
ದಿನಾಂಕ:27-07-2025(ಹಾಯ್ ಉಡುಪಿ ನ್ಯೂಸ್)
ವಿಜಯಪುರ: ಜಗದೀಪ್ ಧನಕರ್ ಅವರು ಉಪ ರಾಷ್ಟ್ರಪತಿ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಲು ನಿಜವಾದ ಕಾರಣವೇನೆಂದು ತಮಗೆ ಗೊತ್ತಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾನುವಾರ ಹೇಳಿದ್ದಾರೆ.
ಧನಕರ್ ಅವರಿಗೆ ರಾಜೀನಾಮೆ ನೀಡುವಂತೆ ಒತ್ತಾಯಿಸಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಖರ್ಗೆ, ಈ ವಿಷಯವು ಅವರ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಿನದ್ದಾಗಿರುವುದರಿಂದ. ಅವರಿಬ್ಬರ ನಡುವೆ ನಿಜವಾಗಿಯೂ ಏನಾಯಿತು ಎಂಬುದನ್ನು ಧನಕರ್ ಹೇಳಬೇಕು ಎಂದು ಖರ್ಗೆ ತಿಳಿಸಿದರು.
ಧನಕರ್ ಯಾವಾಗಲೂ ಸರ್ಕಾರದ ಪರವಾಗಿರುತ್ತಿದ್ದರು ಎಂದ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ, ರೈತರು ಅಥವಾ ಬಡವರ ಪರವಾಗಿ ಅಥವಾ ವಿದೇಶಾಂಗ ನೀತಿಯ ವಿಷಯಗಳ ಬಗ್ಗೆಯೂ ವಿರೋಧ ಪಕ್ಷ ಸಮಸ್ಯೆಗಳನ್ನು ಪ್ರಸ್ತಾಪಿಸಲು ಪ್ರಯತ್ನಿಸಿದಾಗಲೆಲ್ಲಾ ಅವರು ಅದಕ್ಕೆ ಯಾವತ್ತೂ ಅನುಮತಿಸಲಿಲ್ಲ ಎಂದರು.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, “ರೈತರು, ಬಡವರು, ಅಂತರರಾಷ್ಟ್ರೀಯ ಸಮಸ್ಯೆಗಳು ಅಥವಾ ವಿದೇಶಾಂಗ ನೀತಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ನಾವು ಎತ್ತಿದಾಗ, ಅವರು ನಮಗೆ(ರಾಜ್ಯಸಭೆಯಲ್ಲಿ ಅದರ ಅಧ್ಯಕ್ಷರಾಗಿ) ಎಂದಿಗೂ ಅವಕಾಶ ನೀಡುತ್ತಿರಲಿಲ್ಲ” ಎಂದರು.
ಕಳೆದ ಜುಲೈ 21 ರಂದು ಸಂಜೆ ಧನಕರ್ ಅವರು ವೈದ್ಯಕೀಯ ಕಾರಣಗಳನ್ನು ಉಲ್ಲೇಖಿಸಿ ಉಪ ರಾಷ್ಟ್ರಪತಿ ಸ್ಥಾನಕ್ಕೆ ಹಠಾತ್ ರಾಜೀನಾಮೆ ನೀಡಿದರು. ಇದು ರಾಜಕೀಯ ವಲಯಗಳಲ್ಲಿ ಹಲವು ಊಹಾಪೋಹಗಳಿಗೆ ಕಾರಣವಾಯಿತು.
ಇದೇ ವೇಳೆ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರನ್ನು ಬದಲಾಯಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಖರ್ಗೆ, “ಅದೆಲ್ಲವನ್ನೂ ಈಗ ಹೇಳಲಾಗುವುದಿಲ್ಲ. ನಂತರ ಮಾತನಾಡುತ್ತೇನೆ” ಎಂದು ಹೇಳಿದರು.