ಉಡುಪಿಯ ಹಿರಿಯ ಸಮರ್ಪಿತ ಸಾಮಾಜಿಕ ಕಾರ್ಯಕರ್ತ ಹಾಗೂ ಇಸ್ಲಾಮಿಕ್ ವೆಲ್ಫೇರ್ ಸೊಸ್ಯೆಟಿ ಉಡುಪಿ ಇದರ ಮುಂದಾಳು ಶೇಖ್ ಶರ್ಪುದ್ದೀನ್ ದಾವೂದ್ ಅವರು ಇಂದು ಬೆಳಗ್ಗೆ ಬೆಂಗಳೂರಿನ ತನ್ನ ಮಗನ ಮನೆಯಲ್ಲಿ ತನ್ನ 75 ನೇ ವಯಸ್ಸಿನಲ್ಲಿ ನಿಧನರಾದರು.
ತನ್ನ ಜೀವನದುದ್ದಕ್ಕೂ ಉಡುಪಿಯ ವಿವಿಧ ಸಾಮಾಜಿಕ, ಸಾಮುದಾಯಿಕ ಸಂಘ ಸಂಸ್ಥೆಗಳ ಜೊತೆಗೂಡಿ ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಉಡುಪಿಯಲ್ಲಿ ಇಸ್ಲಾಮಿಕ್ ವೆಲ್ಫೇರ್ ಸೊಸ್ಯೆಟಿಯನ್ನು ಕಟ್ಟಿ ಬೆಳೆಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಈ ಸಂಸ್ಥೆಯಲ್ಲಿ ತನ್ನ ಕೊನೆಯ ದಿನಗಳವರೆಗೂ ಸೇವೆ ಸಲ್ಲಿಸುತ್ತಿದ್ದರು. ಉಡುಪಿಯ ಜಾಮಿಯಾ ಮಸೀದಿಯ ಬೆಳವಣಿಗೆಯಲ್ಲಿ, ಆಡಳಿತ ಪಾರದರ್ಶಕತೆಯಿಂದ ಇರುವಂತೆ ಮುನ್ನಡೆಸಲು ಪ್ರಯತ್ನಿಸಿ ಮಸೀದಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಮಸೀದಿಯ ಆಡಳಿತ ಮಂಡಳಿಯಲ್ಲಿ 40 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿದ್ದರು.ಜಮಾಅತೆ ಇಸ್ಲಾಮಿ ಹಿಂದ್ ಇದರ ಉಡುಪಿ ನಗರ ವರ್ತುಲದ ಅಧ್ಯಕ್ಷರಾಗಿಯೂ,ಮಾನವೀಯ ಸೇವೆ ಮತ್ತು ಪರಿಹಾರ ಸಂಸ್ಥೆ ಎಚ್.ಆರ್.ಎಸ್ ನ ರಾಜ್ಯ ಕೋಶಾಧಿಕಾರಿ ಯಾಗಿ ಸೇವೆ ಸಲ್ಲಿಸಿದ್ದಾರೆ. ಉಡುಪಿ ಮುಸ್ಲಿಮರ ಸಮಾಜ ಸೇವಾ ಸಂಸ್ಥೆ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ (ರಿ)ಇದರ ಸ್ಥಾಪಕ ಸದಸ್ಯರಾಗಿ ಸಕ್ರಿಯವಾಗಿ ಸೇವೆ ಸಲ್ಲಿಸಿದ್ದಾರೆ. ಉಡುಪಿ ಯಲ್ಲಿ ವಿದ್ಯಾರ್ಥಿ ಯುವಕರ ರಾಷ್ಟ್ರೀಯ ಸಂಘಟನೆ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನ್ಯೆಸೇಷನ್ (SIO) ಶಾಖೆ ಪ್ರಾರಂಭಿಸಲು ಪ್ರೇರೇಪಣೆಯಾಗಿದ್ದರು.
ನೇರ ನಡೆ ನುಡಿಯ ಸಹ್ರದಯಿ ವ್ಯಕ್ತಿ ಯಾಗಿದ್ದ ಅವರು ಜನರೊಂದಿಗೆ ಆತ್ಮೀಯತೆಯಿಂದ ಬೆರೆಯುತ್ತಿದ್ದರು. ಮ್ರತರು ಪತ್ನಿ ,ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.