ಮಲ್ಪೆ: ದಿನಾಂಕ: 12-10-2024 (ಹಾಯ್ ಉಡುಪಿ ನ್ಯೂಸ್) ಅಕ್ರಮವಾಗಿ ಭಾರತದೊಳಗೆ ಪ್ರವೇಶಿಸಿ ಮಲ್ಪೆ ಪರಿಸರದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ವರ್ತಿಸುತ್ತಿದ್ದ 9 ಜನ ಬಾಂಗ್ಲಾ ಪ್ರಜೆಗಳನ್ನು ಮಲ್ಪೆ ಪೊಲೀಸ್ ಠಾಣೆಯ ಪಿಎಸ್ಐ ಯವರಾದ ಪ್ರವೀಣ್ ಕುಮಾರ್ ಆರ್, ಅವರು ಬಂಧಿಸಿದ್ದಾರೆ.
ಮಲ್ಪೆ ಪೊಲೀಸ್ ಠಾಣೆ ಪಿಎಸ್ಐ ಯವರಾದ ಪ್ರವೀಣ್ ಕುಮಾರ್ ಆರ್.ಪಿ ಅವರು ದಿನಾಂಕ:11-10-2024 ರಂದು ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ರಾತ್ರಿ ಮಲ್ಪೆ ವಡಭಾಂಡೇಶ್ವರ ಬಸ್ ನಿಲ್ದಾಣದ ಬಳಿ 7 ಜನರು ಅನುಮಾನಾಸ್ಪದವಾಗಿ ಲಗೇಜ್ ಸಮೇತ ಒಡಾಡುತ್ತಿರುವುದನ್ನು ಕಂಡು ಪಿಎಸ್ಐ ಯವರು ಅನುಮಾನಗೊಂಡು ವಿಚಾರಣೆ ನಡೆಸಿದಾಗ ಆರೋಪಿತ 1.ಹಕೀಮ್ ಅಲಿ, ಪ್ರಾಯ: 24 ವರ್ಷ, ಬಾಂಗ್ಲಾದೇಶ, 2. ಸುಜೋನ್ ಎಸ್.ಕೆ ಯಾನೆ ಫಾರೂಕ್ ಪ್ರಾಯ: 19 ವರ್ಷ, ಬಾಂಗ್ಲಾದೇಶ, 3. ಇಸ್ಮಾಯಿಲ್ ಎಸ್.ಕೆ ಪ್ರಾಯ: 30 ವರ್ಷ, ಬಾಂಗ್ಲಾದೇಶ, 4. ಕರೀಮ್ ಎಸ್.ಕೆ ಪ್ರಾಯ:22 ವರ್ಷ, ಬಾಂಗ್ಲಾದೇಶ, 5. ಸಲಾಂ ಎಸ್.ಕೆ ಪ್ರಾಯ: 28 ವರ್ಷ ಬಾಂಗ್ಲಾದೇಶ, 6. ರಾಜಿಕುಲ್ ಎಸ್.ಕೆ ಪ್ರಾಯ: 20 ವರ್ಷ, ಬಾಂಗ್ಲಾದೇಶ, 7. ಮೊಹಮ್ಮದ್ ಸೋಜಿಬ್ ಪ್ರಾಯ: 20 ವರ್ಷ, ಬಾಂಗ್ಲಾದೇಶ 8. ಕಾಜೋಲ್ ಸಿಕ್ಕಿಂ ರಾಜ್ಯದ ಅಗರ್ತಲಾ, 9.ಉಸ್ಮಾನ್ ,ಬಾಂಗ್ಲಾದೇಶ ಇವರು ಯಾರೂ ಭಾರತ ದೇಶದ ಯಾವುದೇ ಅನುಮತಿ ದಾಖಲೆಗಳನ್ನು ಪಡೆಯದೇ ಅಕ್ರಮವಾಗಿ ನಕಲಿ ಆಧಾರ್ ಕಾರ್ಡ್ ದಾಖಲೆಗಳನ್ನು ಸೃಷ್ಟಿಸಿ, ವಂಚಿಸುವ ಉದ್ದೇಶದಿಂದ ಸುಳ್ಳು ಸ್ಪಷ್ಟನೆಯನ್ನು ನೀಡಿ, ಬಾಂಗ್ಲಾದೇಶದಿಂದ ಉಡುಪಿ ತಾಲೂಕು ಪಡುತೋನ್ಸೆ ಗ್ರಾಮದ ಹೂಡೆಗೆ ಬಂದಿರುತ್ತಾರೆ ಎಂದು ಪೊಲೀಸ್ ತನಿಖೆ ಯಲ್ಲಿ ಬಾಯಿ ಬಿಟ್ಟಿದ್ದಾರೆ ಎನ್ನಲಾಗಿದೆ.
8ನೇ ಆರೋಪಿ ಕಾಜೋಲ್ ಅಕ್ರಮವಾಗಿ 1 ರಿಂದ 6 ನೇ ಆರೋಪಿಗಳಿಗೆ ನಕಲಿ ಆಧಾರ್ ಕಾರ್ಡ್ ತಯಾರಿಸಿಕೊಟ್ಟಿರುವುದಾಗಿ ಹಾಗೂ 9ನೇ ಆರೋಪಿ ಉಸ್ಮಾನ್ ನು 1 ರಿಂದ 7 ನೇ ಆರೋಪಿಗಳಿಗೆ ಅಕ್ರಮವಾಗಿ ಭಾರತಕ್ಕೆ ಕೆಲಸಕ್ಕಾಗಿ ಕರೆತಂದಿದ್ದಾನೆ ಎನ್ನಲಾಗಿದೆ.
ಆರೋಪಿಗಳೆಲ್ಲರೂ ಭಾರತದೊಳಗೆ ನುಸುಳುವ ಏಕೈಕ ಉದ್ದೇಶದಿಂದ ಅಕ್ರಮವಾಗಿ ಭಾರತೀಯ ದಾಖಲಾತಿಯಾದ ಆಧಾರ್ ಕಾರ್ಡನ್ನು ನಕಲಿಯಾಗಿ ಸೃಷ್ಟಿಸಿ, ಸರಕಾರಕ್ಕೆ ಮೋಸ ವಂಚನೆ ಮಾಡಿರುತ್ತಾರೆ ಎಂದು ದೂರು ದಾಖಲಿಸಿದ್ದಾರೆ .
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ: 319(2),318(4),336(2).336(3),340(2) ಜೊತೆಗೆ 190 BNS ನಂತೆ ಪ್ರಕರಣ ದಾಖಲಾಗಿದೆ.