Spread the love

ಬೆಂಗಳೂರು: ದಿನಾಂಕ:23-07-2025(ಹಾಯ್ ಉಡುಪಿ ನ್ಯೂಸ್)ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಗೆ ಇಂತಿಷ್ಟು ಆದಾಯ ಸಂಗ್ರಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟಾರ್ಗೆಟ್ ನೀಡಿರುವುದರಿಂದ ಸಣ್ಣ ಮತ್ತು ಅತಿ ಸಣ್ಣ ವ್ಯಾಪಾರಿಗಳಿಗೆ ಜಿಎಸ್‌‍ಟಿ ನೋಟೀಸ್‌ ನೀಡಲಾಗಿದೆ. ತಕ್ಷಣವೇ ಇದನ್ನು ಹಿಂಪಡೆಯಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ವ್ಯಾಪಾರಿಗಳು ಆತಂಕದಲ್ಲಿದ್ದಾರೆ. ಜಿಎಸ್‌‍ಟಿ ಸಂಗ್ರಹದಲ್ಲಿ ಮಹಾರಾಷ್ಟ್ರ ಹಿಂದಿಕ್ಕಿ ಕರ್ನಾಟಕ ಮೊದಲ ಸ್ಥಾನಕ್ಕೆ ಬರಬೇಕು ಎಂದು ಸಿಎಂ ಬಹಿರಂಗ ಹೇಳಿಕೆ ಕೊಟ್ಟಿದ್ದರು. ಜೊತೆಗೆ ಅಧಿಕಾರಿಗಳಿಗೂ ಟಾರ್ಗೆಟ್‌ ನೀಡಿದ್ದರು. ಇದರಿಂದ ಈಗ ಸತ್ಯ ಬಯಲಾಗಿದೆ. ನೋಟೀಸ್‌ ನೀಡಿ ಅಧಿಕಾರಿಗಳ ಮೂಲಕ ಸರ್ಕಾರ ವಸೂಲಿಗೆ ಇಳಿದಿದೆ. ನೋಟೀಸ್‌ ಕೊಟ್ಟಿರುವುದು ಅಕ್ರಮವಾಗಿದ್ದು, ಈಗಾಗಲೇ ಕೊಟ್ಟಿರುವ ನೊಟೀಸ್‌ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಬಿಜೆಪಿಯೂ ವ್ಯಾಪಾರಿಗಳ ಪ್ರತಿಭಟನೆಗೆ ಬಿಜೆಪಿಯಿಂದ ಬೆಂಬಲ ಘೋಷಿಸಿರುವುದಾಗಿ ಪುನರುಚ್ಚರಿಸಿದ ವಿಜಯೇಂದ್ರ, ಹಾಲು, ಮೊಸರು ಮಾರಾಟ ಮಾಡುವ ಸಣ್ಣ ವ್ಯಾಪಾರಿಗಳಿಗೂ ನೋಟಿಸ್ ನೀಡಿದ್ದಾರೆ. ಜಿಎಸ್‌ಟಿ ಅಡಿಯಲ್ಲಿ ಮೂರು ಸ್ಲ್ಯಾಬ್‌ಗಳಿವೆ. ಆದರೆ ವಾಣಿಜ್ಯ ತೆರಿಗೆ ಇಲಾಖೆಯು ಎಲ್ಲರಿಗೂ ಶೇ. 18 ರಷ್ಟು ತೆರಿಗೆ ನೋಟಿಸ್‌ಗಳನ್ನು ನಿರ್ದಾಕ್ಷಿಣ್ಯವಾಗಿ ನೀಡುತ್ತಿದೆ. ಈ ನೋಟೀಸ್‌ಗಳನ್ನು ಸರಿಯಾದ ಪರಿಶೀಲನೆ ಇಲ್ಲದೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಖಜಾನೆ ಖಾಲಿ ಆಗಿರುವುದರಿಂದ ಈ ನೋಟಿಸ್ ನೀಡುತ್ತಿದ್ದು, ಸರ್ಕಾರ ಕೂಡಲೇ ಈ ನೋಟಿಸ್‌ಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಪತ್ನಿ ವಿರುದ್ಧದ ಇಡಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿರುವುದರ ಕುರಿತು ಪ್ರತಿಕ್ರಿಯಿಸಿದ ವಿಜಯೇಂದ್ರ, ಸುಪ್ರೀಂ ಕೋರ್ಟ್‌ ಕ್ಲೀನ್‌ಚಿಟ್‌ ನೀಡಿಲ್ಲ. ಇದರಲ್ಲಿ ಸಿಎಂ ನಿರಪರಾಧಿ ಎಂದೂ ಹೇಳಿಲ್ಲ. ಪ್ರಕರಣದಲ್ಲಿ ಸಿಎಂ, ಅವರ ಕುಟುಂಬದವರ ಪಾತ್ರ ಇದೆ, ಎಫ್‌ಐಆರ್‌ ಸಹ ದಾಖಲಾಗಿದೆ. ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.

