Spread the love

ದಿನಾಂಕ:02-07-2025(ಹಾಯ್ ಉಡುಪಿ ನ್ಯೂಸ್)

ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯನ್ನು ಭಾಗ್ಯನಗರ ಎಂದು ಮರು ನಾಮಕರಣ ಮಾಡಲು ಹಾಗೂ ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಡಾ.ಮನಮೋಹನ್ ಸಿಂಗ್ ಅವರ ಹೆಸರಿಡಲು ಬುಧವಾರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ನಂದಿ ಗಿರಿಧಾಮದಲ್ಲಿ ತಮ್ಮ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ದೇಶದ ಪ್ರಧಾನಿಗಳಾಗಿದ್ದಾಗ ಬೆಂಗಳೂರು ನಗರದ ಅಭಿವೃದ್ಧಿಗೆ ಸಾಕಷ್ಟು ಯೋಜನೆ ಮತ್ತು ಕೊಡುಗೆಗಳನ್ನು ನೀಡಿದ್ದ ಆರ್ಥಿಕ ತಜ್ಞ ಡಾ. ಮನಮೋಹನ್‌ ಸಿಂಗ್‌ ಅವರನ್ನು ಸ್ಮರಿಸಿ, ಗೌರವಿಸುವ ಕೆಲಸ ಮಾಡುವುದು ಒಂದು ಸರ್ಕಾರವಾಗಿ ಮಾತ್ರವಲ್ಲ, ಕನ್ನಡಿಗನಾಗಿಯೂ ನನ್ನ ಕರ್ತವ್ಯ ಎಂದರು.

ಈ ನಿಟ್ಟಿನಲ್ಲಿ ಇಂದು ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಲು ತೀರ್ಮಾನಿಸಲಾಗಿದೆ ಎಂದರು.

ಶೇ.90 ರಷ್ಟು ಬೆಂಗಳೂರು ವಿಭಾಗದ ವಿಷಯಗಳನ್ನೇ ಈ ವಿಶೇಷ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಂಡಿದ್ದೇವೆ. ಒಟ್ಟು 48 ವಿಷಯಗಳು ಚರ್ಚೆಯಾಗಿದ್ದು, 3,400 ಕೋಟಿ ರೂ. ಮೊತ್ತವನ್ನು ಮಂಜೂರು ಮಾಡಿದ್ದೇವೆ. ಈ ಪೈಕಿ 2,050 ಕೋಟಿ ರೂ. ಬೆಂಗಳೂರು ಜಿಲ್ಲಾ ಭಾಗಕ್ಕೆ ಕೊಟ್ಟಿದ್ದೇವೆ ಎಂದು ಸಿಎಂ ತಿಳಿಸಿದರು.

ಎತ್ತಿನಹೊಳೆ ಯೋಜನೆಗೆ ಒಟ್ಟು 23,251 ಕೋಟಿ ಪರಿಷ್ಕೃತ ಅಂದಾಜು ಮಾಡಲಾಗಿದ್ದು, ಇಲ್ಲಿಯವರೆಗೂ 17,147 ಕೋಟಿ ರೂ. ಖರ್ಚಾಗಿದೆ.

ಮೂಲತಃ ಕುಡಿಯುವ ನೀರಿನ ಯೋಜನೆ ಇದಾಗಿದೆ. ಕೆರೆಗಳಿಗೆ ನೀರು ತುಂಬಿಸುವುದು ನಂತರದ ಆದ್ಯತೆ. 24.1 TMC ನೀರಿನಲ್ಲಿ ಕುಡಿಯುವ ನೀರಿಗೆ 14 TMC ಬೇಕಾಗಿದೆ. ಆದ್ದರಿಂದ ಮೊದಲು ಕುಡಿಯುವ ನೀರನ್ನು ಕೊಡುವ ಯೋಜನೆ ಮುಗಿಸಲು ಸಂಪುಟ ಸಭೆ ತೀರ್ಮಾನ ಮಾಡಿದೆ. ಎರಡು ವರ್ಷಗಳಲ್ಲಿ ಉದ್ದೇಶಿತ ಜಿಲ್ಲೆ, ತಾಲ್ಲೂಕುಗಳಿಗೆ ನೀರು ಕೊಡುತ್ತೇವೆ ಎಂದರು.

9,807 ಕೋಟಿ ರೂ. ಮೊತ್ತದಲ್ಲಿ ಗ್ರಾವಿಟಿ ಮುಖ್ಯ ಕೆನಲ್ ನ‌ ಕೆಲಸ ಶೇ. 85 ರಷ್ಟು ಮಗಿದಿದೆ. ಹೆಚ್ಚುವರಿಯಾಗಿ ಇದಕ್ಕೆ 8,000 ಕೋಟಿ ಬೇಕಾಗಿದೆ. ಬಾಕಿ ಉಳಿದಿರುವುದು ಸುಮಾರು 6,000 ಕೋಟಿ ರೂ. ಒಟ್ಟು 9 ಜಿಲ್ಲೆಗಳ 75 ಲಕ್ಷ ಜನರಿಗೆ ಕುಡಿಯುವ ನೀರು ಕೊಡುತ್ತೇವೆ ಎಂದರು.

