ಇದು ಭಾಗಶಃ ಸರಿಯಷ್ಟೇ. ಏಕೆಂದರೆ ದಲಿತ ಚಳುವಳಿಗೆ ಶತಶತಮಾನಗಳ ಇತಿಹಾಸವಿದೆ. ಅದು ಮಾನಸಿಕವಾಗಿ, ದೈಹಿಕವಾಗಿ, ಅಸಹಾಯಕವಾಗಿ ಆಕ್ರೋಶವಾಗಿ, ಮೌನವಾಗಿ ಬೇರೆ ಬೇರೆ ರೂಪ ಪಡೆಯುತ್ತಾ ಸದಾ ಕಾಲ ಚಲಿಸುತ್ತಾ, ಆಂತರ್ಯದ ತುಮುಲಗಳು ವ್ಯಕ್ತವಾಗುತ್ತಲೇ ಇದೆ. ಆದರೆ ಅದಕ್ಕೆ ಪ್ರಜಾಸತ್ತಾತ್ಮಕ, ಸಂಘಟನಾತ್ಮಕ, ಸಾಹಿತ್ಯಾತ್ಮಕ, ರಾಜಕೀಯ ಮತ್ತು ಸಾಮಾಜಿಕ ಜನ ಮನ್ನಣೆ ಸಿಕ್ಕಿ 50 ವರ್ಷಗಳಾಗಿದೆ ಎಂದು ಹೇಳಬಹುದು…..
ಈ ನೆಲದ ಮೂಲನಿವಾಸಿಗಳ ಒಂದು ಬೃಹತ್ ಸಮುದಾಯ ಸ್ವಾತಂತ್ರ್ಯ ದೊರೆತ ಸುಮಾರು 77 ವರ್ಷಗಳ ನಂತರವೂ ತಮ್ಮ ಹಕ್ಕುಗಳಿಗಾಗಿ, ಮಾನ್ಯತೆಗಾಗಿ, ಸಮಾನತೆಗಾಗಿ ಈಗಲೂ ಹೋರಾಡಬೇಕಾದ ಅನಿವಾರ್ಯತೆ ಇದೆ ಎನ್ನುವುದಾದರೆ ಅದಕ್ಕೆ ಇತರ ಎಲ್ಲಾ ಸಮುದಾಯಗಳು ನಾಚಿಕೆ ಪಟ್ಟುಕೊಳ್ಳಬೇಕು. ಸದಾಕಾಲ ಧರ್ಮ, ದೇವರು, ನ್ಯಾಯ, ನೀತಿ, ವಸುದೈವ ಕುಟುಂಬಂ ಎಂದು ಹೇಳುವ, ಜಗತ್ತಿನಲ್ಲಿಯೇ ಆಧ್ಯಾತ್ಮದ ತವರೂರು ಎಂದು ಕರೆದುಕೊಳ್ಳುವ ಸಮಾಜದಲ್ಲಿ, ಈಗಲೂ ಜಾತಿಯ ಮೀಸಲಾತಿ ಇರುವುದು, ಅಸ್ಪೃಶ್ಯತಾ ಆಚರಣೆ ಇರುವುದು, ಜಾತಿಯ ಕಾರಣಕ್ಕಾಗಿ ನಿಂದನೆಗೆ ಒಳಗಾಗುತ್ತಿರುವುದು ಇನ್ನೂ ಅಸ್ತಿತ್ವದಲ್ಲಿದೆ ಎನ್ನುವುದಾದರೆ ಇದನ್ನು ಸಂಪೂರ್ಣವಾಗಿ ನಾಗರಿಕ ಸಮಾಜ ಎನ್ನಲು ಸಾಧ್ಯವಿಲ್ಲ. ಏಕೆಂದರೆ ನಾಗರಿಕ ಸಮಾಜದ ಮೂಲಭೂತ ಲಕ್ಷಣವೇ ಸಮಾನತೆ….
