ಉಡುಪಿ: ದಿನಾಂಕ :12-12-2024(ಹಾಯ್ ಉಡುಪಿ ನ್ಯೂಸ್) ರಾಂಗ್ ಸೈಡ್ ನಲ್ಲಿ ಕಾರನ್ನು ಚಲಾಯಿಸಿ ಕೊಂಡು ಬಂದ ವ್ಯಕ್ತಿಯೋರ್ವ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ರಾಜನ್ ಕುಮಾರ್ ಎಂಬವರಿಗೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಉಡುಪಿ ,ಮಲ್ಪೆ ನಿವಾಸಿ ರಾಜನ್ ಕುಮಾರ್ (39) ಎಂಬವರು ವಕೀಲ ವೃತ್ತಿಯನ್ನು ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ದಿನಾಂಕ 11/12/2024 ರಂದು ರಾತ್ರಿ ಹೋಂಡಾ ಆಕ್ಟೀವ್ ಸ್ಕೂಟಿ ನಂಬ್ರ KA-20-EL-3455 ರಲ್ಲಿ ಉಡುಪಿಯಿಂದ ಮಲ್ಪೆ ಕಡೆಗೆ ಹೊರಟಿದ್ದು ಉಡುಪಿ ತಾಲ್ಲೂಕು ಅಂಬಲಪಾಡಿ ಗ್ರಾಮದ ಆದಿ ಉಡುಪಿ ಶಾಲೆಯ ಬಳಿ ಇರುವ ರಾಧಾ ವಿಹಾರ ಹೋಟೆಲ್ ಮುಂಭಾಗದಲ್ಲಿ ಸಂಚರಿಸುತ್ತಿರುವಾಗ ವಿರುದ್ಧ ದಿಕ್ಕಿನಿಂದ ಮಹೀಂದ್ರ ಥಾರ್ ವಾಹನ ಸಂಖ್ಯೆ KA-20-MF-7040 ನ್ನು ಚಲಾಯಿಸಿಕೊಂಡು ಬಂದ ಬಗ್ಗೆ ರಾಜನ್ ಕುಮಾರ್ ಅವರು ಪ್ರಶ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಆಗ ಥಾರ್ ವಾಹನದಿಂದ ಚಾಲಕನು ಇಳಿದು ರಾಜನ್ ಕುಮಾರ್ ರನ್ನು ಅಕ್ರಮವಾಗಿ ತಡೆದು ನಿಲ್ಲಿಸಿ , ಅವರ ಕೈಯಲ್ಲಿದ್ದ ಹೆಲ್ಮೆಟನ್ನು ಕಿತ್ತುಕೊಂಡು ಕೊಲೆ ಮಾಡುವ ಉದ್ದೇಶದಿಂದ ರಾಜನ್ ಕುಮಾರ್ ರಿಗೆ ತಲೆಗೆ ಬೀಸಲು ಬಂದಾಗ ತಪ್ಪಿಸಿಕೊಂಡ ಪರಿಣಾಮ ಮೂಗಿನ ಮೇಲೆ ಹೊಡೆತ ಬಿದ್ದು ತೀವ್ರ ಗಾಯವಾಗಿದೆ ಎಂದು ದೂರಿದ್ದಾರೆ.
ರಾಜನ್ ಕುಮಾರ್ ರವರ ಮೇಲಿನ ಯಾವುದೋ ಹಳೆಯ ದ್ವೇಷಕ್ಕಾಗಿ ಅಥವಾ ಯಾರದೋ ಪ್ರೇರಣೆ ಮೇರೆಗೆ ಕೃತ್ಯವನ್ನು ಎಸಗಿ ಪರಾರಿಯಾದ ಆರೋಪಿಯ ವಿರುದ್ಧ ರಾಜನ್ ಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 118(1),126(2),109 BNS & karnataka prohibition of violence against advocates act 2023 (U/s-4) ರಂತೆ ಪ್ರಕರಣ ದಾಖಲಾಗಿದೆ.