
ದಿನಾಂಕ:29-06-2025(ಹಾಯ್ ಉಡುಪಿ ನ್ಯೂಸ್) ಮಂಗಳೂರು: ಪುತ್ತೂರಿನ ಬಿಜೆಪಿ ಮುಖಂಡರೊಬ್ಬರ ಪುತ್ರ ಕೃಷ್ಣ ರಾವ್ ಎಂಬುವನ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದ್ದು ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಂತ್ರಸ್ತ ಯುವತಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
ತನ್ನ ಸಹಪಾಠಿ ವಿದ್ಯಾರ್ಥಿನಿಯನ್ನು ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದ ಆರೋಪಿ ಕೃಷ್ಣ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದನು. ಆಕೆ ಗರ್ಭಿಣಿ ಆಗಿರುವ ವಿಚಾರ ತಿಳಿದ ಕೂಡಲೇ ಕೃಷ್ಣ ಮದುವೆಯಾಗಲು ನಿರಾಕರಿಸಿದ್ದಾನೆ. ಈ ಸಂಬಂಧ ಇದೀಗ ಯುವತಿ, ಪುತ್ತೂರು ಮಹಿಳಾ ಠಾಣೆಗೆ ದೂರು ನೀಡಿದ್ದು, ದೂರು ದಾಖಲಿಸಿಕೊಂಡಿರುವ ಪೊಲೀಸರು ಅತ್ಯಾಚಾರಿ ಕೃಷ್ಣನ ಪತ್ತೆಗೆ ಬಲೆ ಬೀಸಿದ್ದಾರೆ.
ಸಂತ್ರಸ್ತ ಯುವತಿ ಹಾಗೂ ಆರೋಪಿ ಕೃಷ್ಣ ಪುತ್ತೂರಿನಲ್ಲಿ ಹೈಸ್ಕೂಲ್ನಲ್ಲಿ ಓದುವಾಗ ಪರಸ್ಪರ ಪ್ರೀತಿಸುತ್ತಿದ್ದರು. ನಂತರ ಇಬ್ಬರೂ ಮಂಗಳೂರಿನ ಖಾಸಗಿ ಕಾಲೇಜಿಗೆ ಸೇರಿಕೊಂಡಿದ್ದರು. 2024ರ ಅಕ್ಟೋಬರ್ 11ರಂದು ರೇಪಿಸ್ಟ್ ಕೃಷ್ಣ ಮನೆಯಲ್ಲಿ ಯಾರೂ ಇಲ್ಲದಾಗ ಯುವತಿಯನ್ನು ಮನೆಗೆ ಕರೆಸಿಕೊಂಡು ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ ಎನ್ನಲಾಗಿದೆ. ನಂತರ 2025ರ ಜನವರಿ ತಿಂಗಳಿನಲ್ಲಿ ಮತ್ತೆ ಬಲವಂತವಾಗಿ ದೈಹಿಕ ಸಂಪರ್ಕ ಮಾಡಿದ್ದನು. ತಾನು ಗರ್ಭೀಣಿ ಆಗಿರುವ ವಿಚಾರವನ್ನು ಯುವತಿ ಕೃಷ್ಣ ರಾವ್ ಗೆ ತಿಳಿಸಿದ್ದಾಳೆ. ಆಗಲೂ ಮದುವೆ ಆಗಲು ಕೃಷ್ಣ ರಾವ್ ನಿರಾಕರಿಸಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಇದರಿಂದ ನೊಂದ ಯುವತಿ ಜೂನ್ 24ರಂದು ರಾತ್ರಿ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿರುವ ವಿಚಾರ ತಿಳಿಯುತ್ತಿದ್ದಂತೆ ಆರೋಪಿ ವಂಚಕ ಕೃಷ್ಣ ರಾವ್ ತಲೆ ಮರೆಸಿಕೊಂಡಿದ್ದಾನೆ. ಸದ್ಯ ಪೊಲೀಸರು ಆತನ ಪತ್ತೆಗಾಗಿ ಬಲೆ ಬೀಸಿದ್ದಾರೆ. ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ 64(1) ಹಾಗೂ 69ರ ಅಡಿಯಲ್ಲಿ ಪ್ರಕರಣ ದಾಖಲಿಸಿ, ತಲೆಮರೆಸಿಕೊಂಡಿರುವ ಆರೋಪಿ ಅತ್ಯಾಚಾರಿ ಕೃಷ್ಣ ರಾವ್ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.