ಹಿರಿಯ ಪತ್ರಕರ್ತ ಮಿತ್ರರೊಬ್ಬರು ದೂರವಾಣಿ ಕರೆ ಮಾಡಿ ಸದಾ ಹಿಂದೂ ಧರ್ಮದ ಅಸಮಾನತೆಯ ಬಗ್ಗೆ ಮಾತನಾಡುವ ನೀವು, ಮುಸ್ಲಿಂ ಧರ್ಮದ ಸುಧಾರಣೆಯ ಬಗ್ಗೆಯೂ ಮಾತನಾಡಬೇಕಿದೆ. ಹಿಂದೆ ಸಾಕಷ್ಟು ಒಳ್ಳೆಯ ಸುಧಾರಣಾವಾದಿಗಳು, ಪ್ರಗತಿಪರರು ಆ ಧರ್ಮದಲ್ಲಿ ಸೃಷ್ಠಿಯಾಗುತ್ತಿದ್ದರು. ಆದರೆ ಈಗ ಆ ಪರಿಸ್ಥಿತಿ ಇಲ್ಲ. ಕೆಲವು ಕೆಟ್ಟ ರಾಜಕಾರಣಿಗಳು, ಕೆಟ್ಟ ಧಾರ್ಮಿಕ ಮುಖಂಡರು ಆ ಧರ್ಮದ ಜನರ ಮೇಲೆ ಹಿಡಿತ ಸಾಧಿಸಿ, ಅವರನ್ನು ದಾರಿ ತಪ್ಪಿಸುತ್ತಿದ್ದಾರೆ. ಮುಸ್ಲಿಮರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡುತ್ತಿದ್ದಾರೆ. ಅದು ತಪ್ಪಬೇಕು. ಮುಸ್ಲಿಮರು ಕೂಡ ನಮ್ಮಂತೆಯೇ ಈ ದೇಶದಲ್ಲಿ ಸಮಾನ ಹಕ್ಕು ಮತ್ತು ಕರ್ತವ್ಯ ಹೊಂದಿರುವ ಪ್ರಜೆಗಳು. ಹಿಂದೂ ಮುಸ್ಲಿಮರ ನಡುವೆ ಮತ್ತಷ್ಟು ದ್ವೇಷ ಸೃಷ್ಟಿಯಾದರೆ ಅದನ್ನು ತಡೆಯುವುದು ಕಷ್ಟ. ಆದ್ದರಿಂದ ಮುಸ್ಲಿಮ್ ಪ್ರಗತಿಪರರ ಕ್ರಿಯಾಶೀಲರಾಗುವ ಬಗ್ಗೆ ಸಹ ಬರೆಯಿರಿ ಎಂದು ಹೇಳಿದರು…..
ಭಾರತದಲ್ಲಿ ಮತ್ತು ಕರ್ನಾಟಕದಲ್ಲಿ ಮುಸ್ಲಿಂ ಸುಧಾರಕರು, ಉದಾರವಾದಿಗಳು, ಪ್ರಗತಿಪರರು, ಬುದ್ಧಿಜೀವಿಗಳು, ವೈಚಾರಿಕ, ವೈಜ್ಞಾನಿಕ ಮನೋಭಾವದವರು, ಹೆಚ್ಚು ಸಂಖ್ಯೆಯಲ್ಲಿ ಕ್ರಿಯಾಶೀಲರಾಗುವ ಅವಶ್ಯಕತೆ ಇದೆ……
ಭಾರತದ ನೆಲ ಅತ್ಯಂತ ವೈವಿಧ್ಯಮಯವಾಗಿದ್ದು ಇಲ್ಲಿ ಅನಾದಿಕಾಲದಿಂದಲೂ ವ್ಯವಸ್ಥೆಯ ವಿರುದ್ಧ, ಮೌಢ್ಯ, ಕಂದಾಚಾರ, ಶೋಷಣೆಗಳ ವಿರುದ್ಧ ಪ್ರಗತಿಪರರು, ದಾರ್ಶನಿಕರು ಸದಾ ಸೃಷ್ಟಿಯಾಗುತ್ತಲೇ ಇದ್ದಾರೆ, ಜಾಗೃತಿ ಮೂಡಿಸುತ್ತಿದ್ದಾರೆ, ಹೋರಾಟ, ಚಳುವಳಿಗಳನ್ನು ಮಾಡುತ್ತಿದ್ದಾರೆ…
ಹಾಗೆಯೇ ಮುಸ್ಲಿಂ ಸಮುದಾಯದಲ್ಲೂ ಸಹ ಕೆಲವರು ನಿರಂತರವಾಗಿ ಪ್ರಯತ್ನಪಡುತ್ತಿದ್ದಾರೆ.
