
ಬೆಂಗಳೂರು: ದಿನಾಂಕ:07-03-2025 (ಹಾಯ್ ಉಡುಪಿ ನ್ಯೂಸ್) ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶುಕ್ರವಾರ 2025-26ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ . ಪಂಚ ಗ್ಯಾರಂಟಿ ಯೋಜನೆಗಳಿಗೆ ಬರೋಬ್ಬರಿ 51 ಸಾವಿರ ಕೋಟಿ ರೂ. ನೀಡುವುದರ ಜೊತೆಗೆ ಹತ್ತು ಹಲವು ಹೊಸ ಘೋಷಣೆಗಳನ್ನೂ ಮಾಡಿದ್ದಾರೆ.
ಇಂದು ವಿಧಾನಸಭೆಯಲ್ಲಿ 4,09,549 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ ಅವರು ಇದರಲ್ಲಿ 19,262 ಕೋಟಿ ರೂ. ರಾಜಸ್ವ ಕೊರತೆಯನ್ನು ಉಲ್ಲೇಖಿಸಿದ್ದಾರೆ.
1994 ರಲ್ಲಿ ಜನತಾ ದಳದ ಆಡಳಿತದಲ್ಲಿ ಡಿಸಿಎಂ ಆಗಿ ಮೊದಲ ಬಾರಿ ಬಜೆಟ್ ಮಂಡಿಸಿದ್ದ ಸಿದ್ದರಾಮಯ್ಯ ಅವರು ಇಂದು ತಮ್ಮ 16ನೇ ಬಜೆಟ್ ಅನ್ನು ಮಂಡಿಸುವ ಮೂಲಕ ಒಂದು ರೀತಿಯಲ್ಲಿ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಎರಡನೇ ಅವಧಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಇದು ಅವರ ಮೂರನೇ ಬಜೆಟ್ ಮತ್ತು ಸತತ ಎರಡನೇ ಆದಾಯ ಕೊರತೆ ಬಜೆಟ್ ಆಗಿದೆ.
“ಕರ್ನಾಟಕವು ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಜ್ಯಗಳಲ್ಲಿ ಒಂದಾಗಿದೆ, ಇದು ರಾಷ್ಟ್ರೀಯ ಒಟ್ಟು ದೇಶೀಯ ಉತ್ಪನ್ನಕ್ಕೆ(GDP) ಶೇ. 8.4ರಷ್ಟು ಕೊಡುಗೆ ನೀಡುತ್ತದೆ. ಇದು 2024-25ನೇ ಸಾಲಿನಲ್ಲಿ ತನ್ನ ಪ್ರಭಾವಶಾಲಿ ಬೆಳವಣಿಗೆಯ ಪಥವನ್ನು ಮುಂದುವರೆಸಿದೆ ಮತ್ತು ಶೇ. 7.4 ರಷ್ಟು GSDP ಬೆಳವಣಿಗೆಯ ದರವನ್ನು ಸಾಧಿಸಲು ಸಜ್ಜಾಗಿದೆ. ಇದು ರಾಷ್ಟ್ರೀಯ ಬೆಳವಣಿಗೆಯ ದರ ಶೇ. 6.4 ಕ್ಕಿಂತ ಹೆಚ್ಚಾಗಿದೆ” ಎಂದು ಸಿಎಂ ಒತ್ತಿ ಹೇಳಿದರು.
ರಾಜ್ಯ ಸರ್ಕಾರದ ಗ್ಯಾರಂಟಿಗಳು ಅಭಿವೃದ್ಧಿಯನ್ನು ತಿಂದುಹಾಕುತ್ತಿವೆ ಎಂದು ದೂರುತ್ತಿದ್ದ ಆಡಳಿತಾರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳ ಶಾಸಕರನ್ನು ಸಮಾಧಾನಪಡಿಸುವ ಯತ್ನದಲ್ಲಿ ಸಿಎಂ ಸಿದ್ದರಾಮಯ್ಯ ಅವರು 8,000 ಕೋಟಿ ರೂ.ಗಳ ಸಿಎಂ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮ(CMIDP) ಎಂಬ ಹೊಸ ಯೋಜನೆಯನ್ನು ಘೋಷಿಸಿದ್ದಾರೆ.
ಈ ಯೋಜನೆಯು ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸಣ್ಣ ನೀರಾವರಿ, ರಸ್ತೆಗಳು ಮತ್ತು ನಗರ ಮೂಲಸೌಕರ್ಯಗಳ ಮೇಲೆ ಕೇಂದ್ರೀಕರಿಸುವ ಮೂಲಕ ರಾಜ್ಯಾದ್ಯಂತ ಸಮತೋಲಿತ ಅಭಿವೃದ್ಧಿಯನ್ನು ಖಚಿತಪಡಿಸುತ್ತದೆ.
