಚಿನ ಅತಿದೊಡ್ಡ ಸಮಸ್ಯೆ ಕೋಮು ಮತ್ತು ಜನಾಂಗೀಯ ಗಲಭೆಗಳು. ಮುಖ್ಯವಾಗಿ ಧರ್ಮಗಳ ( ಮತಗಳ ) ನಡುವೆ, ಬುಡಕಟ್ಟು ಜನಾಂಗಗಳ ನಡುವೆ ರಾಜಕೀಯ ಕಾರಣಗಳಿಗಾಗಿ ಬೃಹತ್ ಪ್ರಮಾಣದ ಹಿಂಸೆ ನಡೆಯುತ್ತಿವೆ. ಇದು ದೇಶದ ಆಂತರಿಕ ಭದ್ರತೆಗೆ ಮಾತ್ರವಲ್ಲ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಗೆ ಚ್ಯುತಿ ತಂದಿದೆ. ಇದು ನಮ್ಮ ವ್ಯಾಪ್ತಿಯನ್ನು ಮೀರಿದೆ ಎನಿಸಿದರು ನಾವು ಸಹ ಇದನ್ನು ಕಡಿಮೆ ಮಾಡಲು ಸಣ್ಣ ಕೊಡುಗೆ ನೀಡಬಹುದು. ಮುಖ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅನಾವಶ್ಯಕವಾಗಿ ವೀರಾವೇಶದ, ಕೋಪೋದ್ರಿಕ್ತ, ಸರಿಯಾಗಿ ಮಾಹಿತಿಯಿಲ್ಲದ ಅಥವಾ ಇದ್ದರೂ ಪ್ರಚೋದನಕಾರಿಯಾದ ವಿಷಯಗಳನ್ನು ಫಾರ್ವರ್ಡ್ ಮಾಡುವಾಗ ಅಥವಾ ನಮ್ಮ ಅಭಿಪ್ರಾಯ ಹಂಚಿಕೊಳ್ಳುವಾಗ ಆದಷ್ಟು ಸಂಯಮವನ್ನು ಪ್ರದರ್ಶಿಸುತ್ತೇವೆ. ಆ ಕ್ಷಣದ ಭಾವನೆಗಳನ್ನು ನಿಯಂತ್ರಿಸಿ‌ ದೇಶದ ಒಟ್ಟು ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಬೆಂಕಿ ನಂದಿಸುವ ಕೆಲಸ ಮಾಡುತ್ತೇವೆ. ದೇಶದ ಅಖಂಡತೆ ಮತ್ತು ಸಮಗ್ರತೆಯ ರಕ್ಷಣೆಗಾಗಿ ಒಂದು ಹೆಜ್ಜೆ ಹಿಂದೆ ಸರಿಯುವ ತ್ಯಾಗಕ್ಕೂ‌ ಸಿದ್ದರಾಗುತ್ತೇವೆ. ಅಗತ್ಯ ಬಿದ್ದರೆ ಪೋಲೀಸ್, ಮಿಲಿಟರಿ ಅಥವಾ ನ್ಯಾಯಾಂಗದ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತೇವೆ……

ಐದನೆಯದಾಗಿ ಭಾರತದಲ್ಲಿ ಕುಸಿಯುತ್ತಿರುವ ಮಾನವೀಯ ಮೌಲ್ಯಗಳು ನಮ್ಮ ಎಲ್ಲಾ ಆಧುನಿಕ ಪ್ರಗತಿಗಳನ್ನು ಆಪೋಶನ ತೆಗೆದುಕೊಳ್ಳುತ್ತಿದೆ. ನಮ್ಮೊಳಗಿನ ಪ್ರೀತಿ ಕರುಣೆ ತಾಳ್ಮೆ ತ್ಯಾಗ ಸಹನೆ ಸಂಯಮ ಸಹಕಾರ ಕ್ಷಮೆ ಸಭ್ಯತೆ ಸಂಬಂಧ ಎಲ್ಲವೂ ಕ್ಷೀಣಿಸುತ್ತಿದೆ ಮತ್ತು ವ್ಯಾಪಾರೀಕರಣವಾಗುತ್ತಿದೆ. ಈ ಮೌಲ್ಯಗಳನ್ನು ಮತ್ತೆ ಪುನರುಜ್ಜೀವನ ಗೊಳಿಸುವ ನಿಟ್ಟಿನಲ್ಲಿ ನಾವು ನಮ್ಮ ಕೈಲಾದಷ್ಟು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ……

ಹೀಗೆ ಮತ್ತು ಇನ್ನೂ ಕೆಲವು ಸಾಧ್ಯವಿರುವ ಸಂಕಲ್ಪಗಳನ್ನು ಸಣ್ಣದಾಗಿ ಮತ್ತು ನಿಧಾನವಾಗಿ ಅಳವಡಿಸಿಕೊಳ್ಳುತ್ತಾ ಹೋದರೆ ಸ್ವಲ್ಪವಾದರೂ ಒಳ್ಳೆಯ ಬದಲಾವಣೆ ಸಾಧ್ಯವಾಗಬಹುದು. ಕೇವಲ ಮಾತಿನಲ್ಲಿ, ಬರಹಗಳಲ್ಲಿ, ಭಾವೋದ್ವೇಗದ ಭಾಷಣಗಳಲ್ಲಿ, ಜೈಕಾರಗಳಲ್ಲಿ ಮಾತ್ರ ದೇಶ ಭಕ್ತಿ ಹೆಚ್ಚು ಪರಿಣಾಮಕಾರಿಯಲ್ಲ……

ವಿಶ್ವದ ವೈವಿಧ್ಯಮಯ ದೇಶ ಭಾರತವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಎಲ್ಲರೂ ಸಹಕರಿಸೋಣ. ಪ್ರಜಾಪ್ರಭುತ್ವದ ನಿಜವಾದ ಆಶಯವನ್ನು ಜಾರಿಗೊಳಿಸೋಣ.
ನಮ್ಮ ನಡುವಿನ ಭಿನ್ನಾಭಿಪ್ರಾಯಗಳ ಕಡಿಮೆ ಮಾಡಿಕೊಂಡು ದೇಶದ ಏಳಿಗೆಗೆ ಶ್ರಮಿಸೋಣ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.

error: No Copying!