ಮತ್ತೆ ಮತ್ತೆ ಇದು ದೃಢಪಡುತ್ತಲೇ ಇದೆ. ಬಹುತೇಕ ಕರ್ನಾಟಕ ನಕ್ಸಲ್ ಮುಕ್ತವಾಗಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ. ಅಳಿದುಳಿದ ಈ ಕೆಲವು ಕೆಂಪು ಯೋಧರಿಗೂ ಕೊನೆಗೂ ಸಂವಿಧಾನದ ಆಶಯದಲ್ಲಿ ನಂಬಿಕೆ ಭರವಸೆ ಹುಟ್ಟಿ ಸರ್ಕಾರಕ್ಕೆ ಶರಣಾಗಿದ್ದಕ್ಕಾಗಿ ಮತ್ತು ಅದಕ್ಕೆ ಅವಕಾಶ ಕಲ್ಪಿಸಿದ ಎಲ್ಲಾ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳಿಗೂ ಧನ್ಯವಾದಗಳು…….
ಏಕೆಂದರೆ ಮುಂದೆ ಆಗಬಹುದಾದ ಅನಾಹುತಗಳ ಸಾಧ್ಯತೆ ಇದ್ದ ನಕ್ಸಲರ ಪ್ರಾಣಹಾನಿ, ಅವರು ಕೊಲ್ಲಬಹುದಾಗಿದ್ದ ಇನ್ನೊಂದಷ್ಟು ಪೊಲೀಸರ ಜೀವಗಳು ಅಥವಾ ಇಬ್ಬರಿಂದಲೂ ಆಕಸ್ಮಿಕವಾಗಿ ಅಥವಾ ಅನಿವಾರ್ಯವಾಗಿ ಅಥವಾ ಉದ್ದೇಶಪೂರ್ವಕವಾಗಿ ಆಗಬಹುದಾಗಿದ್ದ ಇತರ ಯಾರೇ ಆಗಿರಲಿ ಅಷ್ಟೂ ಜನರ ಜೀವ ಉಳಿಯಿತು ಎಂಬುದೇ ಸಂತೋಷ…..
ಈ ಸಂದೇಶ ಕರ್ನಾಟಕದಿಂದ ರಾಷ್ಟ್ರದ ನಕ್ಸಲ್ ಪೀಡಿತ ಆಂಧ್ರಪ್ರದೇಶ, ಒರಿಸ್ಸಾ, ಮಧ್ಯಪ್ರದೇಶ, ಜಾರ್ಖಂಡ್, ಛತ್ತೀಸ್ಗಡ, ಬಿಹಾರ, ಮಹಾರಾಷ್ಟ್ರ ಮುಂತಾದ ರಾಜ್ಯಗಳ ಎಲ್ಲಾ ನಕ್ಸಲರಿಗೂ ತಲುಪಿ, ಅಲ್ಲಿ ಮುಂದೆ ನಡೆಯಬಹುದಾದ ಪೊಲೀಸ್ ಮತ್ತು ನಕ್ಸಲರ ಭಯಂಕರ ಹತ್ಯಾಕಾಂಡ ನಿಂತರೆ ಅದಕ್ಕಿಂತ ಸಂತೋಷ ಯಾವುದೂ ಇಲ್ಲ….
ನಿಜಕ್ಕೂ ಸರ್ಕಾರಗಳು ಮತ್ತು ಅದಕ್ಕಿಂತ ಮುಖ್ಯವಾಗಿ ನಕ್ಸಲರೇ ಹೆಚ್ಚು ಮಾನವೀಯತೆಯಿಂದ ಈ ಶರಣಾಗತಿಯ ವಿಷಯ ಯೋಚಿಸಬೇಕಾಗಿದೆ. ಏಕೆಂದರೆ ಶಸ್ತ್ರಾಸ್ತ್ರ ಹೋರಾಟಗಳು ಮುಗಿದಿವೆ ಮತ್ತು ಅದು ವ್ಯರ್ಥ, ಜೊತೆಗೆ ಅತ್ಯಂತ ಅಮಾನವೀಯ. ಅದನ್ನು ಯಾವ ದೃಷ್ಟಿಯಿಂದಲೂ ಸಮರ್ಥಿಸಲು ಸಾಧ್ಯವಿಲ್ಲ……
ಅದಕ್ಕೆ ಬದಲಾಗಿ ಇನ್ನು ಮುಂದೆ ಪೆನ್ನು, ಪತ್ರಿಕೆ, ಭಾಷಣ, ಎಲೆಕ್ಟ್ರಾನಿಕ್ ಮಾಧ್ಯಮ, ಸಾಮಾಜಿಕ ಜಾಲತಾಣಗಳ ಮೂಲಕ ಶಾಂತಿ, ಅಹಿಂಸೆ, ಸತ್ಯಾಗ್ರಹ, ಪ್ರತಿಭಟನೆ, ಚಳವಳಿ ಎಂಬ ಅಸ್ತ್ರಗಳ ಮೂಲಕ ನಗರದ ನಕ್ಸಲ್ ಚಟುವಟಿಕೆಗಳು ಹೆಚ್ಚಾಗಲಿ…….
