ನಿನಗಿಂತ ಅವರೆಷ್ಟೋ ಶ್ರೇಷ್ಠರು
ನಿನ್ನ ಕಾರ್ಪೊರೇಟ್ ಅಂತರ್ಮುಖ
ಬಹಿರಂಗಗೊಳ್ಳುವ ಮೊದಲೇ ಅರಿತುಕೊಂಡವರು
ಕಲ್ಲು,ಮುಳ್ಳ ಮೆಟ್ಟುತ್ತ ಧ್ಯೇಯಕ್ಕಾಗಿ ಮುನ್ನಡೆದವರು
ಅಜ್ಞಾತರಾಗಿದ್ದರೂ ಪ್ರಜ್ಞಾವಂತರಾಗಿರುವವರು
ಕೇಳು ಪ್ರಭುತ್ವವೇ ಅವರು ಈ ನೆಲದ ಮಕ್ಕಳು
ಕೇಳು ಪ್ರಭುತ್ವವೇ…. ಅವರು,
ಅಭಯಾರಣ್ಯ, ರಕ್ಷಿತಾರಣ್ಯ ಹೆಸರಿನಲ್ಲಿ ನರಕ ಕಂಡವರು
ನಿನ್ನ ಪಡೆಯ ಬೂಟುಗಾಲಿನ ತುಳಿತ ಅನುಭವಿಸಿದವರು
ಇರುವ ಗುಡಿಸಲನ್ನೂ ಕಳೆದುಕೊಂಡು ಬೀದಿಗೆ ಬಿದ್ದವರು
ನಿನ್ನ ಪ್ರತಿರೂಪ ‘ಧಣಿಗಳ’ ದೌರ್ಜನ್ಯಕ್ಕೆ ತುತ್ತಾದವರು
ನಿನ್ನ ಕಪಟ ಮರುಕ ಕಂಡು ಕಣ್ಣೀರಾದವರು, ಕೆಚ್ಚಾದವರೂ…
ನಿನ್ನ ಬಣ್ಣ ಬದಲಿಸುವ ಚಾಳಿಗೆ ಎದುರಾಗಿ
ಕೆಂಬಣ್ಣವ ಹೊದ್ದವರು
ಕೇಳು ಪ್ರಭುತ್ವವೇ…
ನಿನ್ನ ಜಾತಿ, ಧರ್ಮದ ವಿಭಜನೆಯ
ಷಡ್ಯಂತ್ರದ ವಿರುದ್ಧ
ಜೀವಪರ ಹೋರಾಟ ನಡೆಸಿದವರು
ಕೇಳು ಪ್ರಭುತ್ವವೇ…
ನಿನ್ನಷ್ಟು ಕ್ರೂರಿಗಳಲ್ಲ ಅವರು
ಸಂತ್ರಸ್ತರ ಹೆಸರಿನಲ್ಲಿ
ಕೊಳಕು ರಾಜಕಾರಣ ಮಾಡುವಷ್ಟು,
ಪರಿಹಾರದ ದುಡ್ಡನ್ನೇ ತಿಂದು ತೇಗುವಷ್ಟು,
ಅಧಿಕಾರಕ್ಕಾಗಿ ಹಪಹಪಿಸುವಷ್ಟು,
ಸಾಂಕ್ರಾಮಿಕದ ನೆಪದಿಂದ
ಲಕ್ಷ ಲಕ್ಷ ಕೋಟಿ ಅಕ್ರಮಗೈಯ್ಯುವಷ್ಟು,
ಹೆಣ ಮುಂದಿಟ್ಟು ರಾಜಕಿಯ ಮಾಡುವಷ್ಟು…
ಕೇಳು ಪ್ರಭುತ್ವವೇ… ಅವರು ಸ್ವಾಭಿಮಾನಿ ಬಂಧುಗಳು
ನಿನಗಿಲ್ಲ ಸಮಾಜದ ಕಾಳಜಿ ಅವರಿಗಿರುವಷ್ಟು.
ಕೇಳು ಪ್ರಭುತ್ವವೇ …
ಹೇಳುತ್ತಿದ್ದೇನೆ
ನೀನು ಕೇಳಿಸಿಕೊಳ್ಳುವಂತೆ ನಟಿಸುತ್ತಿರುವುದರಿಂದಲೇ…
ಯಾಕೆಂದರೆ,
ಹೇಳಬೇಕಿರುವುದನ್ನು ಹೇಳುವುದೇ
ನೀನು ಕೇಳಿಸಿಕೊಳ್ಳುವ ವರೆಗೆ,
ನಿದ್ದೆಯ ನಾಟಕ ಮುಗಿಸುವ ವರೆಗೆ
ಯಾವುದೇ ಮುಲಾಜಿಲ್ಲದೆ,
ನಿನಗಿರುವ ಯಾವುದೇ ವೋಟ್ ಬ್ಯಾಂಕ್,
ಪಾರ್ಟಿ ಫಂಡ್ಗಳ ಬಾಧ್ಯತೆ ಇಲ್ಲದೆ.
ಕೇಳು ಪ್ರಭುತ್ವವೇ…
ಅವರು ಕೇಳಿದ್ದಿಷ್ಟು…
ತಮಗಾಗಿ ಏನೂ ಅಲ್ಲ, ಏನೂ ಇಲ್ಲ!
ಕರುಣೆಯಿಲ್ಲದ ಅರಣ್ಯ ನಿಯಮಗಳಿಂದ,
ಜಮೀನುದಾರರಿಂದ ಶೋಷಣೆಗೆ ಕೊನೆಯನ್ನು,
ಸಮಾನತೆ, ಉದ್ಯೋಗ, ದಮನಿತರ ರಕ್ಷಣೆಯನ್ನು
ನಿಲ್ಲಿಸಲು ಅಭಯಾರಣ್ಯ,
ರಕ್ಷಿತಾರಣ್ಯಗಳು ಹೇರುವ ನಿಬಂಧನೆಗಳನ್ನು
ಭೂಮಿ ಹಕ್ಕಿನ ಕೋರಿಕೆಯನ್ನು
ಬಯಸಿದ್ದು ಸಮತೆಯ ಸಮ ಸಮಾಜವನ್ನು
ಕೇಳು ಪ್ರಭುತ್ವವೇ …
ನೀನಿದನ್ನು ಮಾಡುತ್ತಿದ್ದರೆ?
ಕನಿಷ್ಟ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದರೆ ?
ತುಳಿಯುತ್ತಿದ್ದರೇ ಅವರು?
ಈ ಹೋರಾಟದ ಹಾದಿ
ಪ್ರಭುತ್ವವೇ … ಕೇಳು
ಇದಕ್ಕೆಲ್ಲ ಕಾರಣ
ನೀನು ನಡೆದುಬಂದ, ನಡೆಯುತ್ತಿರುವ
ಭ್ರಷ್ಟ, ದುಷ್ಟತನದ ದಾರಿ!!!
-ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