Spread the love

ಬೆಳಗಾವಿ : ದಿನಾಂಕ : 21-09-2024 (ಹಾಯ್ ಉಡುಪಿ ನ್ಯೂಸ್) ನಕಾರಾತ್ಮಕ ಸುದ್ದಿಗಳಿಗೆ ಮಾಧ್ಯಮಗಳು ಪ್ರಾಧಾನ್ಯತೆ ನೀಡಬಾರದು ಎಂದು ಹಿರಿಯ ಸಾಹಿತಿ ಸಿದ್ದು ಯಾಪಲಪರವಿ ಅವರು ಹೇಳಿದರು.
ಅವರಿಂದು ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಪತ್ರಕರ್ತರ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ವಿಶೇಷವಾಗಿ ಪ್ರಸಾರವಾಗುವ ಬ್ರೇಕಿಂಗ್ ನ್ಯೂಸ್ ಗಳಲ್ಲಿ ಹೆಚ್ಚಾಗಿರುತ್ತದೆ ಅದಕ್ಕೆ ಬದಲಾಗಿ ಸಕಾರಾತ್ಮಕ ಸುದ್ದಿಗಳಿಗೆ ಪ್ರಾಧಾನ್ಯತೆ ನೀಡುವ ಮೂಲಕ ‌ ಪತ್ರಿಕೋದ್ಯಮಕ್ಕೊಂದು ಹೊಸ ಆಯಾಮ ನೀಡಬೇಕು ಎಂದು ಅವರು ಸಲಹೆ ನೀಡಿದರು.
ಹಿರಿಯ ಪತ್ರಕರ್ತ ಮತ್ತು ಸಾಹಿತಿ ಎಲ್ಎಸ್ ಶಾಸ್ತ್ರಿ ಅವರು ಮಾತನಾಡಿ ಪ್ರತಿಯೊಂದು ಸುದ್ದಿಯನ್ನು ಪ್ರತಿಯೊಂದು ಘಟನೆಯನ್ನು ಸಂದರ್ಭವನ್ನು ಸಂಸ್ಕರಿಸಿ ಸಮಾಜಕ್ಕೆ ಯಾವುದು ಉತ್ತಮ ಅದನ್ನು ಮಾತ್ರ ನೀಡುವ ಕಾರ್ಯ ಆಗಬೇಕಿದೆ ಎಂದ ಅವರು ಇಂದು ಸಂಸ್ಕಾರವಿಲ್ಲದ ವಿಚಾರಗಳೆ ಹೆಚ್ಚಿನ ಪ್ರಮಾಣದಲ್ಲಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು ಅದು ನಿಲ್ಲಬೇಕು ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಅಲ್ಲಮಪ್ರಭು ಮಹಾಸ್ವಾಮಿಗಳು ಬೆಳಗಾವಿಯಂತಹ ಗಡಿ ಭಾಗದಲ್ಲಿ ಕೇಂದ್ರ ಸ್ಥಾನವಾಗಿಸಿಕೊಂಡು ರಾಜ್ಯದಾದ್ಯಂತ ಅತ್ಯುತ್ತಮ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಪತ್ರಕರ್ತರ ಸಂಘದ ಚಟುವಟಿಕೆಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿದ ಅವರು ಇದಕ್ಕಿಂತಲೂ ಹೆಚ್ಚಿನ ಸೇವಾ ಕಾರ್ಯ ಗ್ರಾಮೀಣ ಭಾಗದ ಪತ್ರಕರ್ತರಿಗೆ ಇವರಿಂದ ಸಲ್ಲಲಿ ಎಂದು ಶುಭ ಹಾರೈಸಿದರು.
