
ದಿನಾಂಕ:10-08-2025(ಹಾಯ್ ಉಡುಪಿ ನ್ಯೂಸ್)
ಬೆಂಗಳೂರಿನ ಬಹುನಿರೀಕ್ಷಿತ ನಮ್ಮ ಮೆಟ್ರೋ ಆರ್.ವಿ.ರಸ್ತೆ- ಬೊಮ್ಮಸಂದ್ರ ಮಾರ್ಗದಲ್ಲಿ (ಹಳದಿ ರಸ್ತೆ) ರೈಲು ಸಂಚಾರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಭಾನುವಾರ ಹಸಿರು ನಿಶಾನೆ ತೋರಿದ್ದಾರೆ. ಈ ಮಾರ್ಗದಲ್ಲಿ ಸೋಮವಾರದಿಂದ ಸಂಚಾರ ಆರಂಭವಾಗಲಿದೆ. ಹಳದಿ ಮಾರ್ಗಕ್ಕೆ ಚಾಲನೆ ನೀಡಿದ ಬಳಿಕ ಮೋದಿಯವರು, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್, ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಸೇರಿದಂತೆ ಕೆಲವು ಬಿಜೆಪಿ ನಾಯಕರೊಂದಿಗೆ ಮೆಟ್ರೋ ರೈಲಿನಲ್ಲಿ ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ಸ್ಟೇಷನ್ವರೆಗೆ ಸಂಚಾರ ಕೈಗೊಂಡರು. ಮೆಟ್ರೋ ಹಂತ-3 ಯೋಜನೆಯ ಶಿಲಾನ್ಯಾಸ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿಯವರು, ಪಾಕಿಸ್ತಾನದೊಳಗಿನ ಭಯೋತ್ಪಾದಕ ನೆಲೆಗಳನ್ನು ನಾಶಮಾಡುವಲ್ಲಿ ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸಿದ ಆಪರೇಷನ್ ಸಿಂಧೂರ ಸಮಯದಲ್ಲಿ ಜಗತ್ತು ಮೊದಲ ಬಾರಿಗೆ ಭಾರತದ ಹೊಸ ಮುಖವನ್ನು ನೋಡಿತು ಎಂದು ಹೇಳಿದರು. ‘ಆಪರೇಷನ್ ಸಿಂಧೂರ ಯಶಸ್ಸಿನ ಹಿಂದೆ ನಮ್ಮ ತಂತ್ರಜ್ಞಾನ ಮತ್ತು ಮೇಕ್ ಇನ್ ಇಂಡಿಯಾದ ಬಲವಿದೆ. ಆಪರೇಷನ್ ಸಿಂಧೂರದಲ್ಲಿ ಬೆಂಗಳೂರು ಮತ್ತು ನಗರದ ಯುವಕರು ಪ್ರಮುಖ ಪಾತ್ರ ವಹಿಸಿದ್ದಾರೆ. ಬೆಂಗಳೂರು ವಿಶ್ವದ ದೊಡ್ಡ ನಗರಗಳೊಂದಿಗೆ ಗುರುತಿಸಲ್ಪಟ್ಟಿದೆ ಎಂದು ಮೋದಿ ಹೇಳಿದರು.