ಉಡುಪಿ: ದಿನಾಂಕ:09-09-2024(ಹಾಯ್ ಉಡುಪಿ ನ್ಯೂಸ್)
ಉಡುಪಿ: ನಗರ ಸಭೆಯ ಅಧಿಕಾರಿಗಳು ಜನನ ಪ್ರಮಾಣ ಪತ್ರ ತಿದ್ದುಪಡಿಗೆ ಬರುವ ಸಾರ್ವಜನಿಕರಿಂದ ಹತ್ತು ಸಾವಿರ ರೂಪಾಯಿಗಳ ಲಂಚ ಕೇಳಿ ಪಡೆದು ತಿದ್ದುಪಡಿ ಮಾಡಿ ಕೊಡುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿಕೊಂಡಿದ್ದಾರೆ.
ಈ ಹಿಂದೆ ಜನನ ಪ್ರಮಾಣ ಪತ್ರ ತಿದ್ದುಪಡಿಗೆ ನ್ಯಾಯಾಲಯದ ಮುಖಾಂತರ ತಿದ್ದುಪಡಿ ಮಾಡಿ ಕೊಳ್ಳಲು ಸೂಚಿಸಲಾಗುತ್ತಿತ್ತು ಎನ್ನಲಾಗಿದೆ. ಆದರೆ ಇದೀಗ ವಿದ್ಯಾರ್ಥಿಗಳು ಮುಂದಿನ ಹೆಚ್ಚಿನ ಶಿಕ್ಷಣಕ್ಕಾಗಿ ತಮ್ಮ ಹೆಸರಿನಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದು ಕಡ್ಡಾಯವಾಗಿರುವ ಕಾರಣ ವಿದ್ಯಾರ್ಥಿಗಳ ಹೆತ್ತವರು ಹೆಚ್ಚಿನ ಸಂಖ್ಯೆಯಲ್ಲಿ ಜನನ ಪ್ರಮಾಣ ಪತ್ರ ತಿದ್ದುಪಡಿಗೆ ನಗರ ಸಭೆಯಲ್ಲಿ ಅಲೆದಾಡುವಂತಾಗಿದೆ.
ಇದರ ಲಾಭವನ್ನು ಪಡೆದು ಕೊಂಡಿರುವ ಅಧಿಕಾರಿಗಳು ತ್ವರಿತವಾಗಿ ಜನನ ಪ್ರಮಾಣ ಪತ್ರ ತಿದ್ದುಪಡಿ ಮಾಡಿ ಕೊಡಲು ಹತ್ತು ಸಾವಿರ ಲಂಚ ಕೇಳಿ ಪಡೆದು ಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.ಅಧಿಕಾರಿಗಳೊಂದಿಗೆ ನಗರ ಸಭೆಯ ದಲ್ಲಾಳಿಗಳು ಸೇರಿಕೊಂಡು ಇನ್ನಷ್ಟು ಹೆಚ್ಚಿನ ಹಣ ವ್ಯಯಿಸಿ ಸಾರ್ವಜನಿಕರು ಜನನ ಪ್ರಮಾಣ ಪತ್ರ ತಿದ್ದುಪಡಿ ಮಾಡಿಸಿ ಕೊಳ್ಳುವ ಸಂದಿಗ್ದ ಪರಿಸ್ಥಿತಿ ಇಲ್ಲಿ ನಿರ್ಮಾಣ ಮಾಡಲಾಗಿದೆ.
ಉಡುಪಿ ನಗರ ಸಭೆಗೆ ಇದೀಗ ನೂತನ ಅಧ್ಯಕ್ಷರ ನೇಮಕವಾಗಿದ್ಧು ಇನ್ನು ಮುಂದಾದರೂ ಉಡುಪಿ ನಗರ ಸಭೆಯಲ್ಲಿ ಅಧಿಕಾರಿಗಳಿಂದ ನಡೆಯುತ್ತಿರುವ ಭ್ರಷ್ಟಾಚಾರ ಕೊನೆಗೊಳ್ಳುವಂತಾಗಲಿ.ನಗರ ಸಭೆಯ ನೂತನ ಅಧ್ಯಕ್