
ದಿನಾಂಕ:09-07-2025(ಹಾಯ್ ಉಡುಪಿ ನ್ಯೂಸ್)
ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದರು.
ಇಂದು ಮಧ್ಯಾಹ್ನ ದೆಹಲಿಯಲ್ಲಿ ರಕ್ಷಣಾ ಸಚಿವರನ್ನು ಭೇಟಿ ಮಾಡಿದ ಸಿಎಂ, ಈ ಬಾರಿ ಮೈಸೂರು ದಸರಾ ಮಹೋತ್ಸವದಲ್ಲಿ ಆಕರ್ಷಣೆಯಾಗಿ ವೈಮಾನಿಕ ಪ್ರದರ್ಶನ ಏರ್ಪಡಿಸುವ ಬಗ್ಗೆ ಚರ್ಚೆ ನಡೆಸಿದರು.
ಇದೇ ವೇಳೆ ಬೆಂಗಳೂರಿನಲ್ಲಿ ಡಿಫೆನ್ಸ್ ಕಾರಿಡಾರ್, ಅಭಿವೃದ್ಧಿ ಕಾಮಗಾರಿಗಳಿಗೆ ರಕ್ಷಣಾ ಇಲಾಖೆಯ ಜಾಗ ನೀಡುವ ಕುರಿತು ಸಿಎಂ ಸಿದ್ದರಾಮಯ್ಯ ಅವರು ರಾಜನಾಥ್ ಸಿಂಗ್ ಅವರೊಂದಿಗೆ ಸಮಾಲೋಚನೆ ನಡೆಸಿದರು.
ರಾಜನಾಥ್ ಸಿಂಗ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, “ನಾನು ರಕ್ಷಣಾ ಸಚಿವರನ್ನು ಭೇಟಿಯಾಗಿ ಮೂರು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿದೆ” ಎಂದು ಹೇಳಿದ್ದಾರೆ.
ಸೆಪ್ಟೆಂಬರ್ ಅಂತ್ಯದಲ್ಲಿ ನಡೆಯುವ ಮೈಸೂರು ದಸರಾ ಉತ್ಸವದಲ್ಲಿ ಪ್ರಮುಖ ಕಾರ್ಯಕ್ರಮವಾಗಿರುವ ಏರ್ ಶೋ ನಡೆಸುವ ಬಗ್ಗೆ ಚರ್ಚಿಸಿದೆ. “ನಾವು ಪ್ರತಿ ವರ್ಷ ದಸರಾ ಹಬ್ಬದ ಸಮಯದಲ್ಲಿ ಏರ್ ಶೋ ಆಯೋಜಿಸುತ್ತೇವೆ. ಈ ವರ್ಷವೂ ಅದನ್ನು ಆಯೋಜಿಸುವಂತೆ ಕೇಂದ್ರವನ್ನು ವಿನಂತಿಸಿದ್ದೇವೆ” ಎಂದು ಸಿಎಂ ತಿಳಿಸಿದರು.
ತಮಿಳುನಾಡು ಮತ್ತು ಉತ್ತರ ಪ್ರದೇಶದಂತೆಯೇ ಕರ್ನಾಟಕಕ್ಕೂ ರಕ್ಷಣಾ ಕಾರಿಡಾರ್ ನೀಡುವಂತೆ ಕೋರಿದ್ದೇವೆ. ರಾಜ್ಯದಲ್ಲಿ ಸುರಂಗ ಯೋಜನೆ, ವಿಮಾನ ನಿಲ್ದಾಣ ಬಳ್ಳಾರಿ ರಸ್ತೆಯಲ್ಲಿ ಲಿಂಕ್ ರಸ್ತೆ ಮತ್ತು ಫ್ಲೈಓವರ್ ಡಬಲ್ ಡೆಕ್ಕರ್ ರಸ್ತೆ ಸೇರಿದಂತೆ ಮೂರು ಪ್ರಮುಖ ಯೋಜನೆಗಳ ಅನುಷ್ಠಾನಕ್ಕಾಗಿ ರಕ್ಷಣಾ ಇಲಾಖೆಯ ಭೂಮಿ ನೀಡುವಂತೆ ಕೇಳಿದ್ದೇವೆ ಎಂದರು.
“ರಾಜನಾಥ್ ಸಿಂಗ್ ಅವರು ಏರ್ ಶೋಗೆ ಒಪ್ಪಿಕೊಂಡಿದ್ದಾರೆ. ಆದರೆ ಇತರ ಪ್ರಸ್ತಾಪಗಳಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ” ಎಂದು ಸಿಎಂ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಅಪಾಯಿಂಟ್ಮೆಂಟ್ ಸಿಕ್ಕರೆ ಭೇಟಿಯಾಗುವುದಾಗಿ ಸಿಎಂ ಹೇಳಿದರು.
ಈ ವೇಳೆ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್, ಸಚಿವರಾದ ಕೆ.ಜೆ. ಜಾರ್ಜ್, ಬೈರತಿ ಸುರೇಶ್, ಕೈಗಾರಿಕಾ ಸಚಿವರಾದ ಎಂ.ಬಿ. ಪಾಟೀಲ್, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ. ಜಯಚಂದ್ರ ಅವರು ಹಾಜರಿದ್ದರು.