Spread the love

ದಿನಾಂಕ:30-07-2025( ಹಾಯ್ ಉಡುಪಿ ನ್ಯೂಸ್)

ಉಡುಪಿ: ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಗರ್ಭವತಿಯನ್ನಾಗಿಸಿದ ಮೂರು ಮಕ್ಕಳ ತಂದೆ, ಆರೋಪಿ ರಾಘವೇಂದ್ರ (35)ನನ್ನು ಹೆಚ್ಚುವರಿ ಜಿಲ್ಲಾ ಪೋಕ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀನಿವಾಸ್ ಸುವರ್ಣ ಅವರು ಆರೋಪಿ ಯನ್ನು ದೋಷಿ ಎಂದು ತೀರ್ಮಾನಿಸಿ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

ಬೈಂದೂರು ತಾಲೂಕಿನ ನಿವಾಸಿಯಾದ ಆರೋಪಿ ರಾಘವೇಂದ್ರ, ಸಂಬಂಧಿ ಬಾಲಕಿಯನ್ನು ಮನೆಯ ಸಮೀಪದ ಗೇರು ಮರದ ಹಾಡಿಗೆ ಕರೆದುಕೊಂಡು ಹೋಗಿ, ಆಕೆಯ ಇಚ್ಛೆಗೆ ವಿರುದ್ಧವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ನಂತರ ಪೋಷಕರಿಗೆ ತಿಳಿಸಿದರೆ ಜೀವಕ್ಕೆ ತೊಂದರೆ ಉಂಟು ಮಾಡುವುದಾಗಿ ಬೆದರಿಸಿ, ನಿರಂತರವಾಗಿ ದೌರ್ಜನ್ಯ ಎಸಗಿದ್ದನು.

2024 ನೇ ಆಗಸ್ಟ್‌ನಲ್ಲಿ ನೊಂದ ಬಾಲಕಿಯ ಆರೋಗ್ಯದಲ್ಲಿ ಏರುಪೇರಾಗಿ ತಪಾಸಣೆ ಮಾಡಿದಾಗ, ಆಕೆಯು ಗರ್ಭಾವತಿಯಾಗಿರುವುದು ತಿಳಿದುಬಂದಿದೆ. ಬಾಲಕಿಯನ್ನು ವಿಚಾರಿಸಿದಾಗ, ಘಟನೆ ಬೆಳಕಿಗೆ ಬಂದಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಬೈಂದೂರು ಸಿಪಿಐ ಸವೀತ್ರಾ ತೇಜಾ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು. ಒಟ್ಟು 27 ಸಾಕ್ಷಿಗಳ ಪೈಕಿ, 12 ಸಾಕ್ಷಿಗಳ ವಿಚಾರಣೆ ನಡೆಸಲಾಗಿದ್ದು, ಮುಖ್ಯವಾಗಿ ನೊಂದ ಬಾಲಕಿಯ ಸಾಕ್ಷಿ ಮತ್ತು ಡಿಎನ್‌ಎ ವರದಿ ಆಧರಿಸಿ ಆರೋಪಿಯನ್ನು ದೋಷಿ ಎಂದು ನ್ಯಾಯಾಧೀಶ ಶ್ರೀನಿವಾಸ್ ಸುವರ್ಣ ಅವರು ಆದೇಶಿಸಿದ್ದಾರೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೈಟಿ ರಾಘವೇಂದ್ರ ವಾದಿಸಿದ್ದಾರೆ.

20 ವರ್ಷ ಕಠಿಣ ಕಾರಾಗೃಹ ಶಿಕ್ಷೆ, 25 ಸಾವಿರ ರೂ. ದಂಡ ಹಾಗು ಸರಕಾರದಿಂದ ನೊಂದ ಬಾಲಕಿಗೆ 3 ಲಕ್ಷ ಪರಿಹಾರ ನೀಡುವಂತೆ ಆದೇಶಿಸಲಾಗಿದೆ.

error: No Copying!