
ದಿನಾಂಕ:17-07-2025(ಹಾಯ್ ಉಡುಪಿ ನ್ಯೂಸ್) ಮಂಗಳೂರು: ಧರ್ಮಸ್ಥಳ ರಹಸ್ಯ ಅಂತ್ಯಸಂಸ್ಕರ ಪ್ರಕರಣವು ದಕ್ಷಿಣ ಕನ್ನಡ ಪೊಲೀಸರು ಮತ್ತು ಸಾಕ್ಷಿ ದೂರುದಾರರ ಪರ ವಕೀಲರ ನಡುವೆ ಘರ್ಷಣೆಗೆ ವೇದಿಕೆಯಾಗಿದೆ. ದೂರುದಾರ ಸಾಕ್ಷಿಗೆ ರಕ್ಷಣೆ ನೀಡುವುದಾಗಿ ಹೇಳಿದ ಕೆಲವು ದಿನಗಳ ನಂತರ, ಪೊಲೀಸರು ಆತ ಎಲ್ಲಿದ್ದಾನೆ ಗೊತ್ತಿಲ್ಲ ಎಂದು ಹೇಳಿದ್ದು ಈ ಹೇಳಿಕೆಯನ್ನು ಅವರ ಪರ ವಕೀಲರು ತೀವ್ರವಾಗಿ ಪ್ರಶ್ನಿಸಿದ್ದಾರೆ.
ಸಾಕ್ಷಿ ದೂರದಾರ ಇರುವ ಜಾಗ ನಮಗೆ ಗೊತ್ತಿಲ್ಲ. ಆದ್ದರಿಂದ ದೈಹಿಕ ರಕ್ಷಣೆ ನೀಡುವುದು ಅಸಾಧ್ಯವೆಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ಹೇಳಿದ್ದಾರೆ. ಸಾಕ್ಷಿ ರಕ್ಷಣಾ ಯೋಜನೆಯ ನಿಯಮ 7 ಅನ್ನು ಉಲ್ಲೇಖಿಸಿ, ರಕ್ಷಣೆಯನ್ನು ಜಾರಿಗೊಳಿಸಲು ಸಾಕ್ಷಿಯ ಒಪ್ಪಿಗೆ ಮತ್ತು ಸಕ್ರಿಯ ಸಹಕಾರ ಎರಡೂ ಅಗತ್ಯವಿದೆ ಎಂದು ಹೇಳಿದ್ದಾರೆ. ಅವುಗಳಲ್ಲಿ ಯಾವುದೂ ಆಗಲಿಲ್ಲ ಎಂದು ಅವರು ಹೇಳಿದರು. ಜುಲೈ 10ರಂದು ದೂರುದಾರರ ವಕೀಲರಿಗೆ ರಕ್ಷಣೆ ನೀಡಲು ಅಗತ್ಯವಾದ ಕಾರ್ಯವಿಧಾನಗಳನ್ನು ಪೊಲೀಸರು ಔಪಚಾರಿಕವಾಗಿ ತಿಳಿಸಿದ್ದರು. ಆದರೆ ಅಂದಿನಿಂದ ನಮ್ಮ ನಡುವಿನ ಸಂವಹನವು ಇಮೇಲ್‌ಗೆ ಸೀಮಿತವಾಗಿದೆ. ದೂರುದಾರನ ಪ್ರಸ್ತುತ ಸ್ಥಳದ ಬಗ್ಗೆ ಯಾವುದೇ ನಿರ್ದಿಷ್ಟ ಮಾಹಿತಿಯನ್ನು ಒದಗಿಸಲಾಗಿಲ್ಲ ಎಂದು ಎಸ್ ಪಿ ತಿಳಿಸಿದರು.
ದೂರುದಾರನ ಪರ ವಕೀಲರು ಎಫ್‌ಐಆರ್ ಮತ್ತು ದೂರಿನ ಪ್ರತಿಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದರ ಬಗ್ಗೆಯೂ ಪೊಲೀಸರು ಕಳವಳ ವ್ಯಕ್ತಪಡಿಸಿದರು. ಇದರಿಂದಾಗಿ ಸಾಕ್ಷಿಯ ಗುರುತನ್ನು ರಕ್ಷಿಸುವ ಪ್ರಯತ್ನಗಳನ್ನು ದುರ್ಬಲಗೊಳಿಸಿದೆ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ದೂರುದಾರನ ಕೋರಿಕೆಯ ಮೇರೆಗೆ ಮಾಹಿತಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ವಕೀಲರು ತಿಳಿಸಿರುವುದಾಗಿ ವರದಿಯಾಗಿದೆ.
ಪೊಲೀಸ್ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ದೂರುದಾರನ ಪರ ವಕೀಲರಾದ ಧೀರಜ್ ಎಸ್‌ಜೆ ಮತ್ತು ಅನನ್ಯಾ ಗೌಡ, ಕಾನೂನು ತಂಡವು ಹೇಳಿಕೆಗೆ ಪ್ರತಿಯಾಗಿ ವಿವರವಾದ ಹೇಳಿಕೆಯನ್ನು ಬಿಡುಗಡೆ ಮಾಡಿತು. ಪೊಲೀಸ್ ವರಿಷ್ಠಾಧಿಕಾರಿಯ ಸಾರ್ವಜನಿಕ ಹೇಳಿಕೆಗಳಿಂದ ಆಶ್ಚರ್ಯಚಕಿತರಾಗಿದ್ದಾಗಿ ವಕೀಲರು ಹೇಳಿದರು. ದೂರುದಾರ ಆರಂಭದಲ್ಲಿ ಪೊಲೀಸರನ್ನು ಸಂಪರ್ಕಿಸಲಿಲ್ಲ. ಆದರೆ ಧರ್ಮಸ್ಥಳದಲ್ಲಿ ನಡೆದಿದ್ದ ಘಟನೆಗಳ ನೈತಿಕ ಬಾಧ್ಯತೆ ಮತ್ತು ಘೋರ ಅನ್ಯಾಯವೆಂದು ನಂಬಿದ್ದರಿಂದಾಗಿ ದೂರದಾರ ಅದನ್ನು ಸರಿಪಡಿಸುವ ಬಯಕೆಯಿಂದ ಮಾತ್ರ ಮುಂದೆ ಬಂದಿದ್ದಾಗಿ ವಕೀಲರು ಹೇಳಿದರು. ದೂರಿನ ವಿವರಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ತನ್ನ ವಕೀಲರಿಗೆ ಸೂಚಿಸುವ ದೂರುದಾರನ ಆಯ್ಕೆಯು ಜಾಗೃತಿ ಮೂಡಿಸುವ ಉದ್ದೇಶಪೂರ್ವಕ ಮತ್ತು ಪ್ರಜ್ಞಾಪೂರ್ವಕ ಕ್ರಿಯೆಯಾಗಿದೆ. ಭದ್ರತೆಯನ್ನು ರಾಜಿ ಮಾಡಿಕೊಳ್ಳಲು ಅಲ್ಲ ಎಂದು ವಕೀಲರು ಒತ್ತಿ ಹೇಳಿದ್ದಾರೆ.