ಈವರೆಗೆ ಸರ್ಕಾರದಿಂದ ಯಾವುದೇ ರೀತಿಯ ಸವಲತ್ತನ್ನು ಪಡೆಯದೆ ಯಾರಿಂದಲೂ ಆರ್ಥಿಕ ಸಹಾಯವನ್ನು ಬಯಸದೆ ಸಂಘಟನೆಯನ್ನು ಮುನ್ನಡೆಸಿಕೊಂಡು ಹೋಗಿದ್ದಲ್ಲದೆ ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಕಾಲಕಾಲಕ್ಕೆ ಸಹಾಯ ಮಾಡುತ್ತಿರುವುದು ಅತ್ಯಂತ ಸಂತಸದ ವಿಷಯ ಇಂತಹ ಪತ್ರಿಕಾ ಸಂಘಟನೆಗೆ ಸರ್ಕಾರ ಕೂಡ ಅಗತ್ಯದ ಎಲ್ಲ ರೀತಿಯ ಸಹಕಾರ ಸವಲತ್ತನ್ನು ನೀಡಿ ಪ್ರೋತ್ಸಾಹಿಸಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಮುರುಗೇಶ್ ಶಿವಪೂಜಿ ವಹಿಸಿ ಸಾಂದರ್ಭಿಕವಾಗಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀಮತಿ ಮಂಗಲಾ ಮೆಟಗುಡ್ ಅವರು ಸುಮಾರು ವರ್ಷಗಳಿಂದ ಸಂಘದ ಚಟುವಟಿಕೆಗಳನ್ನು ಹತ್ತಿರದಿಂದ ತಾವು ನೋಡುತ್ತಿದ್ದು ತಮಗೆ ಸಂತಸ ತಂದಿದೆ ತಮ್ಮ ಸಂಪೂರ್ಣ ಸಹಕಾರ ಬೆಂಬಲ ಈ ಚಟುವಟಿಕೆಗಳಿಗೆ ಇದೆ ಎಂದು ಹೇಳಿದರು.
ಹಿರಿಯ ಪತ್ರಕರ್ತೆ ಶ್ರೀಮತಿ ಸುಧಾಪಟ್ಟೇದ ಮತ್ತು ಶ್ರೀ ಶಶಿ ಬೆಳಗುಂದಕರ್ ಅವರುಗಳನ್ನು ಸಂಘದ ಪರವಾಗಿ ಸತ್ಕರಿಸಲಾಯಿತು.
ಸಂಘದ ಹಿರಿಯ ಉಪಾಧ್ಯಕ್ಷ ಸಂದೇಶ ಕುಮಾರ ಅವರು ಕಾರ್ಯಕ್ರಮವನ್ನು ನಿರ್ದೇಶಿಸಿದರು, ಸಂಘದ ಸದಸ್ಯರಾದ ಶ್ರೀಮತಿ. ಕೀರ್ತಿ ಕಾಸರಗೋಡು ಅವರು ಸಂಘದ ವಾರ್ಷಿಕ ವರದಿಯನ್ನು ಸಭೆಯ ಮುಂದೆ ಮಂಡಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್ ಮುಚಳಂಬಿ ಅವರು ಸ್ವಾಗತಿಸಿದರು. ಕೊಪ್ಪಳ ಜಿಲ್ಲಾಧ್ಯಕ್ಷ ಶರಣಪ್ಪ ಗುಮಗೇರಾ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಹಿರಿಯಸಂಪಾದಕರಾದ ಸಲೀಂ ಧಾರವಾಡಕರ್, ಡಾ.ರಾಜೇಂದ್ರ ಪವಾರ್, ಪತ್ರಕರ್ತರ ಸಹಕಾರಿ ಸಂಘದ ಉಪಾಧ್ಯಕ್ಷ ವಿಷ್ಣು ದೇವಾಡಿಗ, ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಹೊಸ್ಕೆರಾ,
ರಾಜ್ಯ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಶಂಕರ್ ಕುದುರೆಮೋತಿ, ಬಾಗಲಕೋಟೆ ಜಿಲ್ಲಾಧ್ಯಕ್ಷ ವಿಜಯಶಂಕರ್, ಗದಗ ಜಿಲ್ಲಾಧ್ಯಕ್ಷ ರಮೇಶ್ ಭಜಂತ್ರಿ, ಹೊಸಪೇಟೆ ಜಿಲ್ಲಾ ಕಾರ್ಯಾಧ್ಯಕ್ಷ ಸೋಮಶೇಖರ್ ಹಿರೇಮಠ, ರಾಮನಗರ ಜಿಲ್ಲೆಯ ರೂಪೇಶ್ ಕುಮಾರ್ , ಹಾವೇರಿಯ ಮಾಲತೇಶ ಅಂಗೂರ್, ಚರಣ್ ರಾಜ್ ವಿಜಾಪುರ್, ಟ್ರಸ್ಟಿ ಬಸವರಾಜ್ ಪುಟ್ಟಿ, ಚಾಮರಾಜನಗರ ಜಿಲ್ಲಾಧ್ಯಕ್ಷ ಬಂಗಾರಪ್ಪ, ಮೈಸೂರಿನ ಶ್ರೀಮತಿ ಪೂರ್ಣಿಮಾ ಪವಾರ್ ಹಾಗೂ 20 ಜಿಲ್ಲೆಗಳ ನೂರಕ್ಕೂ ಅಧಿಕ ಪತ್ರಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: No Copying!