ಉಡುಪಿ: ದಿನಾಂಕ : 30/12/2024(ಹಾಯ್ ಉಡುಪಿ ನ್ಯೂಸ್) ಕೆಮ್ತೂರು ರೈಲ್ವೇ ಬ್ರಿಡ್ಜ್ ಬಳಿ ಮಾದಕ ವಸ್ತು ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ಇಬ್ಬರು ಮಾದಕವಸ್ತು ಮಾರಾಟಗಾರರಾಗಿರುವ ಸಮಾಜಘಾತುಕರನ್ನು ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ (ಪ್ರಭಾರ) ರಾಮಚಂದ್ರ ನಾಯಕ್ ಅವರು ಬಂಧಿಸಿದ್ದಾರೆ.
ಉಡುಪಿ ನಗರ ಪೊಲೀಸ್ ಠಾಣೆ, ಪೊಲೀಸ್ ನಿರೀಕ್ಷಕರಾದ (ಪ್ರಭಾರ) ರಾಮಚಂದ್ರ ನಾಯಕ್ ಅವರಿಗೆ ದಿನಾಂಕ:30-12-2024ರಂದು ಉಡುಪಿ ತಾಲೂಕು ಕೊರಂಗ್ರಪಾಡಿ ಗ್ರಾಮದ ಕೆಮ್ತೂರು ರೈಲ್ವೇ ಬ್ರಿಜ್ ಬಳಿ ಇಬ್ಬರು ವ್ಯಕ್ತಿಗಳು ಕಾರಿನಲ್ಲಿ ನಿಷೇದಿತ ಮಾದಕ ವಸ್ತು MDMA ಪೌಡರ್ ಅನ್ನು ಮಾರಾಟ ಮಾಡಲು ಹೊಂದಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಪೊಲೀಸ್ ಅಧೀಕ್ಷಕರ ಸೂಚನೆಯಂತೆ ಸಿಬ್ಬಂದಿಯವರ ಸಹಕಾರದೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ ಕೂಡಲೇ ದಾಳಿ ನಡೆಸಿದ್ದಾರೆ.
ಸ್ಥಳದಲ್ಲಿ ಕಾರೊಂದರಲ್ಲಿ ಕೂತಿದ್ದ ಅಕ್ಬರ್ ಮುಹಮ್ಮದ್ ಬ್ಯಾರಿ(32) ಮತ್ತು ಮಹಮ್ಮದ್ ಮುಕ್ದುಮ್ ಆಲಿ(28) ಎಂಬುವವರನ್ನು ಬಂಧಿಸಿ ಆಪಾದಿತರ ಬಳಿ ಇದ್ದ ಯಾವುದೇ ಪರವಾನಿಗೆ ಇಲ್ಲದೇ, ಕಾನೂನು ಬಾಹಿರವಾಗಿ ಮಾರಾಟ ಮಾಡಲು ಹೊಂದಿದ್ದ 69 ಗ್ರಾಂ 127 ಮಿಲಿ ಗ್ರಾಂ ತೂಕದ MDMA ವಶಕ್ಕೆ ಪಡೆದಿದ್ದು MDMA ಅಂದಾಜು ಮೌಲ್ಯ ರೂ. 3,60,000/- ಆಗಿರುತ್ತದೆ ಎನ್ನಲಾಗಿದೆ .
ಆಪಾದಿತರು ಬಳಸಿದ್ದ ಮೊಬೈಲ್ ಪೋನ್-6, ಅಂದಾಜು ಮೌಲ್ಯ ರೂ. 1,20,000/-, MDMA ವನ್ನು ಸಾಗಾಟ ಮಾಡಲು ಬಳಸಿದ್ದ ಬೆನ್ನಿಗೆ ಹಾಕಿಕೊಳ್ಳುವ ಬ್ಯಾಗ್-1 ಅಂದಾಜು ಮೌಲ್ಯ 500/-,ಲೆನೆವೋ ಥಿಂಕ್ ಬುಕ್ ಎಂಬ ಮಾಡೆಲ್ ಲ್ಯಾಪ್ ಟಾಪ್-1 ಅಂದಾಜು ಮೌಲ್ಯ 30,000/- ಜೊತೆಗೆ ಲ್ಯಾಪ್ ಟಾಪ್ ಚಾರ್ಜರ್-1 ಅಂದಾಜು ಮೌಲ್ಯ-300/-, ಪಾರದರ್ಶಕ ಪ್ಲಾಸ್ಟಿಕ್ ಕವರ್-12, ನಗದು ರೂಪಾಯಿ 1100/-, ಮಾದಕ ವಸ್ತು ಮಾರಾಟ ಮಾಡಲು ಬಳಸಿದ KA-20 MF-9440 ನೇ ಕಾರು ಅಂದಾಜು ಮೌಲ್ಯ 15,00,000/- ನ್ನು ಮುಂದಿನ ಕ್ರಮದ ಬಗ್ಗೆ ವಶಪಡಿಸಿಕೊಂಡಿದ್ದಾರೆ.
ವಶಪಡಿಸಿಕೊಂಡಿರುವ ಸ್ವತ್ತುಗಳು ಒಟ್ಟು ಅಂದಾಜು ಮೌಲ್ಯ ರೂ. 20,11,900/- ಆಗಿದೆ ಎನ್ನಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 22(c) NDPS act ರಂತೆ ಪ್ರಕರಣ ದಾಖಲಾಗಿದೆ.