ಇದು ಒಂದು ಸಾರ್ವತ್ರಿಕ ಸತ್ಯವಾದರೆ, ಮತ್ತೊಂದೆಡೆ ಕರ್ನಾಟಕದಲ್ಲಿ ಈ ಐವತ್ತು ವರ್ಷಗಳಲ್ಲಿ ದಲಿತ ಚಳವಳಿ ನಡೆದು ಬಂದ ಹಾದಿ, ಅದು ಪಡೆದ ವಿವಿಧ ರೂಪಗಳು, ಒಡೆದ ಹಲವಾರು ಕವಲುಗಳು, ಈಗಿನ ವಾಸ್ತವಿಕತೆ ಮತ್ತು ಭವಿಷ್ಯದ ಸವಾಲುಗಳ ಬಗ್ಗೆ ಪುನರ್ ವಿಮರ್ಶೆ ಮಾಡಿಕೊಳ್ಳುವ ಸಮಯ ಬಂದಿದೆ……
ಸ್ವಾತಂತ್ರ್ಯ ಪೂರ್ವದ ದಲಿತ ಬಂಡಾಯಗಳಿಗೆ ಬಹುತೇಕ ಶೋಷಕರು ವರ್ತಿಸುತ್ತಿದ್ದ ಅಮಾನವೀಯತೆಯೇ ಮೂಲ ದ್ರವ್ಯವಾದರೆ, ಸ್ವಾತಂತ್ರ್ಯ ನಂತರದ ದಲಿತ ಚಳುವಳಿಗೆ ನಿಜವಾದ ಪ್ರೇರಣೆ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಎಂಬ ವ್ಯಕ್ತಿ, ವ್ಯಕ್ತಿತ್ವ, ಚಿಂತಕ, ಸಾಧಕ ಕಾರಣ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಇಡೀ ಅಸ್ಪೃಶ್ಯರ ಎಲ್ಲ ನೋವುಗಳಿಗೂ ಬೆಳಕಾಗಿ ಮೂಡಿದ ನೈಜ ಹೋರಾಟಗಾರ ಬಾಬಾ ಸಾಹೇಬ್ ಅಂಬೇಡ್ಕರ್….
ಕೇವಲ ಸಮಸ್ಯೆಗಳು ಮಾತ್ರವಲ್ಲ, ಅದಕ್ಕೆ ಪರಿಹಾರಗಳು ಮಾತ್ರವಲ್ಲ, ಪ್ರಾಯೋಗಿಕವಾಗಿ ಅವುಗಳನ್ನು ಹೆಚ್ಚು ಕಡಿಮೆ ಜಾರಿಗೆ ತಂದ ಮಹಾನ್ ನಾಯಕ ಬಾಬಾ ಸಾಹೇಬ್. ಆ ಹಿನ್ನೆಲೆಯಲ್ಲಿಯೇ ದಲಿತ ಚಳವಳಿ ಬೆಳೆದು ಬಂದಿದೆ. ಆದರೆ ಅವರ ಆಶಯಗಳು ಸಂಪೂರ್ಣ ಯಶಸ್ವಿಯಾಗಿದೆಯೇ ಎಂದರೆ ಮತ್ತೆ ಭಾಗಶಃ ಮಾತ್ರ ಎಂದೇ ಉತ್ತರಿಸಬೇಕಾಗುತ್ತದೆ…..
ಅದಕ್ಕೆ ಕೇವಲ ಮೇಲ್ವರ್ಗದವರ ಮೇಲೆ ಮಾತ್ರ ಬೆರಳು ತೋರಿಸುತ್ತಾ, ಪಲಾಯನವಾದ ಮಾಡುವ ಹಾಗಿಲ್ಲ. ಈ ಕ್ಷಣದ ಸಮಾಜದಲ್ಲಿ ನಿಜಕ್ಕೂ ಶೋಷಿತರು ಸಹ ತಮ್ಮ ಕರ್ತವ್ಯದಲ್ಲಿ ವಿಫಲರಾಗುತ್ತಿದ್ದಾರೆ ಎಂಬುದನ್ನು ಸಹ ಎತ್ತಿ ತೋರಿಸಬೇಕಾಗುತ್ತದೆ. ಏಕೆಂದರೆ ಇದು ಸ್ವತಂತ್ರ ಪೂರ್ವವಲ್ಲ ಅಥವಾ ಅಸಹಾಯಕ, ಅಮಾಯಕ, ಅನಕ್ಷರಸ್ಥರ ಕಾಲವೂ ಅಲ್ಲ. ಬಹುತೇಕ ಎಲ್ಲರೂ ಅಕ್ಷರಸ್ಥರು, ವಿದ್ಯಾವಂತರು, ಜಾಗೃತವಂತರು, ಸಮೂಹ ಸಂಪರ್ಕ ಮಾಧ್ಯಮದ ಮೇಲೆ ನಿಯಂತ್ರಣ ಹೊಂದಿರುವವರು ಆಗಿದ್ದಾರೆ…..
