
ಮಲ್ಪೆ: ದಿನಾಂಕ:14-05-2025(ಹಾಯ್ ಉಡುಪಿ ನ್ಯೂಸ್) ಹಾರ್ಬರ್ ನ ಮೀನು ಮಾರಾಟ ವ್ಯವಹಾರ ಸಂಸ್ಥೆಯೊಂದಕ್ಕೆ ಪ್ರಶಾಂತ ಎಂಬುವವನು ವಂಚನೆ ನಡೆಸಿದ್ದಾನೆ ಎಂದು ಸಂಸ್ಥೆಯ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ .
ಉಡುಪಿ ನಿವಾಸಿ ಅಬ್ದುಲ್ ರೆಹಮಾನ್ (52), ಎಂಬವರು ಮಲ್ಪೆ ಹಾರ್ಬರ್ ನಲ್ಲಿ ಶರ್ಫುನ್ನೀಸ ಪಿಶ್ ಅಸೋಸಿಯೇಟ್ಸ್ ಎಂಬ ಹೋಲ್ ಸೇಲ್ ಮೀನು ಮಾರಾಟ ವ್ಯವಹಾರ ನಡೆಸಿಕೊಂಡಿದ್ದು, ಮಹಾರಾಷ್ಟ್ರ, ದಕ್ಷಿಣ ಭಾರತ ಕಡೆಗಳಿಗೆ ಹೋಲ್ ಸೇಲ್ ಮೀನು ಮಾರಾಟ ವ್ಯವಹಾರ ನಡೆಸುತ್ತಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ ಅಪಾದಿತ ಪ್ರಶಾಂತ ಎಂಬುವವನು ಅಬ್ದುಲ್ ರೆಹಮಾನ್ ರನ್ನು ಸಂಪರ್ಕಿಸಿ ಸಂಸ್ಥೆಯ ಮಾರ್ಕೆಟಿಂಗ್ ವ್ಯವಹಾರವನ್ನು ನಡೆಸುವುದಾಗಿ ತಿಳಿಸಿದ್ದು, ಅದರಂತೆ ಕಮಿಷನ್ ಆಧಾರದಲ್ಲಿ ಮೀನು ವ್ಯವಹಾರ ನಡೆಸಿದ ಗ್ರಾಹಕರಿಂದ ಹಣವನ್ನು ಸಂಗ್ರಹಿಸಿ ಸಂಸ್ಥೆಗೆ ನೀಡುತ್ತಿರುವ ಕೆಲಸ ಮಾಡಿಕೊಂಡಿರುತ್ತಾನೆ ಎಂದಿದ್ದಾರೆ. ಇತ್ತೀಚಿಗೆ ಪರಿಶೀಲಿಸಿದಾಗ ವ್ಯವಹಾರದಿಂದ ಬರಬೇಕಾದ ಹಣವು ಸರಿಯಾಗಿ ಸಂಸ್ಥೆಯ ಖಾತೆಗೆ ಜಮಾ ಆಗದೇ ಇರುವುದು ಕಂಡುಬಂದಿದ್ದು, ಈ ಬಗ್ಗೆ ಮೀನು ಖರೀದಿಸಿದ ಗ್ರಾಹಕರನ್ನು ವಿಚಾರಿಸಿದಾಗ ಮೀನು ವ್ಯವಹಾರದ ಹಣವನ್ನು ಪ್ರಶಾಂತ ರವರಿಗೆ ನೀಡಿರುವುದಾಗಿ ತಿಳಿಸಿರುತ್ತಾರೆ ಎನ್ನಲಾಗಿದೆ.
ಈ ಬಗ್ಗೆ ಅಬ್ದುಲ್ ರೆಹಮಾನ್ ರವರು ಪರಿಶೀಲಿಸಿದಾಗ ಒಟ್ಟು ರೂಪಾಯಿ 90,00,000/- ಹಣವು ಸಂಸ್ಥೆಗೆ ಜಮಾ ಆಗದೇ ಇರುವುದು ತಿಳಿದು ಬಂದಿರುತ್ತದೆ. ಅಪಾದಿತ ಪ್ರಶಾಂತನು ಆ ಹಣವನ್ನು ಸಂಸ್ಥೆಗೆ ಜಮಾ ಮಾಡದೇ ಆತನ ಸ್ವಂತಕ್ಕೆ ಬಳಸಿ ನಂಬಿಕೆ ದ್ರೋಹ ಹಾಗೂ ವಂಚನೆ ಎಸಗಿದ್ದಾನೆ ಎಂದು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ:316(1),316(2),316(4),318(1),318(2),318(4) BNS ರಂತೆ ಪ್ರಕರಣ ದಾಖಲಾಗಿದೆ.