ಬೆಂಗಳೂರು ಜಿಲ್ಲೆಗಳ 31 ವಿಷಯಗಳು ಚರ್ಚೆಯಾಗಿದ್ದು, 2,250 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ. ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ನೀರಾವರಿ ಯೋಜನೆ, ಕೆರೆ ತುಂಬಿಸುವ ಯೋಜನೆಗಳನ್ನೇ ಪ್ರಮುಖವಾಗಿ ಚರ್ಚಿಸಲಾಗಿದೆ ಎಂದು ಸಿಎಂ ತಿಳಿಸಿದರು.

ಪ್ರತೀ ಜಿಲ್ಲೆಯಲ್ಲಿ ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆ ನಿರ್ಮಿಸಲು ತೀರ್ಮಾನಿಸಲಾಗಿದ್ದು, ಇದಕ್ಕೆ 1,125.25 ಕೋಟಿ ಮಂಜೂರು ಮಾಡಲಾಗಿದೆ.

ಹಿಂದುಳಿದ ವರ್ಗದ ಅಭ್ಯರ್ಥಿಗಳು IAS, IRS, IPS ಸೇರಿ ಸ್ಪರ್ಧಾತ್ಮಕ ಪರೀಕ್ಷಾ‌ ತರಬೇತಿಗೆ 10 ಕೋಟಿ ರೂ. ವೆಚ್ಚದ ಎರಡು ವಸತಿ ಶಾಲೆಗಳನ್ನು ಬೆಂಗಳೂರಿನಲ್ಲಿ ನಿರ್ಮಿಸಲಾಗುವುದು ಎಂದರು.

ಪ್ರಾಥಮಿಕ‌ ಆರೋಗ್ಯ ಕೇಂದ್ರಗಳಿಲ್ಲದ ಹೊಸ ತಾಲ್ಲೂಕುಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳನ್ನು ಆರಂಭಿಸಲು ತೀರ್ಮಾನ ಮಾಡಿದ್ದೇವೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ “ಬೆಂಗಳೂರು ಉತ್ತರ” ಹಾಗೂ ಬಾಗೇಪಲ್ಲಿಗೆ “ಭಾಗ್ಯನಗರ” ಎಂದು ಹೆಸರಿಡಲಾಗುವುದು ಎಂದು ಸಿಎಂ ಹೇಳಿದರು.

ನಾವು ಆಡಳಿತವನ್ನು ಬೆಂಗಳೂರು ಕೇಂದ್ರಿತ ಎಂಬುದನ್ನು ತಪ್ಪಿಸಿ ವಿಕೇಂದ್ರೀಕರಣ ಮಾಡುವುದಕ್ಕಾಗಿಯೆ ಆಯಾ ಭಾಗದ ಸಮಸ್ಯೆಗಳ ಮೇಲೆ ಗಮನ ಹರಿಸಿ, ಅವುಗಳಿಗೆ ಪರಿಹಾರ ನೀಡುವ ಉದ್ದೇಶದಿಂದ ಸಚಿವ ಸಂಪುಟ ಸಭೆಗಳನ್ನು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆಸುತ್ತಿದ್ದೇವೆ. ಮೊದಲಿಗೆ ಕಲ್ಬುರ್ಗಿಯಲ್ಲಿ, ಆ ನಂತರ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಸಿದ್ದೆವು. ಮೂರನೆಯದಾಗಿ ನಂದಿ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಸುತ್ತಿದ್ದೇವೆ.

ಈ ಸಚಿವ ಸಂಪುಟ ಸಭೆಯಲ್ಲಿ ನಾವು ಒಟ್ಟು 3,400 ಕೋಟಿಗಳಿಗೆ ಅನುಮೋದನೆ ನೀಡಿದ್ದೇವೆ. ಈ ಸಭೆಯಲ್ಲಿ ಆರೋಗ್ಯ, ಶಿಕ್ಷಣ, ಕೃಷಿ, ತೋಟಗಾರಿಕೆ, ನೀರಾವರಿ, ಪ್ರವಾಸೋದ್ಯಮ, ರಸ್ತೆ- ಸೇತುವೆ ಮುಂತಾದ ವಿಷಯಗಳಿಗೆ ಆದ್ಯತೆ ನೀಡಿ ಅನುಮೋದನೆ ನೀಡಲಾಗಿದೆ ಎಂದರು.

error: No Copying!