
ಕಾಪು: ದಿನಾಂಕ 22/07/2025 (ಹಾಯ್ ಉಡುಪಿ ನ್ಯೂಸ್) ಕೈಪುಂಜಾಲಿನ ಬೊಬ್ಬರ್ಯ ದೈವಸ್ಥಾನದ ಹತ್ತಿರದ ಬೀಚ್ ಬದಿಯ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ನಡೆಸುತ್ತಿದ್ದ ಸ್ಥಳಕ್ಕೆ ಕಾಪು ಪೊಲೀಸ್ ಠಾಣೆಯ ಪಿಎಸ್ಐ ಯವರಾದ ತೇಜಸ್ವಿ ಟಿ.ಐ ಯವರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಾಪು ಪೊಲೀಸ್ ಠಾಣೆ ಪಿಎಸ್ಐ ತೇಜಸ್ವಿ ಟಿ ಐ ರವರು ದಿನಾಂಕ :21-07-2025 ರಂದು ಸಂಜೆ ಠಾಣೆಯಲ್ಲಿದ್ದ ಸಮಯ ಮಾಹಿತಿದಾರರೊಬ್ಬರು ಕರೆ ಮಾಡಿ, ಉಳಿಯಾರಗೋಳಿ ಗ್ರಾಮದ ಕೈಪುಂಜಾಲಿನ ಬೊಬ್ಬರ್ಯ ದೈವಸ್ಥಾನದ ಹತ್ತಿರ ಬೀಚ್ ಬದಿಯ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನ ಸೇರಿಕೊಂಡು ಕೋಳಿಗಳ ಕಾಲುಗಳಿಗೆ ಬಾಳು (ಚಿಕ್ಕ ಕತ್ತಿ)ಗಳನ್ನು ಕಟ್ಟಿ, ಕೋಳಿಗಳ ಮೇಲೆ ಹಣವನ್ನು ಪಣವಾಗಿರಿಸಿ ಹಿಂಸಾತ್ಮಕವಾಗಿ ಕೋಳಿ ಅಂಕ ನಡೆಸುತ್ತಿರುವುದಾಗಿ ಮಾಹಿತಿ ನೀಡಿದ್ದು ಪಿ.ಎಸ್.ಐ ತೇಜಸ್ವಿ ರವರು ಠಾಣೆಯ ಸಿಬ್ಬಂದಿಗಳಾದ ಉಮೇಶ, ಮರಿಗೌಡ, ಹರೀಶ್ ಬಾಬು ಮತ್ತು ಲೋಕೇಶ, ಚಾಲಕ ಜಗದೀಶ ರವರೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ ದಾಳಿ ನಡೆಸಿದಾಗ ಕೈಪುಂಜಾಲು ಬೊಬ್ಬರ್ಯ ದೈವಸ್ಥಾನದ ಬಳಿಯ ಬೀಚ್ ಸಮೀಪದ ಖಾಲಿ ಜಾಗದಲ್ಲಿ ಕೆಲವು ಜನರು ಸೇರಿಕೊಂಡು ಕೋಳಿಗಳ ಕಾಲುಗಳಿಗೆ ಬಾಳುಗಳನ್ನು ಕಟ್ಟಿ, ಕೋಳಿಗಳ ಮೇಲೆ ಹಣವನ್ನು ಪಣವಾಗಿರಿಸಿ ಕೋಳಿ ಅಂಕ ನಡೆಸುತ್ತಿರುವುದು ಕಂಡು ಬಂದಿರುತ್ತದೆ ಎನ್ನಲಾಗಿದೆ.
ಸ್ಥಳದಲ್ಲಿ ಇದ್ದವರಲ್ಲಿ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಒಬ್ಬನು ಉಳಿಯಾರಗೋಳಿ ಗ್ರಾಮದ ವಿಜ್ಜು ಯಾನೆ ವಿಜಯ ಎಂದೂ, ಮತ್ತೊಬ್ಬನು ಫಣಿಯೂರಿನ ಅನಿಲ್ ಕುಮಾರ್ ಎಂದೂ ತಿಳಿಸಿದ್ದು, ಉಳಿದವರ ಪರಿಚಯ ಇರುವುದಿಲ್ಲ ಎಂದೂ ಹೇಳಿರುತ್ತಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ದಾಳಿ ನಡೆಸಿದ ಪಿ.ಎಸ್.ಐ ಹಾಗೂ ಸಿಬ್ಬಂದಿಯವರನ್ನು ಜೂಜಾಡುತ್ತಿದ್ದ ಜನರು ನೋಡಿ ಅಲ್ಲಿದ್ದ ಕೋಳಿಗಳು ಮತ್ತು ಬಾಳುಗಳ ಸಮೇತ ಅಲ್ಲಿಂದ ಓಡಿ ಹೋಗಿರುತ್ತಾರೆ ಎನ್ನಲಾಗಿದೆ. ಸಿಬ್ಬಂದಿಯವರು ಅವರನ್ನು ಬೆನ್ನಟ್ಟಿದರೂ ಆರೋಪಿತರು ಸಿಗದೆ ಅಲ್ಲಿಂದ ಪರಾರಿಯಾಗಿರುತ್ತಾರೆ ಎಂದು ದೂರು ದಾಖಲಿಸಿದ್ದಾರೆ.
ಸ್ಥಳದಲ್ಲಿದ್ದ ಸತ್ತ ಹುಂಜ-1, ಗಾಯಗೊಂಡ ಜೀವಂತ ಹುಂಜ-1 ಮತ್ತು ಕೈ ಚೀಲ-1 ನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಕಲಂ: 11 (1) (a) (n) Prevention of Cruelty to Animals Act. ಮತ್ತು 87 K P Act ರಂತೆ ಪ್ರಕರಣ ದಾಖಲಾಗಿದೆ.