ಕಾರ್ಕಳ: ದಿನಾಂಕ 12/09/2024 (ಹಾಯ್ ಉಡುಪಿ ನ್ಯೂಸ್,) ಕಸಬಾ ಗ್ರಾಮದ ಜ್ಯುವೆಲ್ಲರಿ ಅಂಗಡಿಗೆ ಗ್ರಾಹಕನ ಸೋಗಿನಲ್ಲಿ ಬಂದ ವ್ಯಕ್ತಿ ಕರಿಮಣಿ ಸರ ಕಳ್ಳತನ ನಡೆಸಿರುವ ಬಗ್ಗೆ ದೂರು ದಾಖಲಾಗಿದೆ.
ಕಾರ್ಕಳ,ಕುಕ್ಕುಂದೂರು ಗ್ರಾಮದ ನಿವಾಸಿ ಅಮಿತ್ (46) ಎಂಬವರು ಕಸಬಾ ಗ್ರಾಮದ ಮೂರು ಮಾರ್ಗದ ಬಳಿ ಇರುವ ಉಷಾಲಕ್ಷ್ಮಿ ಜ್ಯುವೆಲ್ಲರಿ ಅಂಗಡಿಯ ಮಾಲೀಕರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಅವರ ಜ್ಯುವೆಲ್ಲರಿ ಅಂಗಡಿಗೆ ದಿನಾಂಕ:11-09-2024 ರಂದು ಓರ್ವ ಅಪರಿಚಿತ ವ್ಯಕ್ತಿಯು ಬಂದು ಕೆಲಸದವರಲ್ಲಿ ಒಂದು ಚಿನ್ನದ ಕರಿಮಣಿ ಸರವನ್ನು ತೋರಿಸುವಂತೆ ಕೇಳಿದಾಗ, ಒಂದು ಚಿನ್ನದ ಕರಿಮಣಿ ಸರವನ್ನು ನೋಡಲು ಕೊಟ್ಟಿದ್ದು, ಕೆಲಸದವರು ಒಳಗೆ ಹೋಗಿ ವಾಪಾಸು ಬಂದಾಗ ಚಿನ್ನದ ಕರಿಮಣಿ ಸರವನ್ನು ಖರೀದಿಸಲು ಬಂದ ವ್ಯಕ್ತಿ ಇರಲಿಲ್ಲ ಹಾಗೂ ಆತನಿಗೆ ತೋರಿಸಲು ನೀಡಿದ ಚಿನ್ನದ ಕರಿಮಣಿ ಸರವು ಕೂಡಾ ಕಂಡು ಬಂದಿರಲಿಲ್ಲ ಎನ್ನಲಾಗಿದೆ.
ಯಾರೋ ಅಪರಿಚಿತ ವ್ಯಕ್ತಿಯು ಚಿನ್ನದ ಕರಿಮಣಿ ಸರವನ್ನು ಖರೀದಿಸಲು ಬಂದು 7.630 ಗ್ರಾಮ್ ತೂಕದ ಚಿನ್ನದ ಕರಿಮಣಿ ಸರವನ್ನು ಕಳವು ಮಾಡಿಕೊಂಡು ಹೋಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಅವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 305 BNS ರಂತೆ ಪ್ರಕರಣ ದಾಖಲಾಗಿದೆ.