ಬಾಬಾ ಬುಡನ್,
ಸಂತ ಶಿಶುನಾಳ ಶರೀಫ,
ಮೌಲಾನ ಅಬ್ದುಲ್ ಕಲಾಂ ಅಜಾದ್,
ಸರ್ ಸೈಯದ್ ಅಹಮದ್ ಖಾನ್,
ಫಿರೋಜ್ ಷಾ ಮೆಹ್ತಾ ,
ಬದ್ರುದ್ದೀನ್ ತ್ಯಾಬ್ಜಿ,
ಮುಂತಾದವರು ಮತ್ತು ಇನ್ನೂ ಸಾಕಷ್ಟು ಜನರಿದ್ದಾರೆ. ಆದರೆ ಆಧುನಿಕ ಭಾರತದಲ್ಲಿ ಆ ಸಂಖ್ಯೆ ಗಮನಾರ್ಹವಾಗಿ ಕಾಣುತ್ತಿಲ್ಲ. ಇದು ಒಂದು ರೀತಿ ಆತಂಕಕಾರಿ ವಿಷಯ…….
ಏಕೆಂದರೆ ಸನಾತನ ಧರ್ಮವೇ ಇರಲಿ, ಇಸ್ಲಾಂ ಧರ್ಮವೇ ಇರಲಿ ಹೊಸ ಆಧುನಿಕ ಜೀವನಶೈಲಿಗೆ ಹೊಂದಿಕೊಳ್ಳದೆ, ತಮ್ಮ ಧಾರ್ಮಿಕ ಗ್ರಂಥಗಳಿಗೆ, ಧಾರ್ಮಿಕ ವ್ಯಕ್ತಿಗಳಿಗೆ ನಿಷ್ಠೆ ತೋರಿಸುತ್ತಿದ್ದರೆ ಅದು ಕ್ರಮೇಣ ಮೂಲಭೂತವಾದಿತವಾಗಿ ಯಾವುದೇ ಸುಧಾರಣೆ ಸಾಧ್ಯವಾಗುವುದಿಲ್ಲ. ಚಿಂತನೆಗಳು ಹಳತಾಗುತ್ತಾ ತಮ್ಮ ಹೊಳಪನ್ನು ಕಳೆದುಕೊಳ್ಳುತ್ತವೆ. ಅಂತಹ ಸಂದರ್ಭದಲ್ಲಿ ಸುಧಾರಣಾವಾದಿಗಳ ಅವಶ್ಯಕತೆ ಇರುತ್ತದೆ…..
ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಈಗಲೂ ಸಹ ಕೆಲವು ಮುಸ್ಲಿಂ ಸಾಹಿತಿಗಳು, ಪತ್ರಕರ್ತರು, ರಾಜಕಾರಣಿಗಳು, ಧಾರ್ಮಿಕ ಮುಖಂಡರು, ಹೋರಾಟಗಾರರು ಸುಧಾರಣಾವಾದಿಗಳಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಆ ಸಂಖ್ಯೆ ತೀರ ಕಡಿಮೆ ಮತ್ತು ಅದರ ತೀವ್ರತೆ ಸಹ ಪ್ರಖರವಾಗಿಲ್ಲ. ಕೇವಲ ಬರಹಗಳು ಮತ್ತು ಮಾತುಗಳಿಗೆ ಸೀಮಿತವಾಗಿದೆ. ಸಾಕಷ್ಟು ಮೃದುವಾಗಿಯೂ ಇದೆ. ಕ್ರಾಂತಿಕಾರಕ ಹೆಜ್ಜೆಗಳು ಕಾಣುತ್ತಿಲ್ಲ……..
ಅವರ ಹೋರಾಟಗಳು ಸಾಮಾನ್ಯ ಜನರ ಅಂದರೆ ತಳಮಟ್ಟಕ್ಕೆ ತಲುಪುತ್ತಿಲ್ಲ. ಕೇವಲ ಮೇಲ್ಮಟ್ಟದ ಬುದ್ದಿಜೀವಿ ವರ್ಗಗಳ ಚರ್ಚೆಗಳಿಗೆ ಮಾತ್ರ ಸೀಮಿತವಾಗಿದೆ……
ಮುಸ್ಲಿಂ ಬುದ್ಧಿಜೀವಿ ವರ್ಗ ಅಥವಾ ಸುಧಾರಕರು ಹಿನ್ನೆಲೆಗೆ ಸರಿದರೆ ಅಥವಾ ಮೌನವಹಿಸಿದರೆ ಅಥವಾ ತಣ್ಣಗೆ ಪ್ರತಿಕ್ರಿಯಿಸುತ್ತಿದ್ದರೆ ಅದಕ್ಕೆ ವಿರುದ್ಧವಾಗಿ ಮೂಲಭೂತವಾದಿಗಳು ಅಥವಾ ಆಕ್ರಮಣಕಾರಿ ಮನೋಭಾವದವರು ಹೆಚ್ಚು ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಾರೆ. ಅವರ ಅಪ್ರಬುದ್ಧ ನಡವಳಿಕೆಗಳು ಮುಸ್ಲಿಂ ಸಮುದಾಯದ ಹೆಸರಿಗೆ, ಆ ಧರ್ಮದ ಮೂಲತತ್ವಗಳಿಗೆ ಕಳಂಕ ಬರುವಂತೆ ಮಾಡಲಾಗುತ್ತಿದೆ. ಇದು ಬಹುಸಂಖ್ಯಾತ ಹಿಂದುಗಳ ವಿರೋಧಕ್ಕೆ ಕಾರಣವಾಗುತ್ತಿದೆ. ಇದು ಅನಾವಶ್ಯಕ ಬೆಳವಣಿಗೆ…….