ನಕ್ಸಲ್ ಬಾರಿ ಎಂಬ ಹಳ್ಳಿಯಲ್ಲಿ ಪ್ರಾರಂಭವಾಗಿ, ನಕ್ಸಲ್ ಎಂದರೆ ಹಿಂಸೆ, ಕ್ರೌರ್ಯ, ಶಸ್ತ್ರಾಸ್ತ್ರ ಎಂದು ಕುಖ್ಯಾತಿ ಮತ್ತು ಪ್ರಖ್ಯಾತಿ ಪಡೆದ ನಕ್ಸಲ್ ಎಂಬ ಹೋರಾಟವೆಂದರೆ ಅದೊಂದು ಬಂಡಾಯ ಮನಸ್ಥಿತಿ. ವ್ಯವಸ್ಥೆಯ ಅನ್ಯಾಯದ ವಿರುದ್ಧ, ಶೋಷಣೆಯ ವಿರುದ್ಧ, ಅಕ್ರಮಗಳ ವಿರುದ್ಧ, ಭ್ರಷ್ಟಾಚಾರದ ವಿರುದ್ಧ, ಜಾತಿಯತೆಯ ವಿರುದ್ಧ, ಮತೀಯತೆಯ ವಿರುದ್ಧ, ಸ್ವಜನ ಪಕ್ಷಪಾತದ ವಿರುದ್ಧ, ಅನುವಂಶೀಯ ಆಡಳಿತದ ವಿರುದ್ಧ, ಬಂಡವಾಳ ಶಾಹಿಗಳ ದೌರ್ಜನ್ಯದ ವಿರುದ್ಧ, ಜಮೀನ್ದಾರರ ದಬ್ಬಾಳಿಕೆಯ ವಿರುದ್ಧ……….
ಹಾಗೆಯೇ ನಕ್ಸಲಿಸಂ ಎಂದರೆ ಸಮಾನತೆಯ ಪರ,
ಬಡವರ ಪರ,
ಧ್ವನಿ ಇಲ್ಲದವರ ಪರ, ಶೋಷಿತರ ಪರ, ಮಾನವೀಯತೆಯ ಪರ,
ಜೀವಪರ…….
ನಾವೆಲ್ಲರೂ ಜೀವನದಲ್ಲಿ ಯಾವುದೋ ಸಂದರ್ಭದಲ್ಲಿ ಮಾನಸಿಕವಾಗಿ ನಕ್ಸಲ್ ರೀತಿಯ ಮನೋಭಾವ ಒಂದಲ್ಲ ಒಂದು ರೀತಿಯಲ್ಲಿ ವ್ಯಕ್ತಪಡಿಸಿದವರೇ ಆಗಿರುತ್ತೇವೆ. ಏಕೆಂದರೆ ಬದುಕು ಮತ್ತು ಸಮಾಜ ಸದಾ ಸಂಕೀರ್ಣ ಮತ್ತು ಸಂಘರ್ಷಮಯವೇ ಆಗಿರುತ್ತದೆ……..
