
ಪಡುಬಿದ್ರಿ: ದಿನಾಂಕ:23-01-2025(ಹಾಯ್ ಉಡುಪಿ ನ್ಯೂಸ್) ಸಾಲ ಮರುಪಾವತಿ ಮಾಡಿಲ್ಲ ಎಂದು ನಡ್ಸಾಲು ಗ್ರಾಮದ ಯಕ್ಷಗಾನ ಕಲಾವಿದರೋರ್ವರಿಗೆ ಬಡ್ಡಿ ವ್ಯಾಪಾರಿ ಗಳು ಬೆತ್ತದಿಂದ ಅಮಾನುಷವಾಗಿ ಹಲ್ಲೆ ನಡೆಸಿರುವ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ .
ಕಾಪು ನಡ್ಸಾಲು ಗ್ರಾಮದ ನಿವಾಸಿ ನಿತಿನ ಕುಮಾರ್ (31) ಎಂಬವರು ಯಕ್ಷಗಾನ ಕಲಾವಿದನೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿ ಕೊಂಡಿದ್ದಾರೆ.
ನಿತಿನ ಕುಮಾರ್ ರವರು ಆರೋಪಿ ಸಚಿನ್ ಎಂಬಾತನಿಂದ 2020 ನೇ ಇಸವಿಯಲ್ಲಿ ಬಡ್ಡಿಗೆ ಸಾಲ ಪಡೆದುಕೊಂಡು ಅಸಲು ಹಾಗೂ ಬಡ್ಡಿ ಕಟ್ಟುತ್ತಾ ಬಂದಿದ್ದು, ನಿಗದಿತ ಸಮಯದೊಳಗೆ ಸಾಲವನ್ನು ಕಟ್ಟುತ್ತಿಲ್ಲಾ ಎಂಬ ಕಾರಣದಿಂದ ಆರೋಪಿ ಸಚಿನ್ ಹಾಗೂ ಆತನ ತಂದೆ ಕುಶಾಲಣ್ಣ ದಿನಾಂಕ 21/01/2025 ರಂದು ನಿತಿನ ಕುಮಾರ್ ರನ್ನು ಪಡುಬಿದ್ರೆಯ ಎಸ್.ಎಸ್ ಬಾರ್ ಬಳಿಯಿಂದ ಮನೆಯಲ್ಲಿ ಕುಳಿತು ಮಾತನಾಡುವ ಎಂದು ಹೇಳಿ ನಿತಿನ ಕುಮಾರ್ ರವರನ್ನು ಆರೋಪಿ ಕುಶಾಲಣ್ಣ ಅವರ ಕಾರಿನಲ್ಲಿ ಉದ್ಯಾವರದಲ್ಲಿ ಇರುವ ಆತನ ಮನೆಗೆ ಮದ್ಯಾಹ್ನ ಕರೆದುಕೊಂಡು ಹೋಗಿ, ಅಲ್ಲಿ ಮನೆಯಲ್ಲಿ ನಿತಿನ ಕುಮಾರ್ ರವರನ್ನು ಬಾಲಾತ್ಕಾರವಾಗಿ ಕೂಡಿ ಹಾಕಿ ಆರೋಪಿ ಸಚಿನ್ ,ಕುಶಾಲಣ್ಣ ಹಾಗೂ ಪೈನಾನ್ಸ್‌ನವ ಎಂದು ಹೇಳಿಕೊಳ್ಳುವ ಇನ್ನೋರ್ವ ವ್ಯಕ್ತಿ ಮನೆಗೆ ಬಂದು ಅವರು ಮೂವರೂ ಸೇರಿ ನಿತಿನ ಕುಮಾರ್ ರವರಿಗೆ ಅವರ ಮನೆಯಲ್ಲಿ ಇದ್ದ ಕಂಬಳದ ಕೋಣಗಳಿಗೆ ಹೊಡೆಯುವ ಬೆತ್ತದಿಂದ ಬೆನ್ನಿಗೆ, ತಲೆಗೆ, ಕಾಲಿಗೆ ಹೊಡೆದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಅಲ್ಲದೆ ಕಾಲಿನಿಂದ ತುಳಿದು ಕೈಯಿಂದ ಕೆನ್ನೆಗೆ ಹೊಡೆದು ಖಾಲಿ ಬಾಂಡ್ ಪೇಪರ್‌ಗೆ ನಿತಿನ ಕುಮಾರ್ ರಿಂದ ಬಲಾತ್ಕಾರವಾಗಿ ಸಹಿ ಪಡೆದುಕೊಂಡು ಸಂಜೆ 6:00 ಗಂಟೆಗೆ ಕಳುಹಿಸಿಕೊಟ್ಟಿದ್ದರು ಎಂದು ದೂರಿದ್ದಾರೆ
ಅನಿವಾರ್ಯ ಕಾರಣದಿಂದ ದಿನಾಂಕ 21/01/2025 ರಂದು ರಾತ್ರಿ ವೇಳೆ ಪುತ್ತೂರಿನಲ್ಲಿ ನಡೆಯುವ ಯಕ್ಷಗಾನಕ್ಕೆ ಹೋಗಿ ಅಲ್ಲಿ ಕೆಲಸ ಮಾಡಿ ದಿನಾಂಕ 22/01/2025 ರಂದು ಬೆಳಿಗ್ಗೆ ಮನೆಗೆ ಬಂದಿದ್ದು ನೋವು ಜಾಸ್ತಿಯಾಗಿದ್ದರಿಂದ ಪಡುಬಿದ್ರೆ ಸಿದ್ದಿವಿನಾಯಕ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.
ನಿತಿನ ಕುಮಾರ್ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಕಲಂ: 115(2),118(1),308(5), 127(8), 351(3),352 ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.