
ದಿನಾಂಕ:15-06-2025(ಹಾಯ್ ಉಡುಪಿ ನ್ಯೂಸ್)
ಪುಣೆ: ಮಹಾರಾಷ್ಟ್ರದ ಪುಣೆ ಬಳಿಯ ಇಂದ್ರಾಯಣಿ ನದಿ ಸೇತುವೆಯೊಂದು ಭಾನುವಾರ ಕುಸಿದು ಬಿದ್ದಿದ್ದು, ಇಬ್ಬರು ಪ್ರವಾಸಿಗರು ಮೃತಪಟ್ಟಿರುವುದಾಗಿ ವರದಿಯಾಗಿದೆ.
ಪಿಂಪ್ರಿ-ಚಿಂಚ್‌ವಾಡ್ ಜಿಲ್ಲೆಯ ಮಾವಲ್ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಕುಂದಮಾಲಾ ಗ್ರಾಮದ ಬಳಿ ಈ ಘಟನೆ ನಡೆದಿದೆ. ರಮಣೀಯ ಜಲಪಾತ ಮತ್ತು ನದಿ ದಡದಿಂದ ಪ್ರತಿವರ್ಷ ನೂರಾರು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಇಂದು ಕೂಡಾ ಹೆಚ್ಚಾಗಿ ಪ್ರವಾಸಿಗರು ಆಗಮಿಸಿದ ವೇಳೆಯಲ್ಲಿ ಈ ದುರ್ಘಟನೆ ನಡೆದಿದೆ.
5 ರಿಂದ 6 ಜನರನ್ನು ರಕ್ಷಿಸಲಾಗಿದೆ. ಇನ್ನೂ 10 ರಿಂದ 15 ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ ಇದೆ ಎಂದು ಪಿಂಪ್ರಿ-ಚಿಂಚ್‌ವಾಡ್ ಪೊಲೀಸರು ತಿಳಿಸಿದ್ದಾರೆ.
ಇದಕ್ಕಿದ್ದಂತೆ ಸೇತುವೆ ಕುಸಿದು ಬಿದ್ದಿದೆ.. ಕಳೆದ ಎರಡು ದಿನಗಳಿಂದ ಸುರಿದ ಮಳೆಯಿಂದ ತುಂಬಿ ಹರಿಯುತ್ತಿದ್ದ ನದಿಗೆ ಡಜನ್ ಮಂದಿ ಇಳಿದಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನೆ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ, 32 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಆರು ಜನರ ಪರಿಸ್ಥಿತಿ ಗಂಭೀರವಾಗಿದೆ. ಇಲ್ಲಿಯವರೆಗೂ ಆರು ಜನರನ್ನು ರಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.