
ದಿನಾಂಕ:15-07-2025(ಹಾಯ್ ಉಡುಪಿ ನ್ಯೂಸ್)
ಮಂಗಳೂರು: ಧರ್ಮಸ್ಥಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ಮೃತದೇಹಗಳನ್ನು ಹೂತು ಹಾಕಿದ್ದೇನೆ ಎಂದು ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡಿದ್ದ ವ್ಯಕ್ತಿಯೋರ್ವನ ಹೇಳಿಕೆ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ. ಇದರ ಬೆನ್ನಲ್ಲೇ 60 ವರ್ಷದ ಸುಜಾತಭಟ್ಎಂಬ ಮಹಿಳೆಯೊಬ್ಬರು 2003ರಲ್ಲಿ ಧರ್ಮಸ್ಥಳದಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದ ತನ್ನ ಮಗಳು ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯ ಭಟ್ ಅವರ ಕಳೆಬರಹವನ್ನು ಪತ್ತೆಹಚ್ಚಲು ನೆರವಾಗುವಂತೆ ಧರ್ಮಸ್ಥಳ ಪೊಲೀಸರಿಗೆ ಮನವಿ ನೀಡಿದ್ದಾರೆ.
ಬೆಂಗಳೂರಿನ ಪದ್ಮನಾಭನಗರ ನಿವಾಸಿ ಮತ್ತು ಕೇಂದ್ರ ತನಿಖಾ ದಳದ (CBI) ನಿವೃತ್ತ ಸ್ಟೆನೋಗ್ರಾಫರ್ ಸುಜಾತಾ ಭಟ್ ತಮ್ಮ ದೂರಿನಲ್ಲಿ ತಮ್ಮ ಮಗಳು ಅಂದು ನಾಪತ್ತೆಯಾದ ಘಟನೆಗಳನ್ನು ವಿವರಿಸಿದ್ದಾರೆ. 2003ರಲ್ಲಿ ಮಣಿಪಾಲ ವೈದ್ಯಕೀಯ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದ ತಮ್ಮ ಪುತ್ರಿ ಅನನ್ಯಾ ಸ್ನೇಹಿತರೊಂದಿಗೆ ಧರ್ಮಸ್ಥಳ ದೇವಸ್ಥಾನಕ್ಕೆ ಹೋಗಿದ್ದಳು. ಅನನ್ಯಾ ಅವರ ಸಹಪಾಠಿ ರಶ್ಮಿ ಅವರಿಂದ ಸುಜಾತಾ ಅವರಿಗೆ ದುಃಖಕರ ಕರೆ ಬಂದಿತ್ತು. ಧರ್ಮಸ್ಥಳದಲ್ಲಿ ಅನನ್ಯಾ ಕಾಣೆಯಾಗಿದ್ದಾಳೆ ಎಂದು ಹೇಳಿದಳು.
ಸುಜಾತಾ ಕಾಲೇಜು ಹಾಸ್ಟೆಲ್‌ಗೆ ಸಂಪರ್ಕಿಸಿದಾಗ, ಅನನ್ಯಾ ಎರಡು ಮೂರು ದಿನಗಳಿಂದ ಕಾಣಲಿಲ್ಲ ಎಂದು ನನಗೆ ತಿಳಿಸಿದರು. ಹೀಗಾಗಿ ಕೋಲ್ಕತ್ತಾದಿಂದ ಧರ್ಮಸ್ಥಳಕ್ಕೆ ಬಂದ ಸುಜಾತಾ ತಮ್ಮ ಮಗಳ ಫೋಟೋವನ್ನು ಸ್ಥಳೀಯರು ಮತ್ತು ದೇವಾಲಯದ ಸಿಬ್ಬಂದಿಗೆ ತೋರಿಸುತ್ತಾ ಹುಡುಕಾಟ ನಡೆಸಿದರು. ಕೆಲವು ದಿನಗಳ ಹಿಂದೆ ಅನನ್ಯಾ ಅವರ ವಿವರಣೆಗೆ ಹೊಂದಿಕೆಯಾಗುವ ಯುವತಿಯೊಬ್ಬಳನ್ನು ದೇವಾಲಯದ ಸಿಬ್ಬಂದಿ ಕರೆದೊಯ್ದಿದ್ದನ್ನು ನೋಡಿದ್ದೇವೆ ಎಂದು ಕೆಲ ಸ್ಥಳೀಯರು ತನಗೆ ತಿಳಿಸಿದರು. ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಔಪಚಾರಿಕ ದೂರು ದಾಖಲಿಸಲು ಸುಜಾತಾ ಮಾಡಿದ ಪ್ರಯತ್ನಗಳು ಸಫಲವಾಗಲಿಲ್ಲ. ಅಧಿಕಾರಿಗಳು ನನ್ನ ದೂರನ್ನು ಸ್ವೀಕರಿಸಲು ನಿರಾಕರಿಸಿದರು. ಅಲ್ಲದೆ ನನ್ನ ಮಗಳೇ ಯಾರೊಂದಿಗೋ ಓಡಿಹೋಗಿರಬೇಕು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ನನ್ನನ್ನು ಠಾಣೆಯಿಂದ ಹೊರಗೆ ಕಳುಹಿಸಿದರು ಎಂದು ಸುಜಾತಾ ಹೇಳಿದ್ದಾರೆ.
