
ರಾತ್ರಿ ಪಾಳಿ ( Night shift )
ತುಂಬಾ ಗಂಭೀರ ವಿಷಯ. ದಯವಿಟ್ಟು ಸಾರ್ವಜನಿಕ ಚರ್ಚೆಗೆ ಒಳಪಡಿಸಿ………
ರಾತ್ರಿ ಪಾಳಿ ( ನೈಟ್ ಶಿಫ್ಟ್ ) ಎಂಬ ಉದ್ಯೋಗಿಗಳ ಕೆಲಸದ ಅವಧಿಯು ಒಂದು ಯುವ ಪೀಳಿಗೆಯನ್ನೇ ಮಾನಸಿಕ ಮತ್ತು ದೈಹಿಕ ಆರೋಗ್ಯದ ಸಮಸ್ಯೆಗಳಿಗೆ ಸಿಲುಕಿಸಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ತುಂಬಾ ದುಷ್ಪರಿಣಾಮವನ್ನು ಬೀರುತ್ತಿದೆ. ನನಗೆ ಪರಿಚಯದ ಎಲ್ಲಾ ಕ್ಷೇತ್ರಗಳ ಕಂಪನಿ, ಕಾರ್ಖಾನೆ, ಇತ್ಯಾದಿಗಳಲ್ಲಿ ರಾತ್ರಿ ಪಾಳಿಯಲ್ಲಿ ನಿಯಮಿತವಾಗಿ ಕೆಲಸ ಮಾಡುವ ಉದ್ಯೋಗಿಗಳನ್ನು, ಆತ್ಮೀಯರನ್ನು ಮಾತನಾಡಿಸಿದೆ.
ಅವರೆಲ್ಲರ ಅನಿಸಿಕೆ, ಅಭಿಪ್ರಾಯವೇನೆಂದರೆ ರಾತ್ರಿ ಪಾಳಿಯಲ್ಲಿ ಖಂಡಿತವಾಗಲೂ ನಿದ್ರಾಹೀನತೆಯಿಂದ ಕೆಲವಷ್ಟು ಸಾಮಾನ್ಯ ಮತ್ತು ದೀರ್ಘ ಖಾಯಿಲೆಗಳು ನಮ್ಮನ್ನು ಬಾಧಿಸುತ್ತಿವೆ. ಕೆಲವರಂತೂ ರಾತ್ರಿ ಪಾಳಯ ಒಂದು ದುಃಸ್ವಪ್ನ. ಅದರಿಂದಾಗಿ ನಾನು ಖಿನ್ನತೆಗೆ ಒಳಗಾಗಿ ವೈದ್ಯರ ಸಲಹೆ ಪಡೆಯುತ್ತಿದ್ದೇನೆ ಎಂದರು. ಹಲವರು ಕೌಟುಂಬಿಕ ಸಮಸ್ಯೆಗೂ ಇದು ಕಾರಣವಾಗಿದೆ ಎಂದು ಹೇಳಿದರು.
ಕೆಲವು ಕ್ಷೇತ್ರಗಳಲ್ಲಿ ರಾತ್ರಿ ಪಾಳಿಯು ಅನಿವಾರ್ಯವೇನೋ ನಿಜ. ಆದರೆ ಅದಕ್ಕೆ ಕೆಲವೊಂದು ಪರಿಹಾರ ರೂಪದ ಬದಲಾವಣೆಯು ತೀರ ಅಗತ್ಯವಾಗಿದೆ. ಇದು ಅತಿಯಾಗಿ ದೇಹ ಮತ್ತು ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುವ ಮುನ್ನ ಒಂದಷ್ಟು ಸುಧಾರಣೆಗಳನ್ನು ಮಾಡಬೇಕಾಗಿದೆ. ದಯವಿಟ್ಟು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಬಂಧಪಟ್ಟ ಕಾರ್ಮಿಕ ಸಚಿವರುಗಳಿಗೋ ಅಥವಾ ಆರೋಗ್ಯ ಸಚಿವರಿಗೋ, ಅಧಿಕಾರಿಗಳಿಗೋ ಒಂದಷ್ಟು ಮಾಹಿತಿಯನ್ನು ಕಳುಹಿಸಿ ಮನವಿ ಮಾಡಿಕೊಳ್ಳಿ ಎಂದು ಒತ್ತಾಯಿಸಿದರು.
