
ದಿನಾಂಕ:24-04-2025(ಹಾಯ್ ಉಡುಪಿ ನ್ಯೂಸ್)
ನವದೆಹಲಿ: ಪಹಲ್ಗಾಮ್ ಉಗ್ರ ದಾಳಿಯ ನಂತರ ಕೇಂದ್ರ ಸರ್ಕಾರ ಗುರುವಾರ ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ, ಎಲ್ಲಾ ರಾಜಕೀಯ ಪಕ್ಷಗಳು ಪಕ್ಷ ಭೇದ ಮೀರಿ ಒಗ್ಗಟ್ಟು ಪ್ರದರ್ಶಿಸಿದ್ದು, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಸರ್ಕಾರದೊಂದಿಗೆ ನಿಲ್ಲುವುದಾಗಿ ಪ್ರತಿಜ್ಞೆ ಮಾಡಿವೆ.
“ಹಮ್ ಸಬ್ ಸಾಥ್ ಹೈ, ಆಕ್ಷನ್ ಲೋ”(ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಮತ್ತು ಕ್ರಮ ಕೈಗೊಳ್ಳುತ್ತೇವೆ) ಎಂಬುದು ಘಟನೆಯ ಕುರಿತು ಚರ್ಚೆಯ ಸಂದರ್ಭದಲ್ಲಿ ಸಭೆಯಲ್ಲಿ ವಿವಿಧ ಪಕ್ಷಗಳ ನಾಯಕರು ವ್ಯಕ್ತಪಡಿಸಿದ ಭಾವನೆಯಾಗಿದೆ.
ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಭದ್ರತಾ ಲೋಪ ಮತ್ತು ಗುಪ್ತಚರ ಇಲಾಖೆಯ ಕೆಲವು ಲೋಪಗಳನ್ನು ಒಪ್ಪಿಕೊಂಡರು. ಆದರೆ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಏಕತೆಯನ್ನು ಪ್ರದರ್ಶಿಸುವ ಮೂಲಕ ಇತರ ಪಕ್ಷಗಳ ನಾಯಕರೊಂದಿಗೆ ಎಲ್ಲಾ ಸಂಬಂಧಿತ ವಿವರಗಳನ್ನು ಹಂಚಿಕೊಂಡರು ಎಂದು ಮೂಲಗಳು ತಿಳಿಸಿವೆ.
ಭಯೋತ್ಪಾದನೆಯ ವಿರುದ್ಧ ಕ್ರಮ ಕೈಗೊಳ್ಳಲು ಮೋದಿ ಸರ್ಕಾರವು ಎಲ್ಲಾ ಪಕ್ಷಗಳಿಂದ ಸರ್ವಾನುಮತದ ಬೆಂಬಲವನ್ನು ಸಭೆಯಲ್ಲಿ ಪಡೆಯಿತು.
ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ಮುಗ್ಧ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯ ಹಿಂದಿನ ಶಕ್ತಿಗಳು ಮತ್ತು ಭಯೋತ್ಪಾದನೆ ವಿರುದ್ಧ ಒಟ್ಟಾಗಿ ಕಾರ್ಯನಿರ್ವಹಿಸುವ ದೃಢ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ, ಎಲ್ಲರೂ ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದಾರೆ. “ಭಯೋತ್ಪಾದನೆಯ ವಿರುದ್ಧದ ಯಾವುದೇ ಕ್ರಮವನ್ನು ನಾವು ಬೆಂಬಲಿಸುತ್ತೇವೆ” ಎಂದು ತಿಳಿಸಿದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಭೆಯ ಅಧ್ಯಕ್ಷತೆ ವಹಿಸಿದ್ದರು ಮತ್ತು ಅಮಿತ್ ಶಾ ಸಹ ಹಾಜರಿದ್ದರು ಎಂದು ಹೇಳಿದರು.
“ಎಲ್ಲಾ ಪಕ್ಷಗಳು ದಾಳಿಯನ್ನು ಖಂಡಿಸಿವೆ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಬೇಕೆಂದು ನಾವು ಹೇಳಿದ್ದೇವೆ” ಎಂದು ಖರ್ಗೆ ಹೇಳಿದರು.
ಪ್ರಧಾನಿ ಮೋದಿ ಸಭೆಯಲ್ಲಿ ಹಾಜರಿರಬೇಕಾಗಿತ್ತು. ಏಕೆಂದರೆ ಈ ವಿಷಯದ ಬಗ್ಗೆ ಅವರ ನಿರ್ಧಾರವು ಅಂತಿಮವಾಗಿರಲಿದೆ ಎಂಬ ಅಂಶವನ್ನು ಖರ್ಗೆ ಒತ್ತಿ ಹೇಳಿದರು.