ಇಂತಹ ಸಂದರ್ಭದಲ್ಲಿ ನಿಜಕ್ಕೂ ಶೋಷಿತರು ಸಹ ಜವಾಬ್ದಾರಿ ತೆಗೆದುಕೊಳ್ಳಬೇಕಾಗುತ್ತದೆ. ಅಂದು ಒಬ್ಬ ಬಾಬಾ ಸಾಹೇಬ್ ಮಾಡಿದ ಕೆಲಸಗಳಲ್ಲಿ ಶೇಕಡಾ ಹತ್ತರಷ್ಟಾದರೂ ಈಗಿರುವ ಲಕ್ಷಾಂತರ ಬಾಬಾ ಸಾಹೇಬ್ ಗಳ ಕೈಯಲ್ಲಿ ಮಾಡುವ ಅವಕಾಶವಿದೆ, ವೇದಿಕೆ ಇದೆ. ಅದನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬ ಕೊರಗು ಅನೇಕರನ್ನು ಕಾಡುತ್ತಿದೆ……
ಕೇವಲ ರಾಜಕೀಯ, ಆರ್ಥಿಕ ಹಕ್ಕು, ಸಮಾನತೆ ಮತ್ತು ಸ್ವಾತಂತ್ರ್ಯಕ್ಕೆ ಹೋರಾಟ ಮಾಡುತ್ತಾ ನಿಜವಾದ ಮಣ್ಣಿನ ಸಾಂಸ್ಕೃತಿಕ ಪ್ರಜ್ಞೆಯನ್ನು ಕಡೆಗಣಿಸಿದ ಕಾರಣದಿಂದ ಬಾಬಾ ಸಾಹೇಬರ ಆಶಯ ಪೂರ್ಣಗೊಳ್ಳಲು ಸಾಧ್ಯವಾಗುತ್ತಿಲ್ಲ.
ಅದಕ್ಕೆ ಇನ್ನೊಂದು ತಲೆಮಾರು ಬೇಕಾಗಬಹುದು. ಆದರೆ ಆ ನಿಟ್ಟಿನಲ್ಲಿ ಪ್ರಯಾಣ ಪ್ರಾರಂಭಿಸಬೇಕಾಗಿದೆ…..
ಒಬ್ಬ ವ್ಯಕ್ತಿಯ ವ್ಯಕ್ತಿತ್ವದಲ್ಲಿ ವೈಯಕ್ತಿಕವಾಗಿ ಆ ನೆಲದ ಸಾಂಸ್ಕೃತಿಕ ವ್ಯಕ್ತಿತ್ವ ಮಿಳಿತವಾಗಿ, ಅದು ಬೆಳವಣಿಗೆ ಹೊಂದಿ, ತನ್ನ ನಡೆ ನುಡಿಗಳಲ್ಲಿ ಐಕ್ಯವಾಗುತ್ತಾ ಪ್ರಕಟವಾದರೆ, ಅಂತಹ ವ್ಯಕ್ತಿಯನ್ನು ವಂಚಿಸಲು ಯಾರಿಂದಲೂ ಸಾಧ್ಯವಿಲ್ಲ. ಅದೊಂದು ಪರಿಪೂರ್ಣ ಸಾಮರ್ಥ್ಯ ಹೊರಬರುವ ನೈಜ್ಯ ಶಕ್ತಿ. ಯಾವುದೇ ಧರ್ಮ, ಜಾತಿ, ರಾಜಕೀಯ ಮತ್ತು ಆರ್ಥಿಕ ಶಕ್ತಿಗೆ ಅದನ್ನು ಅಲುಗಾಡಿಸುವುದು ಸುಲಭವಲ್ಲ. ಅಂತಹ ಸಾಂಸ್ಕೃತಿಕ ವ್ಯಕ್ತಿತ್ವವನ್ನು ಪ್ರತಿಯೊಬ್ಬ ದಲಿತರು ಪಡೆಯುವ ನಿಟ್ಟಿನಲ್ಲಿ ಕೆಲಸಗಳು ನಡೆದರೆ ಬಹುಶಃ ಬಾಬಾ ಸಾಹೇಬರ ಆಶಯದ ಸಮ ಸಮಾಜದ ಹತ್ತಿರಕ್ಕೆ ಶೀಘ್ರವೇ ಬರಬಹುದು…..
ಏಕೆಂದರೆ ಆಗ ಯಾವುದೇ ಬಲಾಢ್ಯ ಅಥವಾ ಮೇಲ್ಜಾತಿಯ ಸಮುದಾಯಗಳವರು ಈ ಸಾಂಸ್ಕೃತಿಕ ವ್ಯಕ್ತಿತ್ವದ ವ್ಯಕ್ತಿಯನ್ನು ಮತ್ತು ಆ ರೀತಿ ಬೆಳೆದ ಸಮುದಾಯಗಳನ್ನು ಶೋಷಿಸಲು ಸಾಧ್ಯವಾಗುವುದಿಲ್ಲ. ಇದೊಂದು ಸೂಕ್ಷ್ಮವಾದ ವಿಷಯ. ಏಕೆಂದರೆ ಶೋಷಕರು ಈ ಸಾಂಸ್ಕೃತಿಕ ವ್ಯಕ್ತಿತ್ವವನ್ನು ಹೊಂದಿಯೇ ಅದರ ಭಾಗವಾಗಿ ಮುಖವಾಡ ಹಾಕಿಕೊಂಡು ಶೋಷಣೆ ಮಾಡುವ ಧೈರ್ಯ ಮಾಡುತ್ತಾರೆ. ಅದಕ್ಕೆ ಎದುರಾಗಿ ಮತ್ತೊಂದು ಸಾಂಸ್ಕೃತಿಕ ವ್ಯಕ್ತಿತ್ವ ನಿಂತರೆ ಆಗ ಅವರು ಹಿನ್ನೆಡೆಗೆ ಸರಿಯಲೇಬೇಕಾಗುತ್ತದೆ…….
ಈಗ ದಲಿತೇತರರಿಂದ ಕೇಳಿ ಬರುತ್ತಿರುವ ಕೂಗು ಸಹ ಅದೇ ಆಗಿದೆ. ಆಳದಲ್ಲಿ ಅಸ್ಪೃಶ್ಯತೆಯ ನೋವಿಗೆ ಬಲವಾದ ಕಾರಣವಿದೆ ಮತ್ತು ಐತಿಹಾಸಿಕ ಹಿನ್ನೆಲೆಯಿದೆ. ಆದರೆ ಈಗಿನ ಜನ ಸಮುದಾಯದಲ್ಲಿ ದಲಿತರ ನೋವು ಇತರರಿಗೆ ಮೇಲ್ನೋಟಕ್ಕೆ ಕಾಣುತ್ತಿಲ್ಲ. ಎಲ್ಲಾ ಸೌಕರ್ಯಗಳನ್ನು ಪಡೆದ ಅವರು ನಮ್ಮೊಂದಿಗೆ ಏಕೆ ಸಮನಾಗಿ ಸ್ಪರ್ಧಿಸುತ್ತಿಲ್ಲ ಎಂದೇ ಪ್ರಶ್ನಿಸುತ್ತಾರೆ. ಅದು ನಿಜಕ್ಕೂ ಸಮಗ್ರ ಚಿಂತನೆಯ ಮನುಷ್ಯತ್ವದ ಪ್ರಶ್ನೆಯಲ್ಲ ಎಂಬುದು ನಿಜ. ಆದರೆ ಅಷ್ಟು ಆಳಕ್ಕೆ ಹೋಗುವ ವಯಸ್ಸು ಮತ್ತು ಸಂವೇದನಾಶೀಲ ಮನಸ್ಸು ಈಗ ಇಲ್ಲದಿರುವುದರಿಂದ ಅವರ ಪ್ರಶ್ನೆಗಳಿಗೆ ನೇರ ಉತ್ತರ ನೀಡುವ ನಿಟ್ಟಿನಲ್ಲಿ ಒಂದಷ್ಟು ಮಾನಸಿಕ ಬದಲಾವಣೆ ಮಾಡಿಕೊಳ್ಳುವ ಅವಶ್ಯಕತೆ ಇದೆ……
ಏಕೆಂದರೆ ಶೋಷಣೆಯ ರೂಪಗಳು ಬದಲಾಗುತ್ತಿದೆ. ಅದು ಪರೋಕ್ಷವಾಗಿ, ಅಗೋಚರವಾಗಿ ಇತರ ಅನೇಕ ಸಮುದಾಯಗಳನ್ನು ಶೋಷಿಸುತ್ತಿದೆ. ಆ ಶೋಷಣೆಯಲ್ಲಿ ಇರುವವರಿಗೆ ಈ ಜಾತಿಯ ಶೋಷಣೆ ಅಷ್ಟಾಗಿ ಅರಿವಾಗುತ್ತಿಲ್ಲ. ಈ ಶೋಷಣೆಯ ರೂಪವೇ ಕಾರ್ಪೊರೇಟ್ ಸಂಸ್ಕೃತಿ. ಸಾಂಕೇತಿಕವಾಗಿ ಇದನ್ನು ಅಂಬಾನಿ – ಅದಾನಿ ಸಾಮ್ರಾಜ್ಯಗಳು ಎಂಬುದಾಗಿ ಕರೆಯಬಹುದು……
ಇಂತಹ ಸ್ಪರ್ಧಾತ್ಮಕ ಜಗತ್ತಿನಲ್ಲಿ, ಆರ್ಥಿಕ ಗುಲಾಮಿತನ ಸೃಷ್ಟಿಯಾಗಿರುವ ಸಂದರ್ಭದಲ್ಲಿ, ವೇಗ ಮತ್ತು ಅತಿಯಾದ ಪರಿಸರ ನಾಶದ ಅನಾರೋಗ್ಯಕಾರಿ ಪರಿಸ್ಥಿತಿ ಇರುವ ಸನ್ನಿವೇಶದಲ್ಲಿ, ಜಾತಿಯ ಅಸ್ಪೃಶ್ಯತೆ ದಲಿತರಲ್ಲದವರಿಗೆ ಹೆಚ್ಚು ಕಾಡುತ್ತಿಲ್ಲ. ಇದನ್ನು ದಲಿತ ಚಳುವಳಿಯ ವಕ್ತಾರಾರು ಅರ್ಥ ಮಾಡಿಕೊಳ್ಳಬೇಕಿದೆ…..
ಆರ್ನೆಸ್ಟ್ ಚೆಗುವಾರ ಅವರ ಮಾತುಗಳು ಇಲ್ಲಿ ನೆನಪಾಗಬೇಕಿದೆ.
” ಜಗತ್ತಿನ ಎಲ್ಲಾ ಶೋಷಿತರು ನನ್ನ ಸಂಗಾತಿಗಳು ” ಅಂದರೆ ಜಾತಿ ಶೋಷಣೆಯೇ ಇರಲಿ, ಆರ್ಥಿಕ ಶೋಷಣೆಯೇ ಇರಲಿ, ನಿರುದ್ಯೋಗಿಗಳ ಶೋಷಣೆಯೇ ಇರಲಿ, ಭಾಷಾ ಹೇರಿಕೆಯೇ ಇರಲಿ ಎಲ್ಲವನ್ನು ಒಂದು ನೆಲೆಯಲ್ಲಿ, ಬಸವ ತತ್ವದ ಅಡಿಯಲ್ಲಿ ಹೋರಾಡುವ ಹೃದಯ ವೈಶಾಲ್ಯವನ್ನು ಬೆಳೆಸಿಕೊಳ್ಳಬೇಕಾಗಿದೆ. ದಲಿತರಲ್ಲದವರು ಸಹ ಮಾನವೀಯ ನೆಲೆಯಲ್ಲಿ ದಲಿತ ಚಳುವಳಿಯಲ್ಲಿ ಪಾಲ್ಗೊಳ್ಳಲು ಮುಕ್ತ ಮತ್ತು ಪ್ರೀತಿಯ ಅವಕಾಶ ಕೊಡಬೇಕಿದೆ. ಆಗ ಈ ಚಳುವಳಿಗೆ ಪರಿಣಾಮಕಾರಿ ಮತ್ತು ದೈತ್ಯ ಶಕ್ತಿ ದೊರೆಯುತ್ತದೆ…….
ಹೌದು, ಈ ನಡೆಯೂ ಒಂದು ರೀತಿಯ ಅಪಾಯಕಾರಿ ಮತ್ತು ದಲಿತ ಚಳುವಳಿಯ ನಿಜವಾದ ಆಶಯವನ್ನು ದಾರಿ ತಪ್ಪಿಸಬಹುದಾದ ಸಾಧ್ಯತೆಯೂ ಇರುತ್ತದೆ. ಏಕೆಂದರೆ ಈ ವಿಕೃತ ಜನರಿರುವ ಮನಸ್ಥಿತಿಯ ಸಂದರ್ಭದಲ್ಲಿ, ಕೆಲವು ಏಜೆಂಟ್ ಗಳು ಆ ಕೆಲಸವನ್ನು ಮಾಡುತ್ತಾರೆ. ಆದರೆ ಅನಿವಾರ್ಯವಾಗಿ ಅದನ್ನು ಎದುರಿಸಲೇಬೇಕಾಗುತ್ತದೆ. ಗುಪ್ತವಾಗಿ ಅಥವಾ ಮುಚ್ಚಿದ ಸನ್ನಿವೇಶದಲ್ಲಿ ಬದುಕುವುದು ಸಾಧ್ಯವಿಲ್ಲ. ಒಂದು ಕಡೆ ಮೇಲ್ವರ್ಗದವರ ದೌರ್ಜನ್ಯಗಳನ್ನು ಖಂಡಿಸುತ್ತಾ, ಇನ್ನೊಂದು ಕಡೆ ಅಸ್ಪೃಶ್ಯ ಸಮುದಾಯದ ಯುವಶಕ್ತಿಯನ್ನು, ಮಹಿಳಾ ಶಕ್ತಿಯನ್ನು ಸ್ಪರ್ಧೆಗೆ ಅಣಿ ಮಾಡಬೇಕಾದ, ಸಾಮರ್ಥ್ಯ ವೃದ್ಧಿಸಬೇಕಾದ, ಆರ್ಥಿಕ, ಸಾಮಾಜಿಕ, ಔದ್ಯೋಗಿಕ ಕ್ಷೇತ್ರಗಳಲ್ಲಿ ಅವರ ಪಾಲ್ಗೊಳ್ಳುವಿಕೆ ಹೆಚ್ಚು ಮಾಡಬೇಕಾದ ಅವಶ್ಯಕತೆಯೂ ಇದೆ….
ಇಲ್ಲದಿದ್ದರೆ ಎಲ್ಲಾ ಸಮುದಾಯಗಳಂತೆ ಕೇವಲ ನಾಯಕರುಗಳು ಮತ್ತು ಅವರ ಹಿಂಬಾಲಕರು ಮಾತ್ರ ಉತ್ತಮ ಅಧಿಕಾರ ಸ್ಥಾನಮಾನ ಪಡೆದು ಎಂದಿನಂತೆ ಇತರರೆಲ್ಲರೂ ಅಸಹಾಯಕ ಪರಿಸ್ಥಿತಿಯಲ್ಲಿ ಜೀವನ ಮಾಡಬೇಕಾಗುತ್ತದೆ……
ಐವತ್ತು ವರ್ಷಗಳಿಂದ ಬೆಳೆದು ಬಂದಿರುವ ದಲಿತ ಚಳುವಳಿ ಕನ್ನಡದ ಇತಿಹಾಸದ ಮಟ್ಟಿಗೆ ಒಂದು ಅತ್ಯದ್ಭುತ ಸಂಘಟನೆ. ನಿಜಕ್ಕೂ ಈಗ ನೂರು ವರ್ಷಗಳ ಇತಿಹಾಸವಿರುವ
ಆರ್ ಎಸ್ ಎಸ್ ಸಂಘಟನೆಗೆ ಯಾವುದಾದರೂ ಒಂದು ಪರ್ಯಾಯ ಶಕ್ತಿ ಇರುವ ಸಂಘಟನೆ ಇದೆ ಎಂದಾದಲ್ಲಿ ಅದು ನಿಸ್ಸಂದೇಹವಾಗಿ ರೈತ ಮತ್ತು ದಲಿತ ಸಂಘಟನೆಯೇ ಆಗಿದೆ……..
ಆದ್ದರಿಂದ ಅದನ್ನು ಸಮಗ್ರವಾಗಿ ಪರಿಶೀಲಿಸಿ ಮುನ್ನಡೆಸಬೇಕಾದ ಜವಾಬ್ದಾರಿಯನ್ನು ಎಲ್ಲಾ ದಲಿತ ಮುಖಂಡರು ತೆಗೆದುಕೊಳ್ಳಬೇಕಾಗಿದೆ. ತಮ್ಮ ನಡುವಿನ ಭಿನ್ನಾಭಿಪ್ರಾಯ, ವೈಮನಸ್ಯಗಳನ್ನು ಮರೆತು, ಸಾಧ್ಯವಾದಷ್ಟು ರಾಜಕೀಯ ಒಗ್ಗಟ್ಟನ್ನು ಪ್ರದರ್ಶಿಸಬೇಕಿದೆ. ಸಾಂಸ್ಕೃತಿಕವಾಗಿ ದಲಿತ ಚಳುವಳಿಯ ವ್ಯಕ್ತಿತ್ವಗಳನ್ನು ರೂಪಿಸಬೇಕಾಗಿದೆ……
ಆಗ ಮಾತ್ರ ಮುಂದಿನ ತಲೆಮಾರಿಗೆ ಈ ಚಳುವಳಿ ಮುನ್ನಡೆಯುತ್ತದೆ. ಇಲ್ಲದಿದ್ದರೆ ಕಾರ್ಪೊರೇಟ್ ಸಂಸ್ಕೃತಿ ಎಲ್ಲವನ್ನು ಆಪೋಷನ ತೆಗೆದುಕೊಳ್ಳಬಹುದು……
ಇದು ಕೇವಲ ಒಂದು ಸಣ್ಣ ಅನಿಸಿಕೆ ಅಷ್ಟೇ. ಈ ಚಳುವಳಿಯ ಆಳ, ಅಗಲ, ವಿಸ್ತಾರ ಅತ್ಯಂತ ವಿಸೃತವಾಗಿದೆ. ಅದು ಉಂಟು ಮಾಡಿದ ತವಕ ತಲ್ಲಣಗಳು, ಪರಿಣಾಮಗಳು ಸಾಕಷ್ಟು ಇದೆ. ಅದನ್ನು ಧೀರ್ಘವಾಗಿ ಅವಲೋಕನ ಮಾಡಿಕೊಳ್ಳಬೇಕು. ಇದು ಕೇವಲ ಈ ಕ್ಷಣದ ಸರಳ ಸಂಕ್ಷಿಪ್ತ ವಿವರಣೆ ಮಾತ್ರ. ಸಲಹೆಗಳು, ಪರಿಹಾರಗಳು ಇನ್ನೂ ವಿಮರ್ಶೆಗೆ ಒಳಪಡಿಸಬೇಕಾಗಿದೆ…….
ಇಷ್ಟು ದೀರ್ಘಕಾಲ ದಲಿತ ಚಳವಳಿಯ ಕಾವು ಉಳಿಸಿಕೊಂಡಿರುವ ಎಲ್ಲರಿಗೂ ಮನದಾಳದ ಕೃತಜ್ಞತೆಗಳು……..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068…………