Spread the love

ನವದೆಹಲಿ : ದಿನಾಂಕ:24-07-2025(ಹಾಯ್ ಉಡುಪಿ ನ್ಯೂಸ್) ಬರೋಬ್ಬರಿ 189 ಜನರನ್ನು ಬಲಿ ಪಡೆದ 2006ರ ಮುಂಬೈ ಸರಣಿ ರೈಲು ಸ್ಫೋಟ ಪ್ರಕರಣದ ಎಲ್ಲಾ 12 ಆರೋಪಿಗಳನ್ನು ಬಾಂಬೆ ಹೈಕೋರ್ಟ್‌  ಸಾಕ್ಷ್ಯಾಧಾರಗಳ ಕೊರತೆಯ ಕಾರಣ ನೀಡಿ ಖುಲಾಸೆಗೊಳಿಸಿದೆ. ನ್ಯಾಯಾಲಯದ ಮುಂದಿರುವ ಸಾಕ್ಷ್ಯಗಳನ್ನು ಆಧಾರವಾಗಿಟ್ಟುಕೊಂಡು ಆರೋಪಿಗಳು ಈ ಕೃತ್ಯ ಎಸಗಿದ್ದಾರೆಂದು ನಂಬಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತಕ್ಷಣವೇ ಎಲ್ಲರನ್ನೂ ಬಿಡುಗಡೆ ಮಾಡಿ ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿತ್ತು. ಈ ತೀರ್ಪು ಹೊರಬಿದ್ದ ಬಳಿಕ ಜೈಲಿನಿಂದ 8 ಜನರನ್ನು ಬಿಡುಗಡೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ 5 ಜನರಿಗೆ ಗಲ್ಲು ಮತ್ತು 7 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಅವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಬಾಂಬೆ ಹೈಕೋರ್ಟ್ ಅವರನ್ನು ಖುಲಾಸೆಗೊಳಿಸಿತ್ತು. ಒಬ್ಬ ಆರೋಪಿ 2021ರಲ್ಲಿಯೇ ಸಾವನ್ನಪ್ಪಿದ್ದ. ಇದೀಗ ಹೈಕೋರ್ಟ್ನ ಈ ತೀರ್ಪಿನ ವಿರುದ್ಧ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಮುಂಬೈ ರೈಲು ಸ್ಫೋಟ ಪ್ರಕರಣದಲ್ಲಿ 12 ಆರೋಪಿಗಳನ್ನು ಖುಲಾಸೆಗೊಳಿಸಿದ ಬಾಂಬೆ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. 2006ರ ಮುಂಬೈ ರೈಲು ಸ್ಫೋಟ ಪ್ರಕರಣದಲ್ಲಿ ಖುಲಾಸೆಗೊಳಿಸುವುದರ ವಿರುದ್ಧ ಮಹಾ ಸರ್ಕಾರ ಸಲ್ಲಿಸಿದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ. ಜುಲೈ 21ರ ಹೈಕೋರ್ಟ್ ತೀರ್ಪಿನ ವಿರುದ್ಧ ರಾಜ್ಯದ ಮೇಲ್ಮನವಿಯನ್ನು ಗುರುವಾರಕ್ಕೆ ಪಟ್ಟಿ ಮಾಡುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಮಾಡಿದ ತುರ್ತು ಮನವಿಯನ್ನು ಇಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಕೆ. ವಿನೋದ್ ಚಂದ್ರನ್, ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠವು ಪರಿಗಣಿಸಿದೆ. ಜುಲೈ 11, 2006ರಂದು ಪಶ್ಚಿಮ ಮಾರ್ಗದ ವಿವಿಧ ಸ್ಥಳಗಳಲ್ಲಿ ಮುಂಬೈ ಸ್ಥಳೀಯ ರೈಲುಗಳಲ್ಲಿ 7 ಸ್ಫೋಟಗಳು ಸಂಭವಿಸಿ 189 ಜನರು ಸಾವನ್ನಪ್ಪಿದರು, 800ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಈ ಪ್ರಕರಣದ ತನಿಖೆ ನಡೆಸಿದ್ದ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)ಕ್ಕೆ ಬಾಂಬೆ ಹೈಕೋರ್ಟ್ ನೀಡಿದ ತೀರ್ಪು ದೊಡ್ಡ ಮುಜುಗರವನ್ನುಂಟು ಮಾಡಿದೆ. ಆರೋಪಿಗಳು ನಿಷೇಧಿತ ಸಂಘಟನೆಯಾದ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (ಸಿಮಿ)ದ ಸದಸ್ಯರಾಗಿದ್ದು, ಪಾಕಿಸ್ತಾನಿ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾ (ಎಲ್‌ಇಟಿ) ಜೊತೆ ಪಿತೂರಿ ನಡೆಸಿದ್ದಾರೆ ಎಂದು ತನಿಖಾ ಸಂಸ್ಥೆ ಹೇಳಿತ್ತು. ಆದರೆ, ಸಾಕ್ಷ್ಯಾಧಾರಗಳು ಸಾಕಾಗುತ್ತಿಲ್ಲ ಎಂಬ ಕಾರಣ ನೀಡಿ ಆ ಆರೋಪಿಗಳನ್ನು ಬಿಡುಗಡೆ ಮಾಡಲಾಗಿದೆ.

error: No Copying!