
ದಿನಾಂಕ:11-07-2025(ಹಾಯ್ ಉಡುಪಿ ನ್ಯೂಸ್)
ಬೆಂಗಳೂರು : 3 ದಶಕಗಳಿಂದ ಕಾಲೇಜು–ವಿಶ್ವವಿದ್ಯಾಲಯಗಳಲ್ಲಿ ಸ್ಥಗಿತಗೊಂಡಿರುವ ವಿದ್ಯಾರ್ಥಿ ಒಕ್ಕೂಟಗಳ ಕ್ಯಾಂಪಸ್ ಚುನಾವಣೆಗಳನ್ನು ಪುನರಾರಂಭಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ವಿದ್ಯಾರ್ಥಿ ಸಂಘಗಳು ಸೇರಿದಂತೆ ವಿವಿಧ ಸಂಘಟನೆಗಳು ಕಾಲೇಜು ಚುನಾವಣೆಗಳನ್ನು ನಡೆಸಬೇಕೆಂಬ ಬೇಡಿಕೆ ಇಟ್ಟಿದ್ದು, ವಿದ್ಯಾರ್ಥಿಗಳು ಮತ್ತು ವಿಶ್ವವಿದ್ಯಾಲಯಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವ ಚುನಾಯಿತ ವಿದ್ಯಾರ್ಥಿ ಸಂಘಟನೆ ಇರಬೇಕು ಎಂದು ತಿಳಿಸಿದೆ.
ಕರ್ನಾಟಕದಲ್ಲಿ, 1990 ರಲ್ಲಿ ವೀರೇಂದ್ರ ಪಾಟೀಲ್ ಅವರ ಅವಧಿಯಲ್ಲಿ ಬೆಂಗಳೂರಿನ ಕಾಲೇಜು ಕ್ಯಾಂಪಸ್‌ಗಳಲ್ಲಿ ಹಿಂಸಾಚಾರ ವರದಿಯಾದ ಬಳಿಕ ಕಾಲೇಜು ಕ್ಯಾಂಪಸ್ ಚುನಾವಣೆಗಳನ್ನು ನಿಷೇಧಿಸಲಾಗಿತ್ತು.
ಇದೀಗ ವಿದ್ಯಾರ್ಥಿ ಸಂಘಟನೆ ಮನವಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಲೇಜು ಕ್ಯಾಂಪಸ್‌ಗಳಲ್ಲಿ ಚುನಾವಣೆಗಳನ್ನು ನಡೆಸಲು ಅವಕಾಶ ನೀಡುವಂತೆ ಒತ್ತಾಯಿಸಿದ್ದು, ಸಿದ್ದರಾಮಯ್ಯ ಅವರು ಕೂಡ ಈ ಬಗ್ಗೆ ಚಿಂತನೆ ನಡೆಸುತ್ತಿದ್ದರೆಂದು ತಿಳಿದುಬಂದಿದೆ.
ಈ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರಬಹುದು ಎಂದು ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.ಕಾಲೇಜುಗಳಲ್ಲಿ ಚುನಾವಣೆ ನಡೆಸುವ ಕುರಿತು ನಾವೂ ಕೂಡ ರಾಹುಲ್ ಗಾಂಧಿಯವರಿಗೆ ಮನವಿ ಮಾಡಿದ್ದೇವೆ. ಕೇವಲ ಕರ್ನಾಟಕ ಮಾತ್ರವಲ್ಲ. ಯಾವೆಲ್ಲಾ ರಾಜ್ಯಗಳಲ್ಲಿ ಕಾಲೇಜು ಕ್ಯಾಂಪಸ್ ಚುನಾವಣೆಗಳು ಸ್ಥಗಿತಗೊಂಡಿದೆಯೋ ಅಲೆಲ್ಲಾ ಚುನಾವಣೆ ಆರಂಭಿಸಲು ಧ್ವನಿಯೆತ್ತುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಕಾಲೇಜುಗಳಿಗೆ ನುಸುಳಿದ್ದು, ತನ್ನ ನೀತಿಗಳನ್ನು ಹೇರುತ್ತಿದೆ. ಉಪಕುಲಪತಿ ಮತ್ತು ಸೆನೆಟ್ ಸದಸ್ಯರ ಮೇಲೂ ಹಿಡಿತ ಸಾಧಿಸುತ್ತಿದ್ದಾರೆ. ಪ್ರಸ್ತುತ ಕಾಲೇಜು ಕ್ಯಾಂಪಸ್ ಗಳಲ್ಲಿ ಯಾವುದೇ ಸಂಘಟನೆಗಳಿಗೂ ಅವಕಾಶ ನೀಡಲಾಗಿಲ್ಲ. ಹೀಗಾಗಿ ಕಾಲೇಜು ಕ್ಯಾಂಪಸ್ ಚುನಾವಣೆಗಳ ಅಗತ್ಯವಿದೆ. ಇದರಿಂದ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಸಾಧ್ಯವಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಇದೀಗ ತನ್ನ ವಿದ್ಯಾರ್ಥಿ ಘಟಕವಾದ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾವನ್ನು ಬಲಪಡಿಸಲು ಬಯಸುತ್ತಿದ್ದು, ಸರ್ಕಾರಿ ಆದೇಶ ಹೊರಡಿಸಿ ನಂತರ ಚುನಾವಣೆ ನಡೆಸಲು ಅವಕಾಶ ನೀಡಲಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಕಾಲೇಜು ಕ್ಯಾಂಪಸ್ ಚುನಾವಣೆಗಳನ್ನು ಕೊನೆಯದಾಗಿ 1990 ರಲ್ಲಿ ನಡೆಸಲಾಗಿತ್ತು. ಇದೀಗ ವ್ಯವಸ್ಥೆಗಳು ಬದಲಾಗಿದೆ, ಅನೇಕ ಖಾಸಗಿ ವಿಶ್ವವಿದ್ಯಾಲಯಗಳು ರಾಜ್ಯದಲ್ಲಿ ತಲೆ ಎತ್ತುತ್ತಿವೆ. ಸರ್ಕಾರ ಆದೇಶ ಹೊರಡಿಸಿದರೂ ಖಾಸಗಿ ಕಾಲೇಜುಗಳು ಮತ್ತು ಖಾಸಗಿ ವಿಶ್ವವಿದ್ಯಾಲಯಗಳು ಇದಕ್ಕೆ ಪ್ರೋತ್ಸಾಹ ನೀಡದಿರಬಹುದು. ಹೀಗಾಗಿ ಸರ್ಕಾರಿ ಕಾಲೇಜುಗಳಲ್ಲಿ ಮಾತ್ರ ಈ ಚುನಾವಣೆಗಳು ನಡೆಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.