
ದಿನಾಂಕ:08-08-2025(ಹಾಯ್ ಉಡುಪಿ ನ್ಯೂಸ್)
ಬೆಳ್ತಂಗಡಿ: ಧರ್ಮಸ್ಥಳದ ಪರಿಸರದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಆಪಾದಿಸಿ ಸ್ಥಳಗಳನ್ನು ತೋರಿಸುತ್ತಿರುವ ಅನಾಮಿಕ ವ್ಯಕ್ತಿಯನ್ನು SIT ವಶದಲ್ಲಿ ಇರಿಸಿಕೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಶ್ಯಾಮ್ ಸುಂದರ್ ಎಂಬವರು ತನಿಖಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಈ ಸಂಬಂಧ ಎಸ್ ಐಟಿಗೆ ಪತ್ರ ಬರೆದಿರುವ ಶ್ಯಾಮ್ ಸುಂದರ್, ಪ್ರಕರಣದ ನಿಷ್ಪಕ್ಷಪಾತ ತನಿಖೆಯ ಬಗ್ಗೆ ಸ್ಥಳೀಯ ವ್ಯಕ್ತಿಯಾಗಿರುವ ನನಗೆ ಕಳವಳವಿದೆ ಎಂದು ಪತ್ರ ಬರೆದಿದ್ದಾರೆ. ಈ ಮಧ್ಯೆ ಆ ಅರ್ಜಿಯನ್ನು ಸ್ವೀಕರಿಸಿದ್ದು, ಈ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಎಸ್‌ಐಟಿ ತಿಳಿಸಿದೆ. ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ರಹಸ್ಯವಾಗಿ ಹೂತುಹಾಕಲಾದ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ನಡೆಸುತ್ತಿದೆ. ಆದರೆ, ಹೂತುಹಾಕಲಾಗಿರುವ ಶವಗಳ ಅವಶೇಷಗಳನ್ನು ಹೊರತೆಗೆಯುವ ಪ್ರಕ್ರಿಯೆಯಲ್ಲಿ ಭೂಮಿಯ ಒಳಭಾಗವನ್ನು ಸಮೀಕ್ಷೆ ಮಾಡಲು ಜಿಪಿಆರ್ ತಂತ್ರಜ್ಞಾನ ಬಳಸಲು SIT ತಜ್ಞರ ಅಭಿಪ್ರಾಯ ಪಡೆಯಲಿದೆ. ಬೆಂಗಳೂರಿನಿಂದ GPR ನಾಳೆ ಬರುವ ನಿರೀಕ್ಷೆಯಿದೆ. ಈಗ ಪಾಯಿಂಟ್ 13ರ ಮೇಲೆ ಮಾತ್ರ ಗಮನಹರಿಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.