ಇನ್ನು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ವಿವಿಧ ಯೋಜನೆಗಳನ್ನು ಘೋಷಿಸಿದ ಸಿಎಂ, ರಾಜಧಾನಿ ಬೆಂಗಳೂರಿನ ಅಭಿವೃದ್ಧಿಗಾಗಿ ದೇವನಹಳ್ಳಿಯವರೆಗೆ ಮೆಟ್ರೋ ರೈಲು ಯೋಜನೆಯ ವಿಸ್ತರಣೆ ಸೇರಿದಂತೆ ಬಂಪರ್ ಕೊಡುಗೆ ನೀಡಿದ್ದಾರೆ.
ಈ ಬಜೆಟ್ ನಲ್ಲಿ ಶಿಕ್ಷಣ ಇಲಾಖೆಗೆ 45,286 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಹಾಗೆಯೇ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 34,955 ಕೋಟಿ, ಇಂಧನ ಇಲಾಖೆಗೆ 26,896 ಕೋಟಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಗೆ 26,735 ಕೋಟಿ, ನೀರಾವರಿ ಇಲಾಖೆಗೆ 22,181 ಕೋಟಿ, ನಗರಾಭಿವೃದ್ಧಿ ಮತ್ತು ವಸತಿ ಇಲಾಖೆಗೆ 21,405 ಕೋಟಿ ಹಾಗೂ ಒಳಾಡಳಿತ ಮತ್ತು ಸಾರಿಗೆ ಇಲಾಖೆಗೆ 20,625 ಕೋಟಿ ಹಣ ಮೀಸಲಿಡಲಾಗಿದೆ.
ಹೀಗೆ ಎಲ್ಲ ಇಲಾಖೆಗಳಿಗೂ ಅನುಕೂಲಕ್ಕೆ ಅನುಗುಣವಾಗಿ ಬಜೆಟ್ ಹಂಚಿಕೆ ಮಾಡಲಾಗಿದೆ. ಹೊಸ ಯೋಜನೆ, ನೂತನ ಘೋಷಣೆಗಳೊಂದಿಗೆ ಸರ್ಕಾರ ಸಮಗ್ರ ರಾಜ್ಯದ ಅಭಿವೃದ್ಧಿಯ ಗುರಿ ಹೊಂದಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಹೆಚ್ಚಿದ ಸಾಲದ ಹೊರೆ
2025-26ನೇ ಸಾಲಿನಲ್ಲಿ ಅಂದಾಜು 1,16,000 ಕೋಟಿ ರೂ. ಸಾಲದ ಮೊರೆ ಹೋಗಲು ಸಿಎಂ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ. 2024-25 ಸಾಲಿನಲ್ಲಿ 1,05,246 ಕೋಟಿ ರೂ. ಸಾಲದ ಮೊರೆ ಹೋಗಲಾಗಿತ್ತು. ಆ ಮೂಲಕ ಈ ಬಾರಿ 10,754 ಕೋಟಿ ರೂ. ಹೆಚ್ಚುವರಿ ಸಾಲಕ್ಕೆ ಮೊರೆ ಹೋಗಲಾಗಿದೆ.
ಈ 1,16,000 ಕೋಟಿ ರೂ. ಸಾಲದ ಪೈಕಿ ಕೇಂದ್ರ ಸರ್ಕಾರದಿಂದ 7,000 ಕೋಟಿ ರೂ., ಬಹಿರಂಗ ಮಾರುಕಟ್ಟೆಯಿಂದ 1,05,000 ಕೋಟಿ ಹಾಗೂ ಎಲ್ಐಸಿ, ಎನ್ಎಸ್ಎಸ್ಎಫ್, ಎನದ ಸಿಡಿಸಿ ಮತ್ತು ಆರ್ ಐಡಿಎಫ್ ಗಳಿಂದ 4,000 ಕೋಟಿ ರೂ.ಸಾಲ ಪಡೆಯಲು ಅಂದಾಜಿಸಲಾಗಿದೆ. ಆ ಮೂಲಕ 2025-26ರ ಅಂತ್ಯಕ್ಕೆ ರಾಜ್ಯದ ಒಟ್ಟು ಹೊಣೆಗಾರಿಕೆಗಳು 7,64,655 ಕೋಟಿ ರೂ.ಗಳು ಎಂದು ಅಂದಾಜಿಸಲಾಗಿದ್ದು, ಜಿ.ಎಸ್.ಡಿ.ಪಿ ಯ ಶೇ. 24.91ರಷ್ಟಿದೆ.