ಭಾರತೀಯ ನೆಲದಲ್ಲಿ ಆ ದೃಷ್ಟಿಯಿಂದ ನೋಡುವುದಾದರೆ ಗೌತಮ ಬುದ್ಧರು ಸಹ ಒಂದು ರೀತಿಯಲ್ಲಿ ನಕ್ಸಲರೇ. ಅವರ ಬಂಡಾಯ ಆಗಿನ ಸಮಕಾಲೀನ ಹಿಂಸೆಯ ವಿರುದ್ಧ ಕ್ಷಮೆ – ಕರುಣೆ, ಕ್ಷೋಬೆಯ ವಿರುದ್ಧ ಧ್ಯಾನ, ಅಸತ್ಯದ ವಿರುದ್ಧ ಸತ್ಯ, ಆಡಂಬರ ವಿರುದ್ಧ ಸರಳತೆ, ನೋವಿನ ವಿರುದ್ಧ ನಲಿವು, ಅಜ್ಞಾನದ ವಿರುದ್ಧ ಜ್ಞಾನ, ಅಂತಿಮವಾಗಿ ಜ್ಞಾನೋದಯ ನಕ್ಸಲ್ ಮನೋಭಾವವೇ…..
12 ನೆಯ ಶತಮಾನದ ವಚನ ಸಾಹಿತ್ಯ ಮತ್ತು ಸಂಸ್ಕೃತಿಯ ಬಸವಣ್ಣನವರ ನೇತೃತ್ವದ ಸಾಮಾಜಿಕ ಸಮಾನತೆಯ ಹೋರಾಟ ಸಹ ನಕ್ಸಲಿಸಂ ಅನ್ನೇ ಹೋಲುತ್ತದೆ. ಜಾತಿ ಪದ್ಧತಿಯ ವಿರುದ್ಧ, ಅಜ್ಞಾನ, ಅಂಧಕಾರ, ಮೌಢ್ಯ, ಲಿಂಗಭೇದದ ವಿರುದ್ಧ ಸಮಾನತೆಯ ಸಂಸ್ಕೃತಿ, ಮಾನವೀಯತೆಯ ಸಂಸ್ಕೃತಿ, ಸಮಾಜಕ್ಕೆ ಕಾಯಕ ಸಂಸ್ಕೃತಿಯನ್ನು ಪರಿಚಯಿಸಿದ ಬಸವಣ್ಣನವರ ಪ್ರಯತ್ನಗಳು ಸಹ ನಕ್ಸಲಿಸಂ ಹೋರಾಟದ ಲಕ್ಷಣಗಳನ್ನು ನೆನಪಿಸುತ್ತದೆ…….
ಭಾರತದ ಸಾಂಸ್ಕೃತಿಕ ರಾಯಭಾರಿ, ಈ ನೆಲದ ನಿಜವಾದ ಆಧ್ಯಾತ್ಮಿಕ ಸಂತ ಸ್ವಾಮಿ ವಿವೇಕಾನಂದರು ಸಹ ಬಹುದೊಡ್ಡ ನಕ್ಸಲರೇ ಎನ್ನಬಹುದು. ಭಾರತೀಯ ಮೌಲ್ಯಗಳಲ್ಲಿ, ಸನಾತನ ಧರ್ಮದಲ್ಲಿ ಅಡಕವಾಗಿದ್ದ ಎಲ್ಲಾ ಅನ್ಯಾಯ, ಅನೀತಿ, ಅಕ್ರಮ, ಸೋಗಲಾಡಿತನ, ಅಸಮಾನತೆ, ಮೇಲು-ಕೀಳು ಎಲ್ಲವನ್ನು ಒತ್ತಿ ಹೇಳುತ್ತಾ, ಇಲ್ಲಿನ ಮನುಷ್ಯ ಸಂಬಂಧಗಳು, ಮಾನವೀಯ ಮೌಲ್ಯಗಳು, ಪ್ರಾಮಾಣಿಕ ವರ್ತನೆಗಳು, ದರಿದ್ರ ನಾರಾಯಣರಲ್ಲಿ ದೇವರನ್ನು ಕಾಣುವ ಮನೋಭಾವ, ಸ್ತ್ರೀ ಗೌರವ ಮುಂತಾದವುಗಳ ಬಗ್ಗೆ ಇಡೀ ವಿಶ್ವಕ್ಕೆ ಪರಿಚಯಿಸಿದ ಸ್ವಾಮಿ ವಿವೇಕಾನಂದರ ವಿಚಾರಗಳು ಸಹ ನಕ್ಸಲಿಸಂನ ರೀತಿಯಲ್ಲೇ ಅರ್ಥೈಸಬಹುದು…….
ಹಾಗೆಯೇ ಮಹಾತ್ಮ ಗಾಂಧಿಯವರು ಸಹ ಒಂದು ರೀತಿಯ ನಕ್ಸಲರೇ. ಆಗ ಬ್ರಿಟಿಷರ ದೌರ್ಜನ್ಯದ ವಿರುದ್ಧ ಸ್ವಾತಂತ್ರ್ಯಕ್ಕಾಗಿ ತಮ್ಮದೇ ರೀತಿಯಲ್ಲಿ ಸತ್ಯ, ಅಹಿಂಸೆ, ಸರಳತೆ, ಕರ ನಿರಾಕರಣೆ, ಉಪವಾಸ, ಸತ್ಯಾಗ್ರಹಗಳೆಂಬ ಶಾಂತಿಯ ಸಂದೇಶದ ಮಾನಸಿಕ ಒತ್ತಡದ ಮೂಲಕ ನಕ್ಸಲಿಸಂ ಬುದ್ಧಿಯನ್ನು ತೋರಿದರು. ಕೇವಲ ಅವರು ಮಾತ್ರವಲ್ಲ, ಆಗಿನ ಜವಾಹರಲಾಲ್ ನೆಹರು, ವಲ್ಲಬಾಯ್ ಪಟೇಲ್, ಬಾಲಗಂಗಾಧರ ತಿಲಕ್, ಲಾಲ್ ಲಜಪತ್ ರಾಯ್ ಮುಂತಾದವರೆಲ್ಲರೂ ಸಹ ಇದೇ ರೀತಿ ಅಥವಾ ಸ್ವಲ್ಪ ಭಿನ್ನವಾಗಿ ಕೆಲವೊಮ್ಮೆ ಸಣ್ಣ ಶಸ್ತ್ರ ಹಿಡಿದು ಅಂದಿನ ಬ್ರಿಟಿಷರ ದಬ್ಬಾಳಿಕೆ, ದೌರ್ಜನ್ಯವನ್ನು ವಿರೋಧಿಸಿಯೇ ದೇಶಕ್ಕೆ ಸ್ವಾತಂತ್ರ್ಯ ಗಳಿಸಿಕೊಟ್ಟರು……
ಅಂದಿನ ಕಾಲಕ್ಕೆ ತಾನೊಬ್ಬ ಮುಟ್ಟಿಸಿಕೊಳ್ಳದ ವ್ಯಕ್ತಿಯಾಗಿ ಹುಟ್ಟಿ, ಅಪಾರ ಶೋಷಣೆ, ಅವಮಾನ ಅನುಭವಿಸಿ ಕೊನೆಗೆ ಅದರ ವಿರುದ್ಧ ಬಂಡಾಯದ ಚಟುವಟಿಕೆಗಳನ್ನು ಮಾಡಿಯೇ ತನ್ನ ಸಮುದಾಯ ಮತ್ತು ಹಾಗೆ ಅಸಮಾನತೆಯಿಂದ ನರಳುತ್ತಿದ್ದ ಎಲ್ಲಾ ದೀನ ದಲಿತರು, ಮಹಿಳೆಯರು, ಶೋಷಿತರು ಎಲ್ಲರಿಗೂ ಸ್ವಾಭಿಮಾನ, ಸ್ವಾತಂತ್ರ್ಯ, ಸ್ವಾವಲಂಬನೆ ಒದಗಿಸಲು ಜೀವನ ಪೂರ್ತಿ ಬಡಿದಾಡಿ, ಹೊಡೆದಾಡಿ, ಅವಮಾನಗಳನ್ನು ಸಹಿಸಿ ದೇಶಕ್ಕೆ ಸಂವಿಧಾನವನ್ನು ರಚಿಸಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಹ ಒಂದು ರೀತಿಯಲ್ಲಿ ನಕ್ಸಲರೇ……..
ಸ್ವಾತಂತ್ರ ನಂತರದಲ್ಲೂ ಅಂದಿನ ತುರ್ತು ಪರಿಸ್ಥಿತಿ, ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದು ಆಗಿನ ಬಲಿಷ್ಠ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರನ್ನು ಸೋಲಿಸಿ ತಮ್ಮ ನಕ್ಸಲ್ ರೀತಿಯ ಚಳುವಳಿಯನ್ನು ಕಟ್ಟಿದ ಶ್ರೀ ಜೈ ಪ್ರಕಾಶ್ ನಾರಾಯಣ್ ಅವರು ಸಹ ಅದೇ ವಿಭಾಗಕ್ಕೆ ಸೇರುತ್ತಾರೆ….
ಹೀಗೆ ವ್ಯವಸ್ಥೆಯ ವಿರುದ್ಧ ಹೋರಾಡುವುದು ಒಂದು ನಕ್ಷಲಿಸಂ ಸಿದ್ದಾಂತ. ಆದರೆ ಸದಾ ನೆನಪಿಡಿ, ಮೇಲೆ ಹೇಳಿದ ಯಾರೂ ಸಹ ಮಚ್ಚು, ಲಾಂಗು, ಬಂದೂಕುಗಳನ್ನು ಎಂದೂ ಕೈಯಲ್ಲಿ ಹಿಡಿಯಲಿಲ್ಲ. ಅದಕ್ಕೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬೆಂಬಲಿಸಲೂ ಇಲ್ಲ. ಕೇವಲ ಬಂಡಾಯದ ಮೂಲಕ ಅನ್ಯಾಯದ ವಿರುದ್ಧ ಹೋರಾಟವನ್ನು ಮಾಡಿದರು….
ಆದರೆ ನಕ್ಸಲ್ ಬಾರಿಯ ಈ ಕೆಂಪು ಹೋರಾಟಗಾರರು ತಮ್ಮ ಜೀವ ಮತ್ತು ಜೀವನವನ್ನು ಹಾನಿ ಮಾಡಿಕೊಂಡರಲ್ಲದೇ, ನಮ್ಮ ದೇಶದ ರಕ್ಷಣೆಗಾಗಿ ಉದ್ಯೋಗದಲ್ಲಿದ್ದ ಅನೇಕ ಸೈನಿಕರು, ಅರೆ ಸೈನಿಕರು, ಪೊಲೀಸರು, ಹಾಗೆಯೇ ಇನ್ನೊಂದಿಷ್ಟು ಸಾಮಾನ್ಯ ಜನರ ಮೇಲು ಸಹ ದೌರ್ಜನ್ಯವೆಸಗಿದರು…..
ಆದ್ದರಿಂದ ಈ ಶಸ್ತ್ರಾಸ್ತ್ರ ಹೋರಾಟದ ನಕ್ಸಲರು ಮತ್ತು ನಕ್ಸಲಿಸಂ ಅವಸಾನವಾಗಲಿ. ಪೆನ್ನು ಹಿಡಿದ ನವ ನಕ್ಸಲರು ಮತ್ತಷ್ಟು ಮತ್ತಷ್ಟು ಉಗಮವಾಗಲಿ. ಭ್ರಷ್ಟ ಮುಕ್ತ, ಜಾತಿ ಮುಕ್ತ, ಸಮ ಸಮಾಜ ನಿರ್ಮಾಣವಾಗಲಿ…..
ಶಸ್ತ್ರ ತ್ಯಜಿಸಿ ಬಂದ ನಕ್ಸಲರು ಬಂಧ ಮುಕ್ತವಾದ ನಂತರ ಈಗಲಾದರೂ ಅಷ್ಟೇ ತೀಕ್ಷ್ಣವಾಗಿ ಮಾತು, ಕ್ರಿಯೆ, ಬರಹಗಳ ಮುಖಾಂತರ ತಮ್ಮ ನಕ್ಸಲ್ ಚಟುವಟಿಕೆ ಮುಂದುವರಿಸಲಿ….
ನಾವೆಲ್ಲರೂ ಅನ್ಯಾಯಗಳ ವಿರುದ್ಧ ಹೋರಾಡುವ, ಶಾಂತಿ ಅಹಿಂಸೆ, ಸತ್ಯಾಗ್ರಹ ಮಾಡುವ, ನಮ್ಮ ನ್ಯಾಯಯುತ ಹಕ್ಕುಗಳಿಗಾಗಿ ಪ್ರತಿಭಟಿಸುವ ನಕ್ಸಲರಾಗೋಣ…….
” ಮತ್ತೆ ದೃಢವಾಗಲಿ ಖಡ್ಗಕ್ಕಿಂತ ಲೇಖನಿಯೇ ಬಲಶಾಲಿ…..”
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನ ಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068……….