ಏಕೆಂದರೆ ಸಾಮಾನ್ಯವಾಗಿ ಭಾರತೀಯರ ಜೀವನಶೈಲಿಯಲ್ಲಿ ಬೆಳಗಿನ 6:00 ರಿಂದ ಸಂಜೆಯ 6:00 ವರೆಗಿನ ಅವಧಿಯನ್ನು ಹಗಲು ಎಂತಲೂ, ಸಂಜೆ 6:00 ಗಂಟೆಯಿಂದ ಬೆಳಗಿನ 6:00 ವರೆಗೆ ರಾತ್ರಿ ಅಂತಲೂ ಕರೆಯಲಾಗುತ್ತದೆ. ಈಗಿನ ಆಧುನಿಕ ಶೈಲಿಯಲ್ಲಿ ಸಾಮಾನ್ಯವಾಗಿ ಜನರು ರಾತ್ರಿ 10:00 ಗಂಟೆಯಿಂದ ಬೆಳಗಿನ 6:00 ವರೆಗೆ ನಿದ್ರಾ ಸಮಯ ಎಂದು ಪರಿಗಣಿಸುತ್ತಾರೆ. ಇದೊಂದು ಸಹಜ ಜೀವನ ಶೈಲಿ ಮತ್ತು ಜೊತೆಗೆ ದೇಹ ಹಾಗು ಮನಸ್ಸು ಈ ಪ್ರಾಕೃತಿಕ ಗುಣಕ್ಕೆ ಹೊಂದಾಣಿಕೆಯಾಗಿದೆ. ಇದಕ್ಕೆ ವಿರುದ್ಧವಾಗಿ ರಾತ್ರಿಯ ವೇಳೆ ನಿರಂತರವಾಗಿ ಕೆಲಸ ಮಾಡುವುದು ಮತ್ತು ಹಗಲಿನ ವೇಳೆ ನಿದ್ರೆ ಮಾಡುವುದು ಒಂದು ರೀತಿ ಅಸಹಜ ಮತ್ತು ಅನೈಸರ್ಗಿಕ ಜೀವನ ಶೈಲಿ ಎಂದು ಪರಿಗಣಿಸಲಾಗುತ್ತದೆ.
ಈ ಸ್ಪರ್ಧೆ ಮತ್ತು ವೇಗದ ಕಾಲದಲ್ಲಿ ರಾತ್ರಿ ಪಾಳಿಯನ್ನು ನಿಷೇಧಿಸುವುದು ಅಷ್ಟು ಸುಲಭವಲ್ಲ ಅಥವಾ ಕಾರ್ಯಸಾಧುವಲ್ಲ. ಅದಕ್ಕೆ ಪರ್ಯಾಯವಾಗಿ ಉದ್ಯೋಗದ ಸಮಯದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳುವುದು ಉತ್ತಮ. ಮುಖ್ಯವಾಗಿ ರಾತ್ರಿ ಪಾಳಿಯನ್ನು ಈಗಿನ ಎಂಟು ಗಂಟೆಗೆ ಬದಲಾಗಿ ಆರು ಗಂಟೆಯ ಅವಧಿಗೆ ಇಳಿಸಬೇಕು. ಅಂದರೆ ಸಂಜೆ 6:00 ರಿಂದ ರಾತ್ರಿ 12:00 ರವರೆಗೆ ಒಂದು ಪಾಳಿಯೆಂದು, ರಾತ್ರಿ 12:೦೦ ರಿಂದ ಬೆಳಗಿನ 6:00 ರವರೆಗೆ ಮತ್ತೊಂದು ಪಾಳಿ ಎಂದು ವಿಭಾಗಿಸಬೇಕು. ಆಗ 12 ಗಂಟೆಯ ನಂತರ ಅನುಕೂಲ ಇದ್ದವರು ಮನೆಗೆ ಹೋಗಬಹುದು. ಇಲ್ಲದಿದ್ದವರು ಅಲ್ಲಿಯೇ ಬೆಳಗಿನವರೆಗೂ ನಿದ್ರಿಸಬಹುದು. ಹಾಗೆಯೇ ರಾತ್ರಿ 12 ಗಂಟೆಯಿಂದ ಬೆಳಗಿನ 6:00 ವರೆಗೆ ಕೆಲಸ ಮಾಡುವವರು ಪ್ರಾರಂಭದ ಕೆಲವು ಗಂಟೆಗಳು ಒಂದಷ್ಟು ನಿದ್ರೆ ಮಾಡಬಹುದು. ಇದರಿಂದ ಉದ್ಯೋಗದ ದಕ್ಷತೆಯೂ ಹೆಚ್ಚಾಗುತ್ತದೆ, ಆರೋಗ್ಯವು ಸುಧಾರಿಸುತ್ತದೆ, ಒತ್ತಡವು ಬೀಳುವುದಿಲ್ಲ.
ಬೆಳಗಿನ ಸಮಯದ ಎಂಟು ಗಂಟೆಯ ಅವಧಿ ಸಾಮಾನ್ಯವಾಗಿದ್ದರೆ ರಾತ್ರಿಯಾವಧಿ ಕೆಲಸವನ್ನು ವಿಶೇಷ ಎಂದು ಪರಿಗಣಿಸಬೇಕು. ಈ 6:00 ಗಂಟೆ ಖಂಡಿತವಾಗಲು ಒಂದಷ್ಟು ಒತ್ತಡವನ್ನು ಕಡಿಮೆ ಮಾಡುತ್ತದೆ. ಕೆಲವು ನಿರುದ್ಯೋಗಿಗಳಿಗೆ ಹೆಚ್ಚಿನ ಉದ್ಯೋಗಾವಕಾಶವು ದೊರೆಯಬಹುದು.
ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿದರೆ ವಿಶೇಷ ಭತ್ಯೆಗಳನ್ನು ಕೊಡುತ್ತೇವೆ ಅಥವಾ ಸಿಗುತ್ತದೆ ಎಂಬ ಮನೋಭಾವ ಎರಡೂ ಕಡೆಯವರಿಗೆ ಒಳ್ಳೆಯದಲ್ಲ. ಎಲ್ಲಕ್ಕಿಂತ ಆರೋಗ್ಯ ಮುಖ್ಯ.
ಇದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲ್ಲಾ ಉದ್ಯೋಗಿಗಳ ವಿಷಯದಲ್ಲಿ ಗಂಭೀರವಾಗಿ ಪರಿಗಣಿಸಬೇಕು. ರಾತ್ರಿ ಪಾಳಯದ ಅವಧಿ ಮಿತಿಗೊಳಿಸುವುದರ ಜೊತೆಗೆ ಕೆಲಸ ಮಾಡುವ ಸ್ಥಳದಲ್ಲಿ ನಿದ್ರೆ ಮಾಡಲು ಒಂದಷ್ಟು ಪೂರಕ ವಾತಾವರಣ ಮತ್ತು ಸ್ಥಳಾವಕಾಶ ಕಲ್ಪಿಸಬೇಕು. ಇದರಿಂದಾಗಿ ಖಂಡಿತವಾಗಲೂ ನಮ್ಮ ದೇಶದ ಆರ್ಥಿಕ ಅಭಿವೃದ್ಧಿಯ ಗತಿ ಮತ್ತು ಉದ್ಯೋಗಿಗಳ ಆರೋಗ್ಯಕರ ಮನಸ್ಥಿತಿ ಉತ್ತಮವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.
ತೀರಾ ಅನಿವಾರ್ಯವಾದ ವೈದ್ಯಕೀಯ, ಪೊಲೀಸ್ ಅಥವಾ ಇತರ ಕ್ಷೇತ್ರಗಳ ಪಾಳಿಯ ಬಗ್ಗೆ ಮತ್ತೊಮ್ಮೆ ಅನುಕೂಲಕರ ಪುನರ್ ವಿಮರ್ಶೆ ಮಾಡಬಹುದು. ಅದನ್ನು ಹೊರತುಪಡಿಸಿ ಬೇರೆ ಎಲ್ಲಾ ಉದ್ಯೋಗಿಗಳಿಗೂ ಈ ರಾತ್ರಿ ಪಾಳಿಯ ಆರು ಗಂಟೆಯ ಅವಧಿ ಅತ್ಯುತ್ತಮ ಎಂದು ಅನಿಸುತ್ತದೆ. ಮಧ್ಯೆ ಸ್ವಲ್ಪ ವಿರಾಮದೊಂದಿಗೆ ಆರು ಗಂಟೆಯನ್ನು ಉದ್ಯೋಗದಲ್ಲಿ ಕಳೆಯುವುದು ಅಷ್ಟು ಕಠಿಣವಾಗಲಾರದು. ಏಕೆಂದರೆ ಉಳಿದ ಆರು ಗಂಟೆ ನಿದ್ರಾ ಸಮಯ ಸಿಗುತ್ತದೆ.
ದಯವಿಟ್ಟು ಸಂಬಂಧಪಟ್ಟವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಈ ಬಗ್ಗೆ ಸಂಸತ್ತು ಮತ್ತು ವಿಧಾನಮಂಡಲದಲ್ಲಿ ಚರ್ಚೆ ಮಾಡುವುದು ಉತ್ತಮ. ಜೊತೆಗೆ ಇನ್ನಷ್ಟು ಸುಧಾರಣೆಗಾಗಿ ತಜ್ಞರ ಸಮಿತಿ ರಚಿಸಿ ಸಲಹೆ ಪಡೆಯಬಹುದು. ಇದನ್ನು ಹೊರತುಪಡಿಸಿ ಇತರೆ ಇನ್ಯಾವುದೇ ಒಳ್ಳೆಯ ಕೆಲಸದ ಅವಧಿ ಇದ್ದರೆ ಅದನ್ನೂ ಚರ್ಚಿಸಬಹುದು.
ಕಾರ್ಮಿಕರು ಮತ್ತು ಅವರ ಕುಟುಂಬದವರ ಹಾಗು ನಮ್ಮ ಕೌಟುಂಬಿಕ ಮತ್ತು ಸಾಮಾಜಿಕ ವ್ಯವಸ್ಥೆಯ ಸುಧಾರಣೆಗೆ ಈ ಬದಲಾವಣೆ ತುಂಬಾ ತುಂಬಾ ಅಗತ್ಯವಾಗಿದೆ………..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.