
ಹಾವೇರಿ: ದಿನಾಂಕ: 23-05-2025(ಹಾಯ್ ಉಡುಪಿ ನ್ಯೂಸ್) ಜಾಮೀನು ಸಿಕ್ಕ ಬಳಿಕ ಜೈಲಿನಿಂದ ಬಿಡುಗಡೆಯಾಗಿ ಕಾರುಗಳಲ್ಲಿ ರೋಡ್ ಶೋ ಮಾಡಿ ವಿಜಯೋತ್ಸವ ಮಾಡಿದ್ದ ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದ ಏಳು ಆರೋಪಿಗಳನ್ನು ಪೊಲೀಸರು ಮತ್ತೆ ಜೈಲಿಗೆ ಅಟ್ಟಿದ್ದಾರೆ.
ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದ ಪ್ರಮುಖ ಏಳು ಆರೋಪಿಗಳಿಗೆ ಜಾಮೀನು ದೊರೆತ ಬೆನ್ನಿಗೆ ಅವರು ಐದು ಕಾರುಗಳಲ್ಲಿ 20ಕ್ಕೂ ಹೆಚ್ಚು ಹಿಂಬಾಲಕರೊಂದಿಗೆ ವಿಜಯೋತ್ಸವ ರೀತಿಯಲ್ಲಿ ಮೆರವಣಿಗೆ ನಡೆಸಿದ್ದರು.
ಮೂರು ದಿನಗಳ ಹಿಂದೆ, ಹಾವೇರಿ ಸಬ್ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳಾದ ಅಫ್ತಾದ್‌ಚಂದನ ಕಟ್ಟಿ, ಮದರ್‌ಸಾಬ್ ಮಂಡಕ್ಕಿ, ಸಮಿವುಲ್ಲ ಲಾಲನವರ್, ಮೊಹ್ಮದ್ ಸಾದಿಕ್ ಅಗಸಿನಿ, ಶೋಯಿಬ್ ಮುಲ್ಲ, ತೌಸಿಫ್‌ಚೋಟಿ ಮತ್ತು ರಿಯಾಜ್‌ಸೆವಿಕೇರಿ ಇವರುಗಳು ಕಾರುಗಳಲ್ಲಿ, ಬೈಕ್‌ಗಳಲ್ಲಿ ಕುಳಿತು ವಿಜಯೋತ್ಸವದ ರೀತಿಯಲ್ಲಿ ಮೆರವಣಿಗೆ ನಡೆಸಿರುವ ವೀಡಿಯೊಗಳು ವೈರಲ್ ಆಗಿದ್ದವು.
ಆರೋಪಿಗಳ ಈ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ವಿಜಯೋತ್ಸವ ನಡೆಸಿದ್ದ ಆರೋಪಿಗಳಿಗೆ ಪೊಲೀಸರು ಶಾಕ್ ನೀಡಿದ್ದು, ಎಲ್ಲ 7 ಆರೋಪಿಗಳನ್ನು ಬಂಧಿಸಿ ಮತ್ತದೇ ಹಾವೇರಿ ಜೈಲಿಗೆ ಅಟ್ಟಿದ್ದಾರೆ.
ಇನ್ನು ಜಾಮೀನು ಸಿಕ್ಕ ಬೆನ್ನಲ್ಲೇ ಜೈಲಿನಿಂದ ಬಿಡುಗಡೆಯಾಗಿದ್ದ 7 ಆರೋಪಿಗಳು ರೋಡ್ ಶೋ ಮಾಡುವ ಮೂಲಕ ವಿಜಯೋತ್ಸವ ಆಚರಿಸಿದ್ದರು. ಅವರ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಸಬ್ ಜೈಲಿನಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಅವರ ಊರು ಅಕ್ಕಿಹಾಳೂರಿಗೆ ಮೆರವಣಿಗೆ ಏರ್ಪಡಿಸಿದ್ದರು. 10 ಕಾರುಗಳು, 30 ಬೈಕ್ ಗಳು, ಡಿಜೆ ಸಂಗೀತದೊಂದಿಗೆ ದಾರಿಯುದ್ದಕ್ಕೂ ವಿಕ್ಟರಿ ಚಿನ್ಹೆ ತೋರಿಸುತ್ತಾ ಆರೋಪಿಗಳು ರೋಡ್ ಶೋ ಮಾಡಿದ್ದರು. ಅವರ ವಿಜಯೋತ್ಸವದ ವೀಡಿಯೊವನ್ನು ಸಹ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗಿತ್ತು.
ಸಾಮೂಹಿಕ ಅತ್ಯಾಚಾರ ಆರೋಪಿಗಳ ವಿಜಯೋತ್ಸವದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಈ ವಿಚಾರ ಅರಿತ ನ್ಯಾಯಾಲಯ ಪ್ರಕರಣದ ಎಲ್ಲ 7 ಆರೋಪಿಗಳ ಜಾಮೀನು ಅನ್ನು ರದ್ದು ಪಡಿಸಿದೆ. ಈ ಬೆಳವಣಿಗೆ ಬೆನ್ನಲ್ಲೇ ಹಾವೇರಿ ಪೊಲೀಸರು ಎಲ್ಲ 7 ಜನ ಆರೋಪಿಗಳನ್ನು ಮತ್ತೆ ಬಂಧಿಸಿ ಸಬ್ ಜೈಲಿಗೆ ಕಳುಹಿಸಿದ್ದಾರೆ.
ಜಾಮೀನು ನೀಡಿಕೆ ನಿಯಮಗಳನ್ನು ಆರೋಪಿಗಳು ಉಲ್ಲಂಘಿಸಿದ ಹಿನ್ನಲೆಯಲ್ಲಿ ನ್ಯಾಯಾಲಯ ಜಾಮೀನು ರದ್ದು ಪಡಿಸಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಂಶು ಕುಮಾರ್ ಎಸ್ ತಿಳಿಸಿದ್ದಾರೆ.
‘ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯದಿಂದ ಇತ್ತೀಚೆಗೆ ಜಾಮೀನು ಪಡೆದ ಏಳು ಆರೋಪಿಗಳನ್ನು ಜಾಮೀನು ನಿಯಮಗಳನ್ನು ಉಲ್ಲಂಘಿಸಿದ ನಂತರ ಪೊಲೀಸ್ ಇಲಾಖೆ ಬಂಧಿಸಿದೆ. ಆರೋಪಿಗಳು ಹಾನಗಲ್ ಪಟ್ಟಣ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್‌ಗಳಾಗಿದ್ದು, ಜಾಮೀನು ಪಡೆದು ಮೆರವಣಿಗೆಯಲ್ಲಿ ಭಾಗವಹಿಸಿದ್ದರು’ ಎಂದಿದ್ದಾರೆ.
‘ಕಾನೂನುಬಾಹಿರ ಮೆರವಣಿಗೆಯ ವಿರುದ್ಧ ಐಪಿಸಿ ಸೆಕ್ಷನ್ 189(2), 191(2), 281, 351(2), 351(3) ಮತ್ತು 190 ಬಿಎನ್‌ಎಸ್-2023 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಹಾನಗಲ್ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಡಿಯೊ ವೈರಲ್ ಆದ ನಂತರ ಪೊಲೀಸರು ವೀಡಿಯೊಗಳನ್ನು ಪರಿಶೀಲಿಸಿದ್ದು, ಎಲ್ಲಾ ಆರೋಪಿಗಳು ಮೆರವಣಿಗೆಯಲ್ಲಿ ಇದ್ದರು ಎಂದು ದೃಢಪಡಿಸಿದರು’ ಎಂದು ಅವರು ಹೇಳಿದರು.