
ಕುಂದಾಪುರ: ದಿನಾಂಕ: 25-04-2025 (ಹಾಯ್ ಉಡುಪಿ ನ್ಯೂಸ್) ಗ್ರಾಮ ಪಂಚಾಯತ್ ಸದಸ್ಯರೋರ್ವರಿಗೆ ಕಾಮಗಾರಿ ಯೊಂದರ ವಿಷಯದಲ್ಲಿ ಮೂವರು ಯುವಕರು ಗಂಭೀರ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಕುಂದಾಪುರ ತಾಲೂಕು,ಕರ್ಕುಂಜೆ ಗ್ರಾಮದ ನಿವಾಸಿ ಸುಕುಮಾರ (34) ಅವರು ದಿನಾಂಕ 23/04/2024 ರಂದು ಸಂಜೆ ತಮ್ಮ ಮನೆಯ ಬಳಿ ಇರುವ ಗಣೇಶ್ ಸ್ಟೋರ್ ಹತ್ತಿರ ತನ್ನ ತಮ್ಮ ಸಂದೀಪನೊಂದಿಗೆ ಮಾತನಾಡುತ್ತಾ ಕುಳಿತಿರುವಾಗ ಅನಿಲ್ ಹಾಗೂ ಮಯೂರ್ ಎಂಬವರು ಕಾರಿನಲ್ಲಿ ಬಂದು ಗ್ರಾಮ ಪಂಚಾಯತ್ ಸದಸ್ಯನಾಗಿರುವ ಸುಕುಮಾರ ರವರಲ್ಲಿ ಏಕಾಏಕಿಯಾಗಿ ಕಾಮಗಾರಿ ಬಗ್ಗೆ ತಕರಾರು ತೆಗೆದು ಸುಕುಮಾರ ರವರನ್ನುದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಅದೇ ಸಮಯಕ್ಕೆ ಅಲ್ಲಿಗೆ ಸ್ಕೂಟಿಯಲ್ಲಿ ಗಣೇಶ ಎಂಬವನು ಬಿಯರ್ ಮತ್ತು ಡ್ರಿಂಕ್ಸ್ ಬಾಟಲಿಯನ್ನು ತೆಗೆದುಕೊಂಡು ಬಂದು ಸುಕುಮಾರ ರವರ ತಲೆಗೆ ಹೊಡೆಯಲು ಪ್ರಯತ್ನಿಸಿದ್ದು ಸುಕುಮಾರ ರವರು ತಪ್ಪಿಸಿಕೊಂಡಿದ್ದು, ಆಗ ಬಿಯರ್ ಬಾಟಲಿಯು ಸುಕುಮಾರ ರವರ ಕೈಗೆ, ಎದೆಗೆ ತಾಗಿ ಗಾಯಗಳಾಗಿರುತ್ತದೆ. ನಂತರ ಸುಕುಮಾರ ರವರು ಚಿಕಿತ್ಸೆ ಬಗ್ಗೆ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಆ ಸಮಯ ಮಂಗಳೂರಿನ ಯಾರೋ ಒಬ್ಬ ಸುಕುಮಾರರಿಗೆ ಮೊಬೈಲ್ ಕರೆ ಮಾಡಿ ಗಣೇಶ ಮತ್ತು ಅನಿಲನ ತಂಟೆಗೆ ಹೋದರೇ ನಾಳೆ ಒಳಗಡೆ ನಿನ್ನನ್ನು ಮುಗಿಸುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 25/2025, ಕಲಂ: 352, 118(1), 351(4), 351(2) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.