Spread the love

ದಿನಾಂಕ 04-07-2025 (ಹಾಯ್ ಉಡುಪಿ ನ್ಯೂಸ್)

ಮಂಗಳೂರು: ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ), ಕಳೆದ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಶುಕ್ರವಾರ ಬಂಧಿಸಿದೆ.

ಇಂದು ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕತಾರ್‌ನಿಂದ ಆಗಮಿಸಿದ ಆರೋಪಿ ಅಬ್ದುಲ್ ರೆಹಮಾನ್ ನನ್ನು ಎನ್‌ಐಎ ತಂಡ ವಶಕ್ಕೆ ತೆಗೆದುಕೊಂಡಿದೆ.

ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ ಈಗಾಗಲೆ ಎನ್‌ಐಎ 21 ಆರೋಪಿಗಳನ್ನು ಬಂಧಿಸಿದ್ದು, ಇದೀಗ ಇನ್ನೋರ್ವ ಪ್ರಮುಖ ಆರೋಪಿ ಅಬ್ದುಲ್ ರೇಹಮಾನ್ ನನ್ನು ಬಂಧಿಸಿದೆ.

ಬಂಧಿತ ಆರೋಪಿ ಅಬ್ದುಲ್ ರೆಹಮಾನ್ ಪಿಎಫ್‌ಐ ನಾಯಕರ ನಿರ್ದೇಶನದ ಮೇರೆಗೆ ಪ್ರಮುಖ ದಾಳಿಕೋರರಿಗೆ ಮತ್ತು ಪ್ರಕರಣದಲ್ಲಿ ಭಾಗಿಯಾಗಿದ್ದ ಇತರರಿಗೆ ಸ್ವಯಂಪ್ರೇರಣೆಯಿಂದ ಆಶ್ರಯ ನೀಡಿದ್ದಾನೆ ಎಂದು ತನಿಖೆಯಿಂದ ಬಹಿರಂಗವಾಗಿದೆ. ಈತನ ಸುಳಿವು ನೀಡಿದರೆ 4 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಎನ್ಐಎ ಘೋಷಿಸಿತ್ತು.

ಜುಲೈ 26, 2022 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಷೇಧಿತ ಸಂಘಟನೆಯಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸದಸ್ಯರು ನೆಟ್ಟಾರು ಅವರನ್ನು ಹರಿತವಾದ ಆಯುಧಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅಬ್ದುಲ್ ರೆಹಮಾನ್‌ನನ್ನು ಎನ್‌ಐಎ ಬಂಧಿಸಿದೆ. ನೆಟ್ಟಾರು ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 28 ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಸಿದೆ.

error: No Copying!