
ಉಡುಪಿ: ದಿನಾಂಕ : 07-02-2025 (ಹಾಯ್ ಉಡುಪಿ ನ್ಯೂಸ್) ಗಂಡ ಹಾಗೂ ಗಂಡನ ಮನೆಯವರ ಮಾನಸಿಕ ದೈಹಿಕ ಹಿಂಸೆಯಿಂದ ಜೀವ ಭಯದಿಂದ ತವರು ಮನೆಗೆ ವಾಪಾಸಾಗಿದ್ದ ಮಹಿಳೆಗೆ ಗಂಡ ಜೀವ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
ಮಣಿಪಾಲ, ಅಲೆವೂರು ರಸ್ತೆ ನಿವಾಸಿ ಶ್ರುತಿ (37) ಹಾಗೂ ರಜೀತ್ ಎಂಬವರ ವಿವಾಹ ಮಂಗಳೂರು ಬಂಟರ ಸಭಾ ಭವನದಲ್ಲಿ ದಿನಾಂಕ:26-01-2015 ರಂದು ನಡೆದಿದ್ದು, ಮದುವೆಗೆ ಸುಮಾರು 30 ಲಕ್ಷ ಖರ್ಚಾಗಿದ್ದು, ಶ್ರುತಿ ಯವರ ಮನೆಯವರೇ ಮದುವೆಯ ಖರ್ಚನ್ನು ಭರಿಸಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಶ್ರುತಿರವರಿಗೆ 9 ವರ್ಷದ ಹೆಣ್ಣು ಮಗುವಿದೆ. ಮದುವೆ ಆದ ಕೆಲವೇ ದಿನದಲ್ಲಿ ಶ್ರುತಿ ರವರಿಗೆ ಗಂಡ ರಜೀತ್ ಅವರ ದುರ್ವರ್ತನೆಯ ಬಗ್ಗೆ ತಿಳಿದು ಬಂದಿದ್ದು, ಗಂಡ ರಜೀತ್ ಶ್ರುತಿ ಯವರಿಗೆ ಹಲ್ಲೆ ಮಾಡಿ ಹೆದರಿಸುತ್ತಿದ್ದನು. ಶೀಲಾವತಿ ಹಾಗೂ ಶಶಿಕಲಾ ಇವರು ಗಂಡನ ತಾಯಿ ಮತ್ತು ಚಿಕ್ಕಮ್ಮ ನವರಾಗಿದ್ದು ಅವರು ಶ್ರುತಿ ರವರಿಗೆ ದಬ್ಬಾಳಿಕೆಯಿಂದ ಬೈದು ಮಾನಸಿಕ ಹಿಂಸೆ ನೀಡಿ ಆಗಾಗ್ಗೆ ಶ್ರುತಿ ರವರನ್ನು ಮನೆಯಿಂದ ಹೊರಗೆ ಹಾಕುವ ಪ್ರಯತ್ನ ಮಾಡಿರುತ್ತಾರೆ ಎಂದು ಶ್ರುತಿ ಯವರು ದೂರಿನಲ್ಲಿ ತಿಳಿಸಿದ್ದಾರೆ.
ಅದಕ್ಕೆ ಗಂಡನಾದ ರಜೀತನು ತನ್ನ ತಾಯಿ ಮತ್ತು ಚಿಕ್ಕಮ್ಮರಿಗೆ ಬೆಂಬಲ ನೀಡಿರುತ್ತಾನೆ. ಗಂಡ ರಜೀತನಿಂದ ತನಗೆ ಹಾಗೂ ತನ್ನ ಮಗುವಿಗೆ ಜೀವಕ್ಕೆ ತೊಂದರೆ ಇದೆ ಎಂದು ಶ್ರುತಿ ರವರು ದಿನಾಂಕ 22/12/2023 ರಂದು ತನ್ನ ತಾಯಿ ಮನೆಯಾದ ಮಣಿಪಾಲಕ್ಕೆ ಬಂದಿದ್ದು, ಈಗ ಕೆಲವು ತಿಂಗಳ ಹಿಂದೆ ಆರೋಪಿ ಗಂಡ ರಜೀತನು ಶ್ರುತಿ ರವರ ತಾಯಿ ಮನೆಯಾದ ಮಣಿಪಾಲಕ್ಕೆ ಬಂದು ಶ್ರುತಿರವರಿಗೆ ಜೀವ ಬೆದರಿಕೆ ಹಾಕಿರುತ್ತಾನೆ ಎಂದಿದ್ದಾರೆ . ದಿನಾಂಕ: 17/12/2024 ರಂದು ಶ್ರುತಿ ರವರು ಈ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿ ವಿಚಾರಣೆ ಆಗಿದ್ದು, ಮರು ದಿನ ಶ್ರುತಿ ರವರನ್ನು ಮನೆಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದ ಗಂಡ ರಜೀತನು ಇದುವರೆಗೂ ಮನೆಗೆ ಕರೆದುಕೊಂಡು ಹೋಗದೇ ಈಗ ಜೀವ ಬೆದರಿಕೆ ಹಾಕಿದ್ದಾನೆ ಎಂದು ಶ್ರುತಿ ರವರು ಪೊಲೀಸರಿಗೆ ದೂರು ನೀಡಿದ್ದಾರೆ.
ಶ್ರುತಿ ರವರು ನೀಡಿದ ದೂರಿನಂತೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಲಂ: 85, 115(2), 352, 351(2) BNS ರಂತೆ ಪ್ರಕರಣ ದಾಖಲಾಗಿದೆ.