Spread the love

ದಿನಾಂಕ:06-07-2025(ಹಾಯ್ ಉಡುಪಿ ನ್ಯೂಸ್)

ಮುಂಬೈ: ಸುಮಾರು 20 ವರ್ಷಗಳ ನಂತರ ಸೋದರ ಸಂಬಂಧಿಗಳಾದ ಉದ್ಧವ್ ಮತ್ತು ರಾಜ್ ಠಾಕ್ರೆ ಶನಿವಾರ ಮತ್ತೆ ಒಂದಾದರು.

ಮಹಾರಾಷ್ಟ್ರದ ಶಾಲೆಗಳಲ್ಲಿ 1 ನೇ ತರಗತಿಯಿಂದ ಹಿಂದಿಯನ್ನು ಮೂರನೇ ಭಾಷೆಯಾಗಿ ಪರಿಚಯಿಸುವ ವಿವಾದಾತ್ಮಕ ಯೋಜನೆಯನ್ನು ಸರ್ಕಾರ ರದ್ದುಗೊಳಿಸಿರುವುದರ ಹಿನ್ನೆಲೆಯಲ್ಲಿ ಆಯೋಜಿಸಿದ್ದ ‘ಮರಾಠಿ ವಿಜಯೋತ್ಸವ ರ್‍ಯಾಲಿ’ಯಲ್ಲಿ ಇಬ್ಬರು ಸಹೋದರರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದರು.

ಈ ವೇಳೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಿರುದ್ಧ ವ್ಯಂಗ್ಯಭರಿತವಾಗಿ ಟೀಕಾ ಪ್ರಹಾರ ನಡೆಸಿದ ಮಹಾರಾಷ್ಟ್ರ ನವನಿರ್ಮಾಣ ಸೇನೆಯ (MNS)ಮುಖ್ಯಸ್ಥ ರಾಜ್ ಠಾಕ್ರೆ, ನಮ್ಮನ್ನು ಮತ್ತೆ ಒಂದುಗೂಡಿಸಿದ ಕೀರ್ತಿ ಫಡ್ನವೀಸ್ ಅವರಿಗೆ ಸಲ್ಲಬೇಕು ಎಂದರು. ಶಿವಸೇನಾ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ, ಪುನರ್ ಮಿಲನ ಸಾಂಕೇತಿಕಕ್ಕಿಂತಲೂ ಹೆಚ್ಚಾಗಿರುತ್ತದೆ. ನಾವು ಒಟ್ಟಾಗಿ ಇರುತ್ತೇವೆ ಎಂದು ಹೇಳುವ ಮೂಲಕ ಸಂಭವನೀಯ ರಾಜಕೀಯ ಮೈತ್ರಿಯ ಬಗ್ಗೆ ಸುಳಿವು ನೀಡಿದರು.

ವಿಜಯೋತ್ಸವ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಜ್ ಠಾಕ್ರೆ, ಯಾವುದೇ ರಾಜಕೀಯಕ್ಕಿಂತ ನನ್ನ ಮಹಾರಾಷ್ಟ್ರವೇ ದೊಡ್ಡದು. ಅದಕ್ಕಾಗಿ ಹೋರಾಡುತ್ತೇನೆ ಎಂದು ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದೆ. ಈಗ 20 ವರ್ಷಗಳ ನಂತರ ಉದ್ಧವ್ ಮತ್ತು ನಾನು ಒಟ್ಟಾಗಿದ್ದೇವೆ. ಬಾಳಾಸಾಹೇಬರು ಮಾಡಲಾಗದ್ದನ್ನು ದೇವೇಂದ್ರ ಫಡ್ನವಿಸ್ ಮಾಡಿದ್ದಾರೆ. ನಮ್ಮಿಬ್ಬರನ್ನೂ ಒಟ್ಟಿಗೆ ಸೇರಿಸುವ ಕೆಲಸ ಮಾಡಿದ್ದಾರೆ. ಮರಾಠಿಗರು ತೋರಿದ ಬಲವಾದ ಒಗ್ಗಟ್ಟಿನಿಂದಾಗಿ ಸರ್ಕಾರವು ತ್ರಿಭಾಷಾ ಸೂತ್ರವನ್ನು ರದ್ದುಗೊಳಿಸಿದೆ ಎಂದು ತಿಳಿಸಿದರು.

“ನನಗೆ ಹಿಂದಿಯ ವಿರುದ್ಧ ಏನೂ ಇಲ್ಲ, ಯಾವುದೇ ಭಾಷೆ ಕೆಟ್ಟದ್ದಲ್ಲ. ಭಾಷೆ ಕಟ್ಟಲು ಸಾಕಷ್ಟು ಶ್ರಮ ಪಡಬೇಕು. ಮರಾಠಾ ಸಾಮ್ರಾಜ್ಯದ ಅವಧಿಯಲ್ಲಿ ಮರಾಠಿಗರು ಸಾಕಷ್ಟು ರಾಜ್ಯಗಳನ್ನು ಆಳಿದ್ದೆವು, ಆದರೆ ಆ ಭಾಗಗಳಲ್ಲಿ ನಾವು ಮರಾಠಿಯನ್ನು ಎಂದಿಗೂ ಜಾರಿಗೊಳಿಸಲಿಲ್ಲ. ಅವರೇ ಹಿಂದಿಯನ್ನು ನಮ್ಮ ಮೇಲೆ ಹೇರಲು ಆರಂಭಿಸಿದರು. ನಾವು ಅದನ್ನು ವಿರೋಧಿಸದಿದ್ದರೆ ಮಹಾರಾಷ್ಟ್ರದಿಂದ ಮುಂಬೈಯನ್ನು ಪ್ರತ್ಯೇಕಿಸಲು ಪ್ರಯತ್ನಿಸಿದರು ಎಂದು ಅವರು ಹೇಳಿದರು.

ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮಾತನಾಡಿ, ಬಿಜೆಪಿಯವರು ಈಗಾಗಲೇ ನಮ್ಮನ್ನು ಸಾಕಷ್ಟು ಬಳಸಿಕೊಂಡಿದ್ದೀರಿ. ಬಾಳಾಸಾಹೇಬ್ ಠಾಕ್ರೆ ಅವರ ಬೆಂಬಲ ನಿಮಗೆ ಇಲ್ಲದಿದ್ದರೆ, ಮಹಾರಾಷ್ಟ್ರದಲ್ಲಿ ನಿಮ್ಮನ್ನು ಯಾರು ತಿಳಿದಿದ್ದರು? ನಮಗೆ ಹಿಂದುತ್ವದ ಬಗ್ಗೆ ಕಲಿಸಲು ನೀವು ಯಾರು? ಎಂದು ವಾಗ್ದಾಳಿ ನಡೆಸಿದರು.

ಮುಂಬೈನಲ್ಲಿ ಗಲಭೆಗಳು ಸಂಭವಿಸಿದಾಗ, ಮರಾಠಿಗರಾದ ನಾವು ಮಹಾರಾಷ್ಟ್ರದ ಪ್ರತಿಯೊಬ್ಬ ಹಿಂದೂವನ್ನು ರಕ್ಷಿಸಿದ್ದೇವೆ. ಮರಾಠಿಗರು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾಗ ಅವರನ್ನು ಗುಂಡಾಗಳು ಎಂದು ನೀವು ಕರೆದಿದ್ದರೆ ನಾವು ಗುಂಡಾಗಳೇ ಎಂದರು.

“ತಮಗೆ ಒಂದು ಸಂವಿಧಾನ, ಒಂದು ಚಿಹ್ನೆ ಮತ್ತು ಒಬ್ಬ ಪ್ರಧಾನಿ ಬೇಕು ಎಂದು ಬಿಜೆಪಿ ಹೇಳುವಾಗ, ತ್ರಿವರ್ಣ ಧ್ವಜ ಮಾತ್ರ ಒಂದೇ ಚಿಹ್ನೆಯಾಗಿದೆ. ಪಾತ್ರೆಗಳನ್ನು ಸ್ವಚ್ಛಗೊಳಿಸಲು ಬಳಸುವ ಬಟ್ಟೆಯ ತುಂಡು ಬಿಜೆಪಿಯ ಧ್ವಜವಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಕಿಡಿಕಾರಿದರು.ಕಳೆದ 11 ವರ್ಷಗಳ ನಿಮ್ಮ ಆಡಳಿತದಲ್ಲಿ ನೀವು ಏನು ಮಾಡಿದ್ದೀರಿ? ಎಂದು ಪ್ರಶ್ನಿಸಿದ ಉದ್ಧವ್ ಠಾಕ್ರೆ, BMC ಸಂಸ್ಥೆಯನ್ನು ಗುಜರಾತ್‌ಗೆ ತಳ್ಳಿದ್ದೀರಿ. ಉದ್ಯಮಗಳು ಗುಜರಾತ್‌ಗೆ ವರ್ಗಾವಣೆಯಾಗುತ್ತಿವೆ. ದೊಡ್ಡ ದೊಡ್ಡ ಕಚೇರಿಗಳು ಗುಜರಾತ್‌ಗೆ ಹೋಗುತ್ತಿವೆ. ವಜ್ರದ ವ್ಯಾಪಾರ ಈಗಾಗಲೇ ಗುಜರಾತ್‌ಗೆ ಸ್ಥಳಾಂತರಗೊಂಡಿದೆ. ಮಹಾರಾಷ್ಟ್ರದ ಬೆನ್ನೆಲುಬು ಮುರಿಯಲು ಪ್ರಯತ್ನಿಸುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

ಕಳೆದ 11 ವರ್ಷಗಳ ನಿಮ್ಮ ಆಡಳಿತದಲ್ಲಿ ನೀವು ಏನು ಮಾಡಿದ್ದೀರಿ? ಎಂದು ಪ್ರಶ್ನಿಸಿದ ಉದ್ಧವ್ ಠಾಕ್ರೆ, BMC ಸಂಸ್ಥೆಯನ್ನು ಗುಜರಾತ್‌ಗೆ ತಳ್ಳಿದ್ದೀರಿ. ಉದ್ಯಮಗಳು ಗುಜರಾತ್‌ಗೆ ವರ್ಗಾವಣೆಯಾಗುತ್ತಿವೆ. ದೊಡ್ಡ ದೊಡ್ಡ ಕಚೇರಿಗಳು ಗುಜರಾತ್‌ಗೆ ಹೋಗುತ್ತಿವೆ. ವಜ್ರದ ವ್ಯಾಪಾರ ಈಗಾಗಲೇ ಗುಜರಾತ್‌ಗೆ ಸ್ಥಳಾಂತರಗೊಂಡಿದೆ. ಮಹಾರಾಷ್ಟ್ರದ ಬೆನ್ನೆಲುಬು ಮುರಿಯಲು ಪ್ರಯತ್ನಿಸುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

ಸಾವಿರಾರು ಶಿವಸೇನೆ (ಯುಬಿಟಿ) ಮತ್ತು ಎಂಎನ್‌ಎಸ್ ಬೆಂಬಲಿಗರು ರ್‍ಯಾಲಿಯ ಸ್ಥಳಕ್ಕೆ ಮೆರವಣಿಗೆಗೆ ಆಗಮಿಸಿದರು. ಸುಮಾರು 20 ವರ್ಷಗಳ ನಂತರ ಸೋದರ ಸಂಬಂಧಿಗಳನ್ನು ಒಟ್ಟಿಗೆ ನೋಡಿ ಕಣ್ತುಂಬಿಕೊಂಡರು.ಸ್ಥಳದಲ್ಲಿ ಉಭಯ ನಾಯಕರ ಕಟೌಟ್ ಗಳು, ಪ್ಲೆಕ್ಸ್ ಗಳು, ಪಕ್ಷಗಳ ಧ್ವಜಗಳು ರಾರಾಜಿಸಿದವು. ಎರಡೂ ಪಕ್ಷಗಳ ಬೆಂಬಲಿಗರು ಮುಖ್ಯ ದ್ವಾರವನ್ನು ಮುರಿದು ಕಾರ್ಯಕ್ರಮ ಆಯೋಜನೆ ಸ್ಥಳಕ್ಕೆ ಆಗಮಿಸಿದಾಗ ಗೊಂದಲ ಉಂಟಾಗಿತ್ತು. ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ಆಯೋಜನೆ ಮೂಲಕ ಪರಿಸ್ಥಿತಿ ನಿಭಾಯಿಸಲಾಯಿತು.

error: No Copying!