ದಿನಾಂಕ:12-07-2025(ಹಾಯ್ ಉಡುಪಿ ನ್ಯೂಸ್)
ಬೆಂಗಳೂರು: ತಾವರೆಕೆರೆಯಲ್ಲಿ ವರದಿಯಾಗಿದ್ದ ಅಪ್ರಾಪ್ತ ಬಾಲಕಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಯಲ್ಲಪ್ಪ (22) ಬಂಧಿತ ಆರೋಪಿ. ಬಾಲಕಿಯ ಮನೆಯ ಬಳಿ ಕೆಲಸ ಮಾಡುತ್ತಿದ್ದ ಆರೋಪಿ ಆಕೆಯ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ.
ಬಾಲಕಿಯ ಪೋಷಕರು ಕಟ್ಟಡ ನಿರ್ಮಾಣ ಕಾರ್ಮಿಕರಾಗಿದ್ದು, ಪ್ರತಿದಿನ ಬೆಳಿಗ್ಗೆ 8 ಗಂಟೆ ಸುಮಾರಿಗೆ ಕೆಲಸಕ್ಕೆಂದು ಮನೆಯಿಂದ ಹೊರಡುತ್ತಿದ್ದರು. ಬಾಲಕಿ 6ನೇ ತರಗತಿಯ ನಂತರ ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದಳು. ಇನ್ನು ಬಾಲಕಿಯ ಸಹೋದರರು ಶಾಲೆಗೆ ಹೋಗುತ್ತಿದ್ದ ಹಿನ್ನೆಲೆಯಲ್ಲಿ ಮನೆಯಲ್ಲಿ ಬಾಲಕಿ ಒಬ್ಬಂಟಿಯಾಗಿರುವುದನ್ನು ಆರೋಪಿ ಕಂಡುಕೊಂಡಿದ್ದ ಎನ್ನಲಾಗಿದೆ.
ಮಾದಕ ವಸ್ತುವಿನ ಪ್ರಭಾವದಲ್ಲಿ ಆರೋಪಿ ಅಪರಾಧ ಎಸಗಿದ್ದಾನೆನ್ನಲಾಗಿದೆ. ಬಾಲಕಿ ಮೇಲೆ ಅತ್ಯಾಚಾರವೆಸಗಿರುವ ಆರೋಪಿ, ನಂತರ ಆಕೆಯ ತಲೆಗೆ ಸಿಲಿಂಡರ್ ನಿಂದ ಹೊಡೆದು, ಹತ್ಯೆ ಮಾಡಿದ್ದಾನೆ. ನಂತರ ಸಿಲಿಂಡರನ್ನು ಹೊತ್ತೊಯ್ದಿದ್ದು, ತಾವರೆಕೆರೆಯಲ್ಲಿ ಅದನ್ನು ಮಾರಾಟ ಮಾಡಿದ್ದಾನೆ ಎನ್ನಲಾಗಿದೆ.
ಬುಧವಾರ ಮಧ್ಯಾಹ್ನ 1 ರಿಂದ 2 ಗಂಟೆಯ ನಡುವೆ ಈ ಘಟನೆ ನಡೆದಿದೆ. ಬಾಲಕಿಯ ಸಹೋದರ ಶಾಲೆಯಿಂದ ಮನೆಗೆ ಹಿಂದಿರುಗಿದ ನಂತರ ಘಟನೆ ಬೆಳಕಿಗೆ ಬಂದಿದೆ.
ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾರೆ.