
ದಿನಾಂಕ:11-06-2025(ಹಾಯ್ ಉಡುಪಿ ನ್ಯೂಸ್)
ಕಲಬುರಗಿ: ರಾಜ್ಯದಲ್ಲಿ ಸದ್ಯಕ್ಕೆ ಸಚಿವ ಸಂಪುಟ ಪುನಾರಚನೆ ಅಥವಾ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಎಐಸಿಸಿ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಹೇಳಿದರು.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ಸಚಿವ ಸಂಪುಟ ಪುನಾರಚನೆ ಅಥವಾ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ನಿರ್ಧರಿಸಿದಾಗ ತಿಳಿಸುತ್ತೇವೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಂಗಳವಾರ ನವದೆಹಲಿಯಲ್ಲಿ ತಮ್ಮನ್ನು ಹಾಗೂ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾದಾಗ ಕರ್ನಾಟಕದಲ್ಲಿನ ಸಚಿವ ಸಂಪುಟ ಪುನಾರಚನೆ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಕುರಿತು ಯಾವುದೇ ಮಾತುಕತೆ ನಡೆಸಿಲ್ಲ ಎಂದು ಸ್ಪಷ್ಪಪಡಿಸಿದರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಹಾಗೂ ಜಾತಿ ಸಮೀಕ್ಷೆ ಕುರಿತು ಸಭೆಯಲ್ಲಿ ಚರ್ಚಿಸಿದೆವು. ಕಾಲ್ತುಳಿತದ ಘಟನೆ ಕಾಂಗ್ರೆಸ್ ಸೇರಿದಂತೆ ಎಲ್ಲರನ್ನೂ ಆಘಾತಕ್ಕೀಡುಮಾಡಿದೆ. ಹೀಗಾಗಬಾರದಿತ್ತು. ಇಂತಹ ಘಟನೆಗಳು ನಡೆಯದಂತೆ ಮುಂದಿನ ದಿನಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯವರಿಗೆ ಸೂಚಿಸಿದ್ದೇವೆ. ಪೊಲೀಸ್ ಅಧಿಕಾರಿಗಳ ಅಮಾನತು, ಮ್ಯಾಜಿಸ್ಟ್ರೇಟ್ ತನಿಖೆ ಮತ್ತು ನ್ಯಾಯಾಂಗ ತನಿಖೆಗೆ ಆದೇಶ ಮತ್ತು ನೊಂದವರಿಗೆ ಪರಿಹಾರ ಮತ್ತಿತರ ಕ್ರಮಗಳ ಬಗ್ಗೆ ಸಿಎಂ ಮತ್ತು ಉಪ ಮುಖ್ಯಮಂತ್ರಿ ವಿವರಿಸಿದ್ದಾರೆ ಎಂದು ಹೇಳಿದರು.
ಯೋಗಿ ಆದಿತ್ಯನಾಥ್ ರಾಜೀನಾಮೆ ನೀಡಿದ್ದಾರೆಯೇ? ಕಾಲ್ತುಳಿತದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ರಾಜೀನಾಮೆ ನೀಡಬೇಕು ಎಂಬ ಬಿಜೆಪಿಯ ಬೇಡಿಕೆಗೆ ಪ್ರತಿಕ್ರಿಯಿಸಿದ ಖರ್ಗೆ, ಪ್ರಯಾಗ್‌ರಾಜ್ ಕುಂಭಮೇಳದ ವೇಳೆ ಕಾಲ್ತುಳಿತ ಸಂಭವಿಸಿದಾಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜೀನಾಮೆ ನೀಡಿದ್ದಾರೆಯೇ ಎಂದು ಪ್ರಶ್ನಿಸಿದರು. ಕುಂಭಮೇಳದಲ್ಲಿ ಕಾಲ್ತುಳಿತದ ಬಗ್ಗೆ ಪ್ರಶ್ನೆಗಳನ್ನು ಎತ್ತಿದಾಗ ಅವರು ನನ್ನ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದರು ಎಂದು ಖರ್ಗೆ ಹೇಳಿದರು.