ನಂತರ ನಾನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಸಂಪರ್ಕಿಸಿದೆ. ಆದರೆ ಯಾವುದೇ ಸಹಾಯ ಸಿಗಲಿಲ್ಲ. ಆ ರಾತ್ರಿ ಹತಾಶೆಯಿಂದ ದೇವಾಲಯದ ಹೊರಗೆ ಕುಳಿತಿದ್ದಾಗ ಬಿಳಿ ಬಟ್ಟೆ ಧರಿಸಿದ ಕೆಲವು ಪುರುಷರು ತಮಗೆ ಈ ಬಗ್ಗೆ ಮಾಹಿತಿ ಇದೆ ಎಂದು ಹೇಳಿಕೊಂಡು ನನ್ನ ಬಳಿ ಬಂದರು. ನಂತರ ನನ್ನನ್ನು ಅಪಹರಿಸಿ, ಕಟ್ಟಿಹಾಕಿ, ಬಾಯಿ ಮುಚ್ಚಿ, ದೇವಾಲಯದ ಬಳಿ ಕತ್ತಲೆಯ ಕೋಣೆಯಲ್ಲಿ ರಾತ್ರಿಯಿಡೀ ಇರಿಸಿದ್ದರು. ಈ ವೇಳೆ ನನಗೆ ಬಾಯಿ ಮುಚ್ಚಿಕೊಂಡು ಇರುವಂತೆ ಬೆದರಿಸಿದರು. ಅಷ್ಟಕ್ಕೆ ಸುಮ್ಮನಾಗದೇ ನನ್ನ ಮೇಲೆ ಹಲ್ಲೆ ನಡೆಸಿದರು. ನನ್ನ ತಲೆಗೆ ಬಲವಾಗಿ ಹೊಡೆದಿದ್ದರಿಂದ ನಾನು ಮೂರು ತಿಂಗಳ ಕಾಲ ಕೋಮಾದಲ್ಲಿದೆ. ನಂತರ ಬೆಂಗಳೂರಿನ ಆಸ್ಪತ್ರೆಗೆ ನನ್ನನ್ನು ಸಾಗಿಸಲಾಗಿತ್ತು. ಆದರೆ ಇದು ನನಗೆ ನೆನಪಿಲ್ಲ. ನನ್ನ ಐಡಿ ಕಾರ್ಡ್, ಬ್ಯಾಂಕ್ ದಾಖಲೆಗಳು ಮತ್ತು ವೈಯಕ್ತಿಕ ವಸ್ತುಗಳು ಸೇರಿದಂತೆ ನನ್ನ ಹಲವು ವಸ್ತುಗಳು ಕಾಣೆಯಾಗಿದ್ದವು. ನನ್ನ ತಲೆಗೆ ಬಲವಾಗಿ ಹೊಡೆದಿದ್ದರಿಂದ ಎಂಟು ಹೊಲಿಗೆಯನ್ನು ಹಾಕಲಾಗಿತ್ತು ಎಂದು ಸುಜಾತಾ ಹೇಳಿದ್ದಾರೆ.
ಈಗ, ಸ್ವಚ್ಛತಾ ಕಾರ್ಮಿಕನ ಆಘಾತಕಾರಿ ತಪ್ಪೊಪ್ಪಿಗೆ ವರದಿಯಾಗಿದ್ದು ಮಾನವನ ತಲೆಬುರುಡೆಯು ಸಿಕ್ಕಿದೆ. ತನ್ನ ಮಗಳು ಮೃತರಲ್ಲಿ ಒಬ್ಬಳಾಗಿರಬಹುದು ಎಂದು ಸುಜಾತಾ ನಂಬಿದ್ದಾರೆ. ಧರ್ಮನಿಷ್ಠ ಹಿಂದೂ ಬ್ರಾಹ್ಮಣಳಾಗಿ, ತನ್ನ ಮಗಳ ಅಂತಿಮ ವಿಧಿಗಳನ್ನು ಮಾಡಲು ಸಾಧ್ಯವಾಗದಿದ್ದಕ್ಕಾಗಿ ಸುಜಾತಾ ತೀವ್ರ ದುಃಖವನ್ನು ವ್ಯಕ್ತಪಡಿಸಿದರು. ನನ್ನ ಮಗಳ ಅಂತ್ಯಕ್ರಿಯೆಯ ವಿಧಿಗಳನ್ನು ಘನತೆಯಿಂದ ನಡೆಸಲು ಸಾಧ್ಯವಾಗುವಂತೆ ಅವಳ ಕಳೆಬರಹವನ್ನು ಮರಳಿ ಪಡೆಯಲು ನನಗೆ ಸಹಾಯ ಮಾಡುವಂತೆ ನಾನು ಅಧಿಕಾರಿಗಳಲ್ಲಿ ಬೇಡಿಕೊಳ್ಳುತ್ತೇನೆ. ಅಗತ್ಯವಿದ್ದರೆ, ನಾನು ಪಾಲಿಗ್ರಾಫ್ ಪರೀಕ್ಷೆಗೆ ಒಳಗಾಗಲು ಸಿದ್ಧನಿದ್ದೇನೆ ಎಂದು ಸುಜಾತಾ ಹೇಳಿದ್ದಾರೆ.