
ದಿನಾಂಕ:12-06-2025(ಹಾಯ್ ಉಡುಪಿ ನ್ಯೂಸ್)
ಬೆಂಗಳೂರು: ಕಾಂಗ್ರೆಸ್ ನಾಯಕರನ್ನೇ ನಿರ್ದಿಷ್ಟವಾಗಿ ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ತನ್ನ ಹೆಸರನ್ನು ಕಾಂಗ್ರೆಸ್ ವಿರೋಧಿ ನಿರ್ದೇಶನಾಲಯ ಎಂದು ಬದಲಾಯಿಸಿಕೊಳ್ಳುವುದು ಸೂಕ್ತ ಎಂದು ಸಚಿವ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಜಾರಿ ನಿರ್ದೇಶನಾಲಯದ ಪ್ರೈಮ್ ಟಾರ್ಗೆಟ್ ಕಾಂಗ್ರೆಸ್ ನಾಯಕರೇ ಹೊರತು ಬಿಜೆಪಿಯವರಲ್ಲ ಎಂದಿದ್ದಾರೆ .
ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು ಜಾರಿ ನಿರ್ದೇಶನಾಲಯ ಮತ್ತೆ ದಾಳಿ ನಡೆಸಿದೆ. ಜಾರಿ ನಿರ್ದೇಶನಾಲಯದ ವೈಶಿಷ್ಟ್ಯವೇನೆಂದರೆ ಅದು ದಾಳಿ ಮಾಡುವುದು ಬಿಜೆಪಿಯೇತರ ನಾಯಕರ ಮೇಲೆ ಮಾತ್ರ. ಇಲ್ಲಿಯವರೆಗೂ ED ಬಿಜೆಪಿ ನಾಯಕರ ತಂಟೆಗೆ ಹೋಗಿಲ್ಲ. ಹೋಗುವುದೂ ಇಲ್ಲ. ಇದೊಂದು ವಿಸ್ಮಯ ಎಂದು ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ ನಾಯಕರನ್ನೇ ನಿರ್ಧಿಷ್ಟವಾಗಿ ಗುರಿಯಾಗಿಸಿಕೊಂಡು ದಾಳಿ ನಡೆಸುವ ಜಾರಿ ನಿರ್ದೇಶನಾಲಯ ತನ್ನ ಹೆಸರನ್ನು ಕಾಂಗ್ರೆಸ್ ವಿರೋಧಿ ನಿರ್ದೇಶನಾಲಯ ಎಂದು ಬದಲಾಯಿಸಿಕೊಳ್ಳುವುದು ಸೂಕ್ತ ಎಂದಿದ್ದಾರೆ. ಇತ್ತೀಚೆಗಷ್ಟೆ ತಮಿಳುನಾಡಿನ TASMAC ಹಗರಣದಲ್ಲಿ ED ನಡೆಯನ್ನು ಸುಪ್ರೀಂ ಕೋರ್ಟ್ ಕಟು ಮಾತುಗಳಲ್ಲಿ ಟೀಕಿಸಿದೆ. ED ಎಲ್ಲಾ ಮಿತಿಗಳನ್ನು ಮೀರುತ್ತಿದೆ ಎಂದು ಸುಪ್ರೀಂ ಎಚ್ಚರಿಕೆ ನೀಡಿದೆ. ಆದರೂ ED ಅಧಿಕಾರಿಗಳು BJP ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಾಂವಿಧಾನಿಕ ತನಿಖಾ ಸಂಸ್ಥೆಯಾದ EDಯನ್ನು ಮೋದಿ ಸರ್ಕಾರ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ED ರಾಜಕೀಯ ಪಕ್ಷವೊಂದರ ಆಜ್ಞಾಪಾಲಕರಾದರೆ ಆ ಸಂಸ್ಥೆಗೆ ಸಾಂವಿಧಾನಿಕ ಪಾವಿತ್ರ್ಯತೆ ಇರಲು ಹೇಗೆ ಸಾಧ್ಯ.? ಆ ಸಂಸ್ಥೆಯಿಂದ ಪ್ರಜಾಪ್ರಭುತ್ವದ ಮೌಲ್ಯ ಉಳಿಯಲು ಹೇಗೆ ಸಾಧ್ಯ.? ಎಂದು ಪ್ರಶ್ನಿಸಿದ್ದಾರೆ.