ಕಾಂಗ್ರೆಸ್‌ ಪುಢಾರಿಗಳು ಅನೇಕ ಬಾರಿ ಬಿಜೆಪಿ ಕಚೇರಿ ಎದುರು ಬಂದು ಪ್ರತಿಭಟನೆ ಮಾಡುತ್ತಿದ್ದಾರೆ. ಅವರಿಗೆ ಹೋರಾಟ ಮಾಡುವ ಚಟ ಇದ್ದರೆ, ಫ್ರೀಡಂ ಪಾರ್ಕ್‌ಗೆ ಹೋಗಿ ಮಾಡಲಿ. ಆದರೆ, ಬಿಜೆಪಿ ಕಚೇರಿ ಎದುರು ಪದೇಪದೇ ಗೂಂಡಾ ವರ್ತನೆ ಮಾಡುವುದು ಸರಿಯಲ್ಲ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಇದನ್ನು ಗಮನಿಸಲಿ, ಬಿಜೆಪಿ ಕಚೇರಿ ಎದುರು ಅವರ ಕಾರ್ಯಕರ್ತರ ಪ್ರತಿಭಟನೆ ತಪ್ಪಿಸಲಿ ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ ಶಾಸಕರಿಗೆ 50 ಕೋಟಿ ಅನುದಾನ ನೀಡಿಕೆ ಕುರಿತು ಪ್ರತಿಕ್ರಿಯಿಸಿದ ವಿಜಯೇಂದ್ರ, 50 ಕೋಟಿ ಅವರಿಗೂ ಇನ್ನೂ ಕೊಟ್ಟಿಲ್ಲ. ಅಧಿವೇಶನ ನಡೆಯುತ್ತಿದೆ. ಹಾದಿಬೀದಿಯಲ್ಲಿ ಅವರ ಸರ್ಕಾರದ ಬಗ್ಗೆ ಶಾಸಕರು ಮಾತನಾಡುತ್ತಿದ್ದಾರೆ. ಅಧಿವೇಶನ ಸುಸೂತ್ರವಾಗಿ ನಡೆಯಬೇಕು ಎಂದು ಅನುದಾನ ಘೋಷಣೆ ಅಷ್ಟೇ ಮಾಡಿದ್ದಾರೆ. ತಪ್ಪಿಸಿಕೊಳ್ಳುವ ಕುತಂತ್ರ ಕೂಡ ಇದರಲ್ಲಿದೆ. ಹಣ ಬಿಡುಗಡೆ ಮಾಡುವ ಬಗ್ಗೆ ಘೋಷಣೆ ಅಷ್ಟೇ ಇದು. ಯಾವುದೇ ಕಾರಣಕ್ಕೂ ಹಣ ಬಿಡುಗಡೆ ಮಾಡುವುದಿಲ್ಲ ಎಂದರು.

ರಾಜ್ಯದಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಸಮಸ್ಯೆ ವಿಚಾರವಾಗಿ, ರಾಜ್ಯ ಸರ್ಕಾರ, ಸಿಎಂ, ಕೃಷಿ ಸಚಿವರು ಇದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಈಗಲೂ ಕಾಲ ಮಿಂಚಿಲ್ಲ. ರೈತರಿಗೆ ಅನುಕೂಲ ಆಗುವಂತೆ ಕ್ರಮ ವಹಿಸಬೇಕು. ಕೂಡಲೇ ಸಿಎಂ, ಕೃಷಿ ಸಚಿವರು, ಉಸ್ತುವಾರಿ ಸಚಿವರು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

error: No Copying!