Spread the love

ದಿನಾಂಕ:21-03-2025 (ಹಾಯ್ ಉಡುಪಿ ನ್ಯೂಸ್)

ಸಾಲಿಗ್ರಾಮ: ಕೇಂದ್ರದ ಬಿಜೆಪಿ ಸರಕಾರ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಮೂಲಕ ಎಸ್ ಸಿ, ಎಸ್ ಟಿ ಸಮುದಾಯದ ವಿದ್ಯಾವಂತ ಯುವಜನಾಂಗವನ್ನು ಉದ್ಯೋಗ ವಂಚಿತರನ್ನಾಗಿಸಲಿದೆ ಎಂದು ದಲಿತ ಹಕ್ಕುಗಳ ಸಮಿತಿ (ಡಿ ಎಚ್ ಎಸ್) ಉಡುಪಿ ಜಿಲ್ಲಾ ಸಂಚಾಲಕ, ಜನಪರ ಹೋರಾಟಗಾರ, ಚಿಂತಕ ಸಂಜೀವ ಬಳ್ಕೂರು ಅವರು ಹೇಳಿದರು.

ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಡಾಹೋಳಿಯಲ್ಲಿ ಮಾರ್ಚ್ 16ರಂದು ನಡೆದ ಜನಜಾಗೃತಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಸಾವಿರಾರು ದಲಿತ ಕುಟುಂಬಗಳು ಇಂದಿಗೂ ನಿವೇಶನ – ವಸತಿ ರಹಿತರಾಗಿಯೇ ಉಳಿದಿದ್ದಾರೆ, ಅಪೌಷ್ಟಿಕತೆಯ ಕೊರತೆಯೂ ಇದೆ, ಉದ್ಯೋಗದಿಂದಲೂ ವಂಚಿತರಾಗುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಖಾಸಗೀಕರಣ ಪ್ರಕ್ರಿಯೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವುದರಿಂದ ಖಾಸಗೀ ರಂಗದಲ್ಲೂ ಸರಕಾರ ಮೀಸಲಾತಿ ಜ್ಯಾರಿಗೊಳಿಸಬೇಕೆಂದು ಒತ್ತಾಯಿಸಿದರು.

ದಲಿತರಿಗೆ ಮೀಸಲಾದ ಹಕ್ಕಿನ ಹಣವನ್ನು ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗಳಿಗೆ ಉಪಯೋಗಿಸುವ ಮೂಲಕ ದಲಿತರಿಗೆ ಅನ್ಯಾಯವೆಸಗಿದೆ ಎಂದ ಸಂಜೀವ ಬಳ್ಕೂರು, ದಲಿತ ಕಾಲನಿಗಳಲ್ಲಿ ಮೂಲಭೂತ ಸೌಲಭ್ಯ ಒದಗಿಸಲು ಮತ್ತು ದಲಿತರ ಅಭಿವೃದ್ಧಿಗಾಗಿ ಮಾತ್ರ ಎಸ್ ಸಿ ಪಿ – ಟಿ ಎಸ್ ಪಿ ಅಡಿ ಮೀಸಲಿಟ್ಟ ಹಣವನ್ನು ಬಳಸಿಕೊಳ್ಳಬೇಕೆಂದು ಆಗ್ರಹಿಸಿದರು.

ಸಭೆಯಲ್ಲಿ ಮಾತನಾಡಿದ ಜನಪರ ಹೋರಾಟಗಾರರೂ, ಲೇಖಕರೂ ಆದ ಶ್ರೀರಾಮ ದಿವಾಣ ಅವರು ಹೆತ್ತವರು ಮತ್ತು ಸಂಘಟನೆಗಳು ದಲಿತ ಮಕ್ಕಳ ಉನ್ನತ ಶಿಕ್ಷಣ ಮತ್ತು ಉದ್ಯೋಗದ ಕಡೆಗೆ ಆದ್ಯತೆಯ ಗಮನ ಹರಿಸಬೇಕೆಂದು ವಿನಂತಿಸಿದರು. ಮಹಿಳೆಯರು ಹಾಗೂ ಯುವಜನರು ಡಿ ಎಚ್ ಎಸ್ ಸಂಘಟನೆಯಡಿಯಲ್ಲಿ ಐಕ್ಯತೆ ಸಾಧಿಸಿ ಹೋರಾಟದ ಮೂಲಕ ಸ್ವಾಭಿಮಾನ ಮತ್ತು ಘನತೆಯ ಬದುಕು ಕಟ್ಟಿಕೊಳ್ಳಬೇಕು ಎಂದರು.

ಕಟ್ಟಡ ಕಾರ್ವಿುಕರ ಸಂಘಟನೆಯ ಮುಖಂಡ, ದಲಿತ ಹಕ್ಕುಗಳ ಸಮಿತಿಯ ತಾಲೂಕು ಸಹ ಸಂಚಾಲಕರಾದ ರಾಮ ಕಾರ್ಕಡರವರ ನೇತೃತ್ವದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಹಿರಿಯ ಚಿಂತಕರಾದ ಕೆ. ಬಿ. ಅಣ್ಣಯ್ಯ ವಹಿಸಿದ್ದರು.ದಲಿತ ಹಕ್ಕುಗಳ ಸಮಿತಿಯ ತಾಲೂಕು ಸಂಚಾಲಕರಾದ ರವಿ ವಿ.ಎಂ. ಮುಂತಾದವರು ಸಂದರ್ಭೋಚಿತವಾಗಿ ಮಾತನಾಡಿದರು.

ಸಭೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಗಣೇಶ್ ಬಡಾಹೊಳಿ, ಶೇಖರ ಮಾಸ್ತರ್, ಕೆ. ಬಿ. ಅಣ್ಣಯ್ಯ ಹಾಗೂ ಕು. ನಿಶ್ಮಿತಾ ಇವರ ಸಂಚಾಲಕತ್ವದಲ್ಲಿ ದಲಿತ ಹಕ್ಕುಗಳ ಸಮಿತಿ (ಡಿ ಎಚ್ ಎಸ್)ಯ ಗ್ರಾಮ ಘಟಕವನ್ನು ರಚಿಸಲಾಯಿತು.

error: No Copying!