ಏಕೆಂದರೆ ಈಗಿನ ಎಲೆಕ್ಟ್ರಾನಿಕ್ ಮಾಧ್ಯಮಗಳು ವಿವೇಚನಾ ರಹಿತವಾಗಿ, ವಿಷಯದ ಆಳಕ್ಕೆ ಹೋಗದೆ, ಮುಸ್ಲಿಂ ಸಮುದಾಯದ ವಿರುದ್ಧ ಜನಾಭಿಪ್ರಾಯ ಮೂಡುವಂತೆ ಮಾಡುತ್ತಿವೆ. ಯಾವುದೇ ವಿಷಯವಿರಲಿ ಮಾಧ್ಯಮಗಳು ಸಾಮಾನ್ಯ ಜನರಿಗೆ ಮುಸ್ಲಿಮರ ವಿರುದ್ಧ ದ್ವೇಷ ಉಂಟಾಗುವಂತೆ, ಅವರಿಗೆ ಅತಿಯಾದ ಸೌಕರ್ಯಗಳು ಸಿಕ್ಕಿರುವಂತೆ ಜನಾಭಿಪ್ರಾಯ ರೂಪಿಸುತ್ತಿವೆ. ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಸುಧಾರಣಾವಾದಿಗಳು ಸರಿ ತಪ್ಪುಗಳು, ವಿಷಯದ ಆಳ ಅಗಲಗಳನ್ನು ಸರಿಯಾಗಿ ತಮ್ಮ ಸಮುದಾಯದ ಜನರಿಗೆ ಮತ್ತು ಇತರರಿಗೆ ಮನವರಿಕೆ ಮಾಡಿಕೊಡದಿದ್ದರೆ, ಈ ವಿಷಯದ ಸೂಕ್ಷ್ಮತೆಯನ್ನು ಸರಿಯಾಗಿ ಅರ್ಥಮಾಡಿಸದಿದ್ದರೆ ಖಂಡಿತವಾಗಿಯೂ ಮೇಲ್ನೋಟದ ಗಾಳಿ ಮಾತುಗಳೇ ಸತ್ಯವಾಗುವ ಸಾಧ್ಯತೆ ಇದೆ. ಇದು ಸಹ ಅಪಾಯಕಾರಿಯೇ……
ಏಕೆಂದರೆ ಇತರೆ ಹಿಂದೂ ಸಮುದಾಯಗಳಂತೆ ಮುಸ್ಲಿಂ ಸಮುದಾಯವೂ ಸಹ ಮೌಢ್ಯದಿಂದ, ಅಜ್ಞಾನದಿಂದ, ಭಾವನಾತ್ಮಕ ಭ್ರಮೆಗಳಿಂದ, ಬಡತನದಿಂದ ನರಳುತ್ತಿದೆ. ಜನರು ಎಷ್ಟೇ ವಿದ್ಯಾವಂತರಾದರೂ, ಆಧುನಿಕವಾದರೂ ಅಲ್ಲಿನ ಪುರೋಹಿತಶಾಹಿ ಅಥವಾ ಧಾರ್ಮಿಕ ಮೂಲಭೂತವಾದಕ್ಕೆ ಕೆಲವರು ಶರಣಾಗಿದ್ದಾರೆ. ಕಾಲಕಾಲಕ್ಕೆ ಆಗಬೇಕಾದ ಪ್ರಗತಿಪರ ಬದಲಾವಣೆ ಸಾಧ್ಯವಾಗುತ್ತಿಲ್ಲ….
ಈ ನಿಟ್ಟಿನಲ್ಲಿ ಒಂದಷ್ಟು ಸುಧಾರಣಾವಾದಿ ಕೆಲಸಗಳು ಆಗಬೇಕಿದೆ. ಹಾಗೆಂದು ಹಿಂದೂಗಳು ತುಂಬಾ ಸುಧಾರಣೆಯಾಗಿದ್ದಾರೆ ಎಂದು ಅರ್ಥವೇನು ಅಲ್ಲ. ಹಿಂದೂಗಳಲ್ಲಿಯೂ ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ, ಧಾರ್ಮಿಕ, ಪ್ರಗತಿಪರತೆ ಹಿನ್ನಡೆಯಲ್ಲಿದೆ. ಜನ ವಿದ್ಯಾವಂತರಾದಷ್ಟು ಮೌಢ್ಯದ ದಾಸರಾಗುತ್ತಿದ್ದಾರೆ. ದ್ವೇಷ ಅಸೂಯೆಗಳನ್ನು ಹೆಚ್ಚಾಗಿ ಬೆಳೆಸಿಕೊಳ್ಳುತ್ತಿದ್ದಾರೆ. ಇದು ಹಿಂದೂ ಮುಸ್ಲಿಂ ಧರ್ಮದ ಕಂದಕವನ್ನು ಹೆಚ್ಚು ಮಾಡಿ ಭಾರತದ ಒಟ್ಟು ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡುತ್ತಿದೆ. ಎರಡೂ ಸಮುದಾಯಗಳ ನಡುವೆ ಅನುಮಾನ ಹೆಚ್ಚಾಗುತ್ತಲೇ ಇದೆ. ಇದು ದೇಶದ ಅಭಿವೃದ್ಧಿಗೆ ಮಾರಕ…….
ಆದ್ದರಿಂದ ಸುಧಾರಣಾವಾದಿಗಳು ಹೆಚ್ಚು ಹೆಚ್ಚು ಮಾತನಾಡಬೇಕಿದೆ. ಬುದ್ಧ ಬಸವ ಅಂಬೇಡ್ಕರ್ ಗಾಂಧಿ ಸ್ವಾಮಿ ವಿವೇಕಾನಂದ ದಯಾನಂದ ಸರಸ್ವತಿ ರಾಜಾರಾಮ್ ಮೋಹನ್ ರಾಯ್ ಮುಂತಾದ ಸುಧಾರಕರಂತೆ ಹಿಂದೂಗಳಲ್ಲೂ, ಮುಸ್ಲಿಮರಲ್ಲೂ ಸಾಕಷ್ಟು ಜನ ಮುಂದೆ ಬರಬೇಕಾಗಿದೆ……
ಈಗಿನ ಸಮೂಹ ಸಂಪರ್ಕ ಮಾಧ್ಯಮಗಳ ಕ್ರಾಂತಿಯ ಸಂದರ್ಭದಲ್ಲಿ ಒಳ್ಳೆಯ ಅಂಶಗಳು ಹೆಚ್ಚು ಪರಿಣಾಮ ಬೀರುತ್ತವೆ. ಸುಳ್ಳುಗಳ ನಡುವೆ ಆಳದ ಸತ್ಯವನ್ನು ಧೈರ್ಯದಿಂದ ಹೇಳುವ ಜನರು ಹಿಂದಿನ ತುರ್ತು ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ಮುಸ್ಲಿಂ ವಿದ್ಯಾವಂತ ಸಮುದಾಯ ಯೋಚಿಸಿ ಹೆಜ್ಜೆ ಇಡಬೇಕಾಗಿದೆ. ಇಲ್ಲದಿದ್ದರೆ ಮಧ್ಯಪ್ರಾಚ್ಯದ ದೇಶಗಳಂತೆ ಭಯಾನಕ ಸಂಘರ್ಷ, ರಕ್ತಪಾತಗಳು ಮುಂದೆ ಭಾರತದಲ್ಲಿಯೂ ನಡೆಯಬಹುದು. ಇದನ್ನು ಈ ನೆಲ ಸಹಿಸಿಕೊಳ್ಳಲು ಸಾಧ್ಯವಿಲ್ಲ….
ನಮ್ಮ ಕೌಟುಂಬಿಕ, ಸಾಂಸ್ಕೃತಿಕ ವ್ಯವಸ್ಥೆ ಇಡೀ ವಿಶ್ವದಲ್ಲಿಯೇ ಆದರ್ಶಪ್ರಾಯವಾಗಿದೆ. ಅದು ಈ ರೀತಿ ಧಾರ್ಮಿಕ ಸಂಘರ್ಷಕ್ಕೆ ಸಿಲುಕಿದರೆ ದೊಡ್ಡ ಹೊಡೆತ ಬೀಳುತ್ತದೆ. ಆದ್ದರಿಂದ ಹಿಂದೂವಾಗಿರಲಿ, ಮುಸ್ಲಿಮ್ ಆಗಿರಲಿ, ಪ್ರಗತಿಪರತೆಗೆ, ಆಧುನಿಕತೆಗೆ, ವೈಚಾರಿಕತೆಗೆ ತೆರೆದುಕೊಳ್ಳಲೇಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಯೋಚಿಸುವಂತಾಗಲಿ, ಧನ್ಯವಾದಗಳು……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068……