
ಕುಂದಾಪುರ: ದಿನಾಂಕ:06-02-2025(ಹಾಯ್ ಉಡುಪಿ ನ್ಯೂಸ್) ಗಂಡ ಹಾಗೂ ಗಂಡನ ಮನೆಯವರು ಮಾನಸಿಕ, ದೈಹಿಕ ಹಿಂಸೆಯನ್ನು ನೀಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ನೊಂದ ಮಹಿಳೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ವಕ್ವಾಡಿ ಗ್ರಾಮ, ಮೂಡುಗೋಪಾಡಿ ನಿವಾಸಿ ಜಾಯಿನಾ (35) ಎಂಬವರು ಆರೋಪಿ ಅಬ್ದುಲ್ ಹನೀಪ್ ಎಂಬವರೊಂದಿಗೆ ದಿನಾಂಕ 22-05-2014 ರಂದು ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಮದುವೆಯ ನಂತರ ಆತನ ಮನೆಯಾದ ಕಾಪು ತಾಲೂಕು, ಮಲ್ಲಾರು ಗ್ರಾಮದ, ಕೊಂಬಗುಡ್ಡೆ ಕಲ್ಲಪು ಹೌಸ್ ಎಂಬಲ್ಲಿಗೆ ಕರೆದುಕೊಂಡು ಹೋಗಿ ಅಲ್ಲಿ ವಾಸ್ತವ್ಯವಿದ್ದು, ಮದುವೆ ನಂತರ 4 ದಿನದಲ್ಲಿಯೇ ಆರೋಪಿ ಅಬ್ದುಲ್ ಹನೀಫ್ ಜಾಯಿನಾರವರಿಗೆ ಸಂಶಯದಿಂದ ಗಲಾಟೆ ಮಾಡಿ ಹಲ್ಲೆ ಮಾಡಿರುತ್ತಾನೆ ಹಾಗೂ ನಂತರ ಉಳಿದ ಆರೋಪಿತರುಗಳಾದ ಜೊಹರಾ , ನಜೀರ , ಬುಶ್ರ ಜುಬೇದ ರವರುಗಳು ಜಾಯಿನಾರವರಿಗೆ ಚುಚ್ಚಿ ಮಾತನಾಡಿ, ಬೈದು ಮಾನಸಿಕ ಹಿಂಸೆ ನೀಡುತ್ತಿದ್ದು ಹಿಯಾಳಿಸಿ, ಅವಾಚ್ಯವಾಗಿ ಬೈದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುತ್ತಾರೆ. ಅಲ್ಲದೇ ಈ ವಿಚಾರವನ್ನು ತವರು ಮನೆಯವರಿಗೆ ಹೇಳಿದರೆ ಕೈಕಾಲು ಕಡಿದು ಕೊಂದು ಹಾಕುವುದಾಗಿ ಬೆದರಿಕೆ ಹಾಕಿರುತ್ತಾರೆ ಎಂದು ಜಾಯಿನಾರವರು ದೂರಿನಲ್ಲಿ ತಿಳಿಸಿದ್ದಾರೆ.
ನಂತರ ಆರೋಪಿ ಅಬ್ದುಲ್ ಹನೀಫ್ ನು ಜಾಯಿನಾರೊಂದಿಗೆ ಜಗಳ ಮಾಡಿ, ಕೆಲಸಕ್ಕೆ ವಿದೇಶಕ್ಕೆ ಹೋಗಿದ್ದು ನಂತರ ಜಾಯಿನಾ ರೊಂದಿಗೆ ಹಾಗೂ ಮಕ್ಕಳೊಂದಿಗೆ ಸರಿಯಾಗಿ ಮಾತನಾಡದೇ, ಖರ್ಚಿಗೆ ಹಣವನ್ನೂ ನೀಡದೇ ಕಿರುಕುಳ ನೀಡಿರುತ್ತಾನೆ ಎಂದು ದೂರು ನೀಡಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕಲಂ 85, 115(2), 352, 351(2) R/W 3(5) BNS ರಂತೆ ಪ್ರಕರಣ ದಾಖಲಾಗಿದೆ.