
ಬೆಂಗಳೂರು: ದಿನಾಂಕ:06-03-2025) ಹಾಯ್ ಉಡುಪಿ ನ್ಯೂಸ್)
ಕಿರುಸಾಲ ಮತ್ತು ಸಣ್ಣ ಸಾಲ ( ಬಲವಂತದ ಕ್ರಮಗಳ ತಡೆ) ಮಸೂದೆ 2025 ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ಕೆ ಪಾಟೀಲ್ ಅವರು ಮಂಡಿಸಿದರು. ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳದಿಂದ ಸಾಲಗಾರರನ್ನು ರಕ್ಷಿಸುವ ಉದ್ದೇಶದಿಂದ ನಿಯಮ ಉಲ್ಲಂಘನೆಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ.5 ಲಕ್ಷ ದಂಡ ವಿಧಿಸುವ ಮಹತ್ವದ ಮಸೂದೆಯೊಂದನ್ನು ವಿಧಾನಸಭೆಯಲ್ಲಿ ಗುರುವಾರ ಕರ್ನಾಟಕ ಸರ್ಕಾರ ಮಂಡಿಸಿದೆ.
ಕರ್ನಾಟಕ ಕಿರುಸಾಲ ಮತ್ತು ಸಣ್ಣ ಸಾಲ ( ಬಲವಂತದ ಕ್ರಮಗಳ ತಡೆ) ಮಸೂದೆ 2025 ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ಕೆ ಪಾಟೀಲ್ ಅವರು ಮಂಡಿಸಿದರು. ಫೆಬ್ರವರಿ 12 ರಂದು ರೂಪಿಸಿದ ‘ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ ( ಬಲವಂತದ ಕ್ರಮಗಳ ತಡೆ) ಸುಗ್ರೀವಾಜ್ಞೆ ಬದಲಿಗೆ ಈ ಮಸೂದೆ ಮಂಡಿಸಲಾಗಿದೆ.
ಮೈಕ್ರೋ ಫೈನಾನ್ಸ್ ಕಂಪನಿಗಳ ಬಲವಂತದ ಸಾಲ ವಸೂಲಾತಿಯಿಂದ ರಾಜ್ಯದ ವಿವಿಧೆಡೆ ಹಲವು ಮಂದಿ ಆತ್ಮಹತ್ಯೆ ಮತ್ತು ಅನೇಕ ದೂರುಗಳಿಗೆ ಪ್ರತಿಕ್ರಿಯೆಯಾಗಿ, ಸುಗ್ರೀವಾಜ್ಞೆಯನ್ನು ಸರ್ಕಾರ ಜಾರಿಗೆ ತಂದಿತ್ತು. ಮಸೂದೆಯ ಪ್ರಕಾರ ಎಲ್ಲಾ ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಹಣ-ಸಾಲ ನೀಡುವ ಏಜೆನ್ಸಿಗಳು ಮತ್ತು ಸಾಲದಾತರು 30 ದಿನಗಳ ಒಳಗೆ ಜಿಲ್ಲಾಧಿಕಾರಿಗಳೊಂದಿಗೆ ನೋಂದಾಯಿಸಿಕೊಳ್ಳಬೇಕು.
ಮಸೂದೆಯು ‘ಬಲವಂತ’ ಸಾಲ ವಸೂಲಾತಿಯನ್ನು ನಿಷೇಧಿಸುತ್ತದೆ. ಮೈಕ್ರೋಫೈನಾನ್ಸ್ ಕಂಪನಿಗಳು ಅಥವಾ ಸಾಲದಾತರು ಒತ್ತಡ, ಹಿಂಸೆ, ಅವಮಾನಗಳು, ಖಾಸಗಿ/ಹೊರಗುತ್ತಿಗೆ ಏಜೆನ್ಸಿಗಳು, ಅಪರಾಧ ಹಿನ್ನೆಲೆ ಹೊಂದಿರುವ ವ್ಯಕ್ತಿಗಳು ಮತ್ತಿತರ ವಿಧಾನ ಬಳಸಿದರೆ ಅವರ ವಿರುದ್ಧ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬಹುದು. ಸಾಲಗಾರ ಸರ್ಕಾರದ ಪ್ರಯೋಜನ ಪಡೆಯಲು ಅರ್ಹತೆ ನೀಡುವ ಯಾವುದೇ ದಾಖಲೆಯನ್ನು ಸಾಲಗಾರರಿಂದ ಬಲವಂತವಾಗಿ ತೆಗೆದುಕೊಳ್ಳುವುದನ್ನು ಇದು ನಿಷೇಧಿಸುತ್ತದೆ.
ಸಾಲದ ವಿವಾದಗಳನ್ನು ಇತ್ಯರ್ಥಪಡಿಸಲು ಸಾಲಗಾರ ಅಥವಾ ಸಾಲ ನೀಡುವವರ ನಡುವೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಲು ಒಂಬುಡ್ಸ್‌ಮನ್‌ನ ಸರ್ಕಾರಿ ನೇಮಕಾತಿಯನ್ನು ಇದು ಪ್ರಸ್ತಾಪಿಸಿದೆ. ಸ್ವಯಂ ಪ್ರೇರಿತವಾಗಿ ಪ್ರಕರಣಗಳನ್ನು ದಾಖಲಿಸಲು ಉಪ ಪೊಲೀಸ್ ವರಿಷ್ಠಾಧಿಕಾರಿಗಳ ಶ್ರೇಣಿಗಿಂತ ಕಡಿಮೆಯಿಲ್ಲದ ಪೊಲೀಸ್ ಅಧಿಕಾರಿಗಳಿಗೆ ಅಧಿಕಾರವನ್ನು ಒದಗಿಸುತ್ತದೆ.
ಬಿಲ್‌ನ ಸೆಕ್ಷನ್ 15 ರ ಪ್ರಕಾರ:ನೋಂದಣಿರಹಿತ ಮತ್ತು ಪರವಾನಗಿ ಇಲ್ಲದ ಸಂಸ್ಥೆ, ಲೇವಾದೇವಿದಾರರಿಂದ ದುರ್ಬಲ ವರ್ಗಗಳ ಜನರು ಪಡೆದ ಸಾಲ ಮತ್ತು ಬಡ್ಡಿ ಮನ್ನಾ ಮಾಡಲಾಗುತ್ತದೆ. ಬಡ್ಡಿ ಸೇರಿದಂತೆ ಅಸಲಿನ ವಸೂಲಾತಿಗಾಗಿ ಸಾಲಗಾರನ ವಿರುದ್ಧ ಯಾವುದೇ ಮೊಕದ್ದಮೆ ಅಥವಾ ವಿಚಾರಣೆಯನ್ನು ಯಾವುದೇ ಸಿವಿಲ್ ನ್ಯಾಯಾಲಯ ನಡೆಸುವಂತಿಲ್ಲ. ದುರ್ಬಲ ವರ್ಗಗಳೆಂದರೆ ರೈತರು, ಮಹಿಳೆಯರು, ಕೃಷಿ ಕಾರ್ಮಿಕರು, ಫುಟ್‌ಪಾತ್ ಮಾರಾಟಗಾರರು, ಡೈರಿ ಕಾರ್ಮಿಕರು, ವಲಸೆ ಕಾರ್ಮಿಕರು ಮತ್ತು ಅನುಕೂಲವಿಲ್ಲದ ಜನರು ಎಂದು ಮಸೂದೆಯಲ್ಲಿ ಹೇಳಲಾಗಿದೆ.