ಬೈಂದೂರು: ದಿನಾಂಕ :09-01-2025(ಹಾಯ್ ಉಡುಪಿ ನ್ಯೂಸ್) ಯೆಳಜಿತ್ ಗ್ರಾಮದ ಕಡಕೋಡು ಎಂಬಲ್ಲಿನ ಸರಕಾರಿ ಜಮೀನಿನಲ್ಲಿ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಇಬ್ಬರ ಮೇಲೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಶ್ವಿನಿ ಎಂ.ಎಂ (33) ಅವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಡುಪಿಯಲ್ಲಿ ಭೂ ವಿಜ್ಞಾನಿಯಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು , ದಿನಾಂಕ 08/01/2025 ರಂದು ಅವರ ಕಚೇರಿಯಲ್ಲಿರುವಾಗ ಬೈಂದೂರು ಪೊಲೀಸ್ ಠಾಣೆಯ ಪಿ ಎಸ್ ಐ (ಕಾಸು) ರವರು ಅವರ ಮೇಲಾಧಿಕಾರಿಯವರು ಯೆಳಜಿತ್ ಗ್ರಾಮದ ಕಡಕೋಡು ಎಂಬಲ್ಲಿ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಲು ಕೋರಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಕೋರಿಕೆಯ ಮೇರೆಗೆ ಅಶ್ವಿನಿ ಎಂ.ಎಂ ರವರು ಬೈಂದೂರು ಠಾಣಾ ಪಿ ಎಸ್ ಐ (ಕಾಸು) ಹಾಗೂ ಸಿಬ್ಬಂದಿಗಳು, ಅರಣ್ಯ ಇಲಾಖೆಯ ಸಿಬ್ಬಂದಿಗಳು, ಕಂದಾಯ ಇಲಾಖೆಯ ಸಿಬ್ಬಂದಿಯವರೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಯೆಳಜಿತ್ ಗ್ರಾಮದ ಕಡಕೋಡು ಎಂಬಲ್ಲಿ ಸರ್ವೆ ನಂಬ್ರ 12/* ರಲ್ಲಿನ ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ಕೆಂಪು ಕಲ್ಲು ಗಣಿಗಾರಿಕೆ ಮಾಡುತ್ತಿರುವುದು ಕಂಡು ಬಂದಿದೆ ಎನ್ನಲಾಗಿದೆ.ಅಧಿಕಾರಿಗಳು ಪರಿಶೀಲಿಸಿದಾಗ 0.16 ಎಕ್ರೆ ಪ್ರದೇಶದಲ್ಲಿ ಸುಮಾರು 1.5 ಮೀಟರ್ ಆಳದವರೆಗೆ 700 ಮೆಟ್ರಿಕ್ ಟನ್ ಕೆಂಪು ಕಲ್ಲು ಸರ್ಕಾರಿ ಜಾಗದಲ್ಲಿ ತೆಗೆದಿರುವುದು ಕಂಡು ಬಂದಿರುತ್ತದೆ. ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದ ರಾಮ ಎಂಬುವವನಲ್ಲಿ ಈ ಬಗ್ಗೆ ವಿಚಾರಿಸಿದಾಗ ಇದು ನನ್ನ ಸ್ವಾಧೀನದ ಕುಮ್ಕಿ ಸ್ಥಳವಾಗಿದ್ದು ನಾನು ಗುರುರಾಜ ನೊಂದಿಗೆ ಕೆಂಪು ಕಲ್ಲು ತೆಗೆಯುತ್ತಿರುವುದಾಗಿ ತಿಳಿಸಿರುತ್ತಾನೆ ಎಂದಿದ್ದಾರೆ. ಸ್ಥಳದಲ್ಲಿದ್ದ ಕೆಂಪು ಕಲ್ಲು ತೆಗೆಯಲು ಉಪಯೋಗಿಸಿರುವ ಪವರ್ ಟಿಲ್ಲರ್ -1, ಕಲ್ಲು ಎಬ್ಬಿಸುವ ಟ್ರಾಲಿ ಮಿಶಿನ್-01, ಕೆಂಪು ಕಲ್ಲು ಕಟ್ಟ್ ಮಾಡಲು ಬಳಸಿದ ಮೊಳೆಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಆರೋಪಿಗಳಾದ ರಾಮ ಹಾಗೂ ಗುರುರಾಜ ಇವರಿಬ್ಬರೂ ಸಂಘಟಿತರಾಗಿ ಸೇರಿಕೊಂಡು ಸರ್ಕಾರಿ ಜಾಗದಲ್ಲಿರುವ ಕೆಂಪು ಕಲ್ಲುಗಳನ್ನು ಅಕ್ರಮವಾಗಿ ತೆಗೆದು ತಮ್ಮ ಸ್ವಂತ ಲಾಭಕ್ಕೋಸ್ಕರ ಕಳವು ಮಾಡಿ ಸಂಘಟಿತ ಅಪರಾಧ ಎಸಗಿದ್ದಾರೆ ಎಂದು ಅಧಿಕಾರಿಗಳು ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಕಲಂ: 303 (2), 112 ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.