Spread the love

ಮಲ್ಪೆ: ದಿನಾಂಕ: 11-05-2025 (ಹಾಯ್ ಉಡುಪಿ ನ್ಯೂಸ್) ಕಲ್ಮಾಡಿ ಪರಿಸರದಲ್ಲಿ ಅನುಮತಿ ಇಲ್ಲದೆ ತಡರಾತ್ರಿ ಕರ್ಕಶ ಡಿಜೆ ಸೌಂಡ್ ಅಳವಡಿಸಿದ್ದ ವರ ಮೇಲೆ ಮಲ್ಪೆ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.

ದಿನಾಂಕ 07/05/2025 ರಂದು ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ಎಲ್ಲಿಯೋ ಡಿ.ಜೆ ಸೌಂಡ್‌ ಕೇಳುತ್ತಿರುವ ಬಗ್ಗೆ ಸಾರ್ವಜನಿಕ ರಿಂದ ಕಂಟ್ರೋಲ್ ರೂಂ ಮುಖಾಂತರ ಮಲ್ಪೆ ಪೊಲೀಸ್‌ ಠಾಣೆಗೆ ದೂರುಗಳು ಬರುತ್ತಿದ್ದು  ಈ ಬಗ್ಗೆ ಮಲ್ಪೆ ಪೊಲೀಸರು ಬೀಚ್‌, ಸೀವಾಕ್‌, ಕೊಡವೂರು, ಬಾಪುತೋಟ, ಮುಂತಾದ ಕಡೆಗಳಲ್ಲಿ ಸಂಚರಿಸಿ ಡಿ.ಜೆ ಸೌಂಡ್‌ ಕೇಳುತ್ತಿರುವ ಸ್ಥಳವನ್ನು ಹುಡುಕಿಕೊಂಡು ಹೋಗುತ್ತಿರುವಾಗ ದಿನಾಂಕ 08/05/2025ರ ರಾತ್ರಿ ಸಮಯ 01:10 ಗಂಟೆಗೆ ಉಡುಪಿ ತಾಲೂಕು, ಕೊಡವೂರು ಗ್ರಾಮದ ಕಲ್ಮಾಡಿ ಎಂಬಲ್ಲಿಗೆ ತಲುಪಿ ನೋಡಿದಾಗ ಜಯ ಎಂಬವರ ಮನೆಯಲ್ಲಿ ಅವರ ಮಗ ರಂಜಿತ್‌ ರವರ ಮೆಹಂದಿ ಕಾರ್ಯಕ್ರಮ ನಡೆಯುತ್ತಿತ್ತು ಎನ್ನಲಾಗಿದೆ.

ಅಲ್ಲಿಗೆ ಪೊಲೀಸರು ಹೋಗುವ ಸಮಯದಲ್ಲಿ ಡಿ.ಜೆ ಸೌಂಡ್‌ ಕೇಳುತ್ತಿದ್ದು, ಪೊಲೀಸರು ಸೌಂಡ್ಸ್ ಸಿಸ್ಟಮ್‌ ಬಗ್ಗೆ ವಿಚಾರಿಸಿದಾಗ ಅದು ಶಶಿಧರ ಎಂಬುವವರ ಸುಶಾನ್‌ ಸೌಂಡ್ಸ್ ಎಂಬುದಾಗಿ ತಿಳಿಸಿದ್ದು ,ಹಾಗೂ ಈ ಬಗ್ಗೆ ರಂಜಿತ್‌ ರವರಲ್ಲಿ ಧ್ವನಿವರ್ಧಕ ಅಳವಡಿಸಲು ಅನುಮತಿ ಪಡೆದುಕೊಂಡ ಬಗ್ಗೆ ವಿಚಾರಿಸಿದಾಗ ಯಾವುದೇ ಅನುಮತಿ ಪಡೆದಿಲ್ಲವೆಂದು ತಿಳಿಸಿರುತ್ತಾರೆ ಎನ್ನಲಾಗಿದೆ.

ಅನುಮತಿ ಇಲ್ಲದೆ ನಿಯಮ ಉಲ್ಲಂಘಿಸಿ ತಡರಾತ್ರಿಯವರೆಗೆ ಡಿ.ಜೆ ಸೌಂಡ್‌ ಬಳಸಿ, ಧ್ವನಿವರ್ಧಕ ಬಳಸಲು ಅನುಮತಿ ಪಡೆಯದೇ ಕಾರ್ಯಕ್ರಮ ನಡೆಸಿ, ಸಾರ್ವಜನಿಕರ ನೆಮ್ಮದಿಗೆ ಭಂಗವನ್ನುಂಟು ಮಾಡಿದ ರಂಜಿತ್‌ ಹಾಗೂ ಸುಶಾನ್‌ ಸೌಂಡ್‌ ಸಿಸ್ಟಮ್‌ ಒದಗಿಸಿದ ಅದರ ಮಾಲಿಕ ಶಶಿಧರ ರವರ ವಿರುದ್ದ ಮಲ್ಪೆ ಪೊಲೀಸ್‌ ಠಾಣೆಯಲ್ಲಿ  ಕಲಂ:292 BNS ಮತ್ತು 109 KP Act ರಂತೆ ಪ್ರಕರಣ ದಾಖಲಾಗಿದೆ.

error: No Copying!