ಕಾರ್ಕಳ: ದಿನಾಂಕ:08-01-2025(ಹಾಯ್ ಉಡುಪಿ ನ್ಯೂಸ್) ಸಿಬಿಐ ಅಧಿಕಾರಿಗಳು ಎಂದು ನಂಬಿಸಿ,ಬೆದರಿಸಿ ಕಾರ್ಕಳದ ಮಹಿಳೆಯೋರ್ವರಿಗೆ 24 ಲಕ್ಷ ರೂಪಾಯಿ ವಂಚನೆ ನಡೆಸಿದ್ದಾರೆ ಎಂದು ಪೊಲೀಸ್ ದೂರು ದಾಖಲಾಗಿದೆ.
ಪ್ರೀಮ ಶರಿಲ್ ಡಿಸೋಜ (38) ಎಂಬವರು ದಿನಾಂಕ: 07/01/2025 ರಂದು ಮನೆಯಲ್ಲಿರುವಾಗ ಪ್ರೀಮ ಶರಿಲ್ ಡಿಸೋಜ ರವರ ಮೊಬೈಲ್ ನಂಬ್ರಕ್ಕೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯು ತಾನು ದೆಹಲಿ ಟೆಲಿಕಾಂ ಇಲಾಖೆಯಿಂದ ಕಾಲ್ ಮಾಡುತ್ತಿದ್ದು ನಿಮ್ಮ ಆಧಾರ್ ನಂಬ್ರದಿಂದ ಉತ್ತರ ಪ್ರದೇಶದಲ್ಲಿ ಬೇರೆ ಸಿಮ್ ಖರೀದಿಸಿ ಬೇರೆ ಬೇರೆ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿ ನಿಮ್ಮ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದು ಈ ಬಗ್ಗೆ ಸೈಬರ್ ಅಧಿಕಾರಿಯು ನಿಮ್ಮೊಂದಿಗೆ ಮಾತನಾಡುತ್ತಾರೆ ಎಂದು ತಿಳಿಸಿ ವೀಡಿಯೋ ಕಾಲ್ ಮಾಡಿ ಪೊಲೀಸ್ ಸಮವಸ್ತ್ರ ಧರಿಸಿದ ವ್ಯಕ್ತಿಯು ತಾನು ಸಿಬಿಐ ಅಧಿಕಾರಿ ಎಂದು ತಿಳಿಸಿ ನೀವು ತನಿಖೆಗೆ ಸಹಕರಿಸಬೇಕು ಈ ವಿಚಾರವನ್ನು ಯಾರ ಬಳಿಯಲ್ಲಿಯೂ ಹೇಳುವಂತಿಲ್ಲ ಹೇಳಿದರೆ ನಿಮ್ಮ ಗಂಡ ಮತ್ತು ಮಗುವಿಗೆ ತೊಂದರೆಯಾಗುತ್ತದೆ ಎಂದು ಹೇಳಿ ಪ್ರೀಮ ಶರಿಲ್ ಡಿಸೋಜ ರವರ ಬ್ಯಾಂಕ್ ಖಾತೆಗಳಲ್ಲಿರುವ ಹಣದ ವಿವರ ಪಡೆದುಕೊಂಡು ಹಣವನ್ನು ಅವರು ತಿಳಿಸಿದ ಖಾತೆಗೆ ವರ್ಗಾವಣೆ ಮಾಡಬೇಕು ಇಲ್ಲವಾದರೆ ಅರೆಸ್ಟ್ ವಾರಂಟ್ ಕಳುಹಿಸುತ್ತೇವೆ ಎಂದು ಹೆದರಿಸಿ, ಸಿಬಿಐ ಅಧಿಕಾರಿಗಳು ಎಂದು ಹೇಳಿಕೊಂಡ ಅಪಾದಿತರ ಫೆಡರಲ್ ಬ್ಯಾಂಕ್‌ನ ಖಾತೆಗೆ 14 ಲಕ್ಷ ರೂಪಾಯಿ ಮತ್ತು ಯೆಸ್ ಬ್ಯಾಂಕ್ ಖಾತೆಗೆ ರೂಪಾಯಿ 10 ಲಕ್ಷ ಹಣವನ್ನು ಎಫ್‌ಡಿ ಖಾತೆಯಿಂದ ಆರ್‌ಟಿಜಿಎಸ್ ಮೂಲಕ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರೀಮ ಶರಿಲ್ ಡಿಸೋಜ ಅವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 308(2) BNS ಮತ್ತು ಕಲಂ: 66(D) IT Act ರಂತೆ ಪ್ರಕರಣ ದಾಖಲಾಗಿದೆ.