ದಿನಾಂಕ:14-01-2025(ಹಾಯ್ ಉಡುಪಿ ನ್ಯೂಸ್)
2023ರ ಅಕ್ಟೋಬರ್ 7ರಂದು ಹಮಾಸ್ ಮಾರಣಾಂತಿಕ ದಾಳಿ ನಡೆಸಿತ್ತು ಹಾಗೂ ನೂರಾರು ಮಂದಿಯನ್ನು ಅಪಹರಿಸಿ ಒತ್ತೆಯಾಳುಗಳನ್ನಾಗಿ ಮಾಡಿಕೊಂಡಿತ್ತು.
ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಕೊನೆಗೂ ನಿಲ್ಲುವ ಹಂತಕ್ಕೆ ಬಂದು ತಲುಪಿದೆ. ಗಾಜಾ ಕದನ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆ ಕುರಿತು ಕರಡು ಒಪ್ಪಂದವನ್ನು ಹಮಾಸ್ ಒಪ್ಪಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಸ್ರೇಲ್ ಸಹ ಒಪ್ಪಂದವನ್ನು ಪರಿಗಣಿಸಲಿದೆ. ಸೋಮವಾರವೇ ಕದನ ವಿರಾಮದ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದರು. ಕದನ ವಿರಾಮ ಮಾತುಕತೆಯಲ್ಲಿನ ಪ್ರಗತಿಯನ್ನು ಒಪ್ಪಿಕೊಂಡ ಅಧಿಕಾರಿಗಳು, ಪಶ್ಚಿಮ ಏಷ್ಯಾದ ಬಹುಭಾಗವನ್ನು ಅಸ್ಥಿರಗೊಳಿಸಿರುವ ಈ ಯುದ್ಧವನ್ನು ಕೊನೆಗೊಳಿಸಲು ಮುಂಬರುವ ದಿನಗಳು ನಿರ್ಣಾಯಕವಾಗುತ್ತವೆ ಎಂದು ಹೇಳಿದ್ದರು.
2023ರ ಅಕ್ಟೋಬರ್ 7ರಂದು ಹಮಾಸ್ ನಡೆಸಿದ್ದ ಮಾರಣಾಂತಿಕ ದಾಳಿ ಹಾಗೂ ನೂರಾರು ಮಂದಿಯನ್ನು ಅಪಹರಿಸಿ ಒತ್ತೆಯಾಳುಗಳನ್ನಾಗಿ ಮಾಡಿಕೊಂಡಿತ್ತು. ನಂತರ ಇಸ್ರೇಲ್ ಗಾಜಾಪಟ್ಟಿ ಮೇಲೆ ದಾಳಿ ಶುರು ಮಾಡಿತ್ತು. ನಂತರ ಹಮಾಸ್ ನ ಪ್ರಮುಖ ಉಗ್ರರನ್ನು ಹತ್ಯೆ ಮಾಡಿದ್ದ ಇಸ್ರೇಲ್ ಹಮಾಸ್ ನ ಆರ್ಥಿಕ ಮೂಲಗಳ ಬೇರುಗಳನ್ನು ನಾಶಪಡಿಸಿತ್ತು. ನಂತರ ಕದನ ವಿರಾಮ ಕುರಿತಂತೆ ಮಾತುಕತೆಗಳು ಶುರುವಾಗಿದ್ದವು. ಇದೀಗ ಕದನ ವಿರಾಮಕ್ಕೆ ಹಮಾಸ್ ಮುಂದಾಗಿದೆ. ಇನ್ನು ಒತ್ತೆಯಾಳುಗಳ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳಲು ಯುನೈಟೆಡ್ ಸ್ಟೇಟ್ಸ್, ಈಜಿಪ್ಟ್ ಮತ್ತು ಕತಾರ್ ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸಿವೆ. ಗಾಜಾದೊಳಗೆ ಇನ್ನೂ ಸುಮಾರು 100 ಇಸ್ರೇಲಿ ಒತ್ತೆಯಾಳುಗಳಿದ್ದಾರೆ ಮತ್ತು ಅವರಲ್ಲಿ ಕನಿಷ್ಠ ಮೂರನೇ ಒಂದು ಭಾಗದಷ್ಟು ಜನರು ಸತ್ತಿದ್ದಾರೆ ಎಂದು ಸೇನೆ ಹೇಳುತ್ತಿದೆ.
ಮಾತುಕತೆ ಕುರಿತಂತೆ ಮಾತನಾಡಿರುವ ಅಧಿಕಾರಿಯೊಬ್ಬರು ಹೇಳಿರುವಂತೆ ರಾತ್ರೋರಾತ್ರಿ ಪ್ರಗತಿ ಸಾಧಿಸಲಾಗಿದೆ. ಒಪ್ಪಂದದ ಪ್ರಸ್ತಾವಿತ ಕರಡನ್ನು ಮಂಡಿಸಲಾಗಿದೆ ಎಂದು ಹೇಳಿದರು. ಇಸ್ರೇಲಿ ಮತ್ತು ಹಮಾಸ್ ಸಮಾಲೋಚಕರು ಈಗ ಅದನ್ನು ಅಂತಿಮ ಅನುಮೋದನೆಗಾಗಿ ತಮ್ಮ ನಾಯಕರಿಗೆ ಕಳುಹಿಸುತ್ತಾರೆ ಎಂದು ವಿವರಿಸಿದರು. ಗಲ್ಫ್ ರಾಷ್ಟ್ರ ಕತಾರ್‌ನ ಮಧ್ಯವರ್ತಿಗಳು ಒಪ್ಪಂದವನ್ನು ಒಪ್ಪಿಕೊಳ್ಳುವಂತೆ ಹಮಾಸ್ ಮೇಲೆ ಹೊಸ ಒತ್ತಡ ಹೇರಿದ್ದಾರೆ. ಮತ್ತೊಂದೆಡೆ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಾಯಭಾರಿ ಸ್ಟೀವ್ ವಿಟ್ಕಾಫ್ ಇಸ್ರೇಲಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಆ ವ್ಯಕ್ತಿ ಹೇಳಿದ್ದಾರೆ.
ಕದನ ವಿರಾಮದಲ್ಲಿ ಉತ್ತಮ ಪ್ರಗತಿ ಕಂಡುಬಂದಿದೆ. ಆದರೆ ಇದು ಇನ್ನೂ ಕೆಲವು ದಿನ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಈಜಿಪ್ಟ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜನವರಿ 20ರಂದು ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುವ ಮೊದಲು ಈ ಒಪ್ಪಂದವನ್ನು ಸಾಧಿಸುವ ಗುರಿ ಇದೆ ಎಂದು ಅಧಿಕಾರಿ ಹೇಳಿದ್ದಾರೆ.