Spread the love

ಬೆಂಗಳೂರು: ದಿನಾಂಕ:30-12-2024(ಹಾಯ್ ಉಡುಪಿ ನ್ಯೂಸ್)

ಬೆಳಗಾವಿಯಲ್ಲಿ ತಮ್ಮನ್ನು ಅಕ್ರಮವಾಗಿ ಬಂಧಿಸಿ ಕೆಟ್ಟದಾಗಿ ನಡೆಸಿಕೊಂಡಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ವಿಧಾನಪರಿಷತ್ ಸದಸ್ಯ ಸಿಟಿ ರವಿ ರಾಜ್ಯಪಾಲರಿಗೆ ಡಿಸೆಂಬರ್ 30 ರಂದು ಮನವಿ ಸಲ್ಲಿಸಿದ್ದಾರೆ.

ಸದನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಅಸಭ್ಯ ಶಬ್ದಗಳನ್ನು ಸಿಟಿ ರವಿ ಪ್ರಯೋಗಿಸಿದ್ದ ಆರೋಪದ ಹಿನ್ನೆಲೆಯಲ್ಲಿ ಅವರ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ  ಬೆಳಗಾವಿ ಪೊಲೀಸರು ಸಿ.ಟಿ ರವಿ ಅವರನ್ನು ಬಂಧಿಸಿದ್ದರು.

ಪೊಲೀಸ್ ಕಸ್ಟಡಿಯಲ್ಲಿ ತಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ ಎಂದು ಸಿಟಿ ರವಿ ಆರೋಪಿಸಿದ್ದಾರೆ, ತಮಗೆ ಹೆಚ್ಚುವರಿ ಭದ್ರತೆ ಒದಗಿಸಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿ.ಟಿ. ರವಿ ವಿಧಾನ ಪರಿಷತ್ತಿನ ಒಳಗಡೆಯೇ ಈ ಘಟನೆ ನಡೆದಿದ್ದು ಪೊಲೀಸರು ಪರಿಷತ್ತಿನ ಎಲ್ಲಾ ಅಧಿಕಾರಿಗಳು ,ಪರಿಷತ್ತಿನ ಅಧ್ಯಕ್ಷರಾಗಿರುವ ಬಸವರಾಜ ಹೊರಟ್ಟಿ  ಅವರ ಒಪ್ಪಿಗೆ ಪಡೆಯಬೇಕಿತ್ತು. ಸಭಾಧ್ಯಕ್ಷರ ಒಪ್ಪಿಗೆ ಪಡೆಯದೇ ಪ್ರಕರಣ ದಾಖಲಿಸಿರುವುದು ಪೊಲೀಸರು ಎಸಗಿದ ತಪ್ಪಾಗಿದೆ, ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಬಂಧಿಸಲಾಗಿದೆ ಎಂದು ಸಿಟಿ ರವಿ ಆರೋಪಿಸಿದ್ದಾರೆ.

ಪೊಲೀಸರು ಈಗ ವಿಡಿಯೋ ಸಾಕ್ಷ್ಯವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವುದಾಗಿ ಅದಕ್ಕೆ ಅಧ್ಯಕ್ಷರ ಅನುಮತಿ ಬೇಕು ಎಂದು ಹೇಳುತ್ತಿದ್ದಾರೆ. ಆದರೆ ನನ್ನನ್ನು ಬಂಧಿಸುವಾಗ ಯಾರ ಅನುಮತಿಯನ್ನ ತೆಗೆದುಕೊಳ್ಳಲಾಗಿದೆ ಎಂದು ಸಿ.ಟಿ.ರವಿ ಆರೋಪಿಸಿದ್ದಾರೆ. ಮಂತ್ರಿಗಳ ಒತ್ತಡಕ್ಕೆ ಮಣಿದು ಪೊಲೀಸರು ದುರುದ್ದೇಶದಿಂದ ನನ್ನನ್ನು ಬಂಧಿಸಿದ್ದಾರೆ ಎಂದು  ಹೇಳಿದ್ದಾರೆ.

ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಡಿಸೆಂಬರ್ 19 ರ ಘಟನೆಯಲ್ಲಿ ಬೆಳಗಾವಿಯ ಉನ್ನತ ಪೊಲೀಸ್ ಅಧಿಕಾರಿಗಳು ಮತ್ತು ಅವರ ಅಧೀನ ಅಧಿಕಾರಿಗಳು ತಮ್ಮ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಮತ್ತು ಮಂತ್ರಿಗಳ ಒತ್ತಡದ ಮೇರೆಗೆ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಡಿಸೆಂಬರ್ 19 ರ ರಾತ್ರಿಯಿಡೀ 400 ಕಿಲೋಮೀಟರ್ ಸುತ್ತಾಡಿಸಿದ್ದಾರೆ ಮತ್ತು ಕಸ್ಟಡಿಯಲ್ಲಿ ರಕ್ತಸ್ರಾವವಾಗುವಂತೆ ಗಾಯಗೊಳಿಸಿದ್ದಾರೆ ಎಂದು ಸಿ .ಟಿ.ರವಿ ಆರೋಪಿಸಿದ್ದಾರೆ.

ಪೊಲೀಸ್ ಜೀಪಿನಲ್ಲಿ ನನಗೆ ತಲೆಗೆ ಗಾಯವಾಗಿ ರಕ್ತಸ್ರಾವವಾಗಿರುವ ಬಗ್ಗೆ ಪೊಲೀಸರು ಯಾವುದೇ ಕಾಳಜಿ ವಹಿಸಲಿಲ್ಲ .ಪ್ರಥಮ ಚಿಕಿತ್ಸೆ  ನೀಡಲಿಲ್ಲ ಎಂದು ಆರೋಪಿಸಿದ್ದಾರೆ.

ಅವರು ನನ್ನನ್ನು ಬಹಳ ಗಂಟೆಗಳ ಕಾಲ ಆಹಾರ ಮತ್ತು ನೀರಿಲ್ಲದೆ ಹಸಿವಿನಿಂದ ಬಳಲುವಂತೆ ಮಾಡಿದರು, ನನ್ನನ್ನು ಪ್ರಾಣಿಯಂತೆ ನಡೆಸಿಕೊಂಡರು, ಭಯಾನಕ ಚಿತ್ರಹಿಂಸೆ ನೀಡಿದರು, ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡಿದರು, ಎಂದು ಅವರು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಆರೋಪಿಸಿದ್ದಾರೆ.

ಪೊಲೀಸರು ತಮ್ಮನ್ನು ಹತ್ಯೆ ಮಾಡಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದ್ದಾರೆ ಎಂದು ಆರೋಪಿಸಿರುವ ಸಿ.ಟಿ.ರವಿ ಇಡೀ ಘಟನೆಯ ಬಗ್ಗೆ ಪೊಲೀಸ್ ಮಹಾನಿರ್ದೇಶಕರಿಂದ ಸ್ಪಷ್ಟನೆ ಪಡೆಯುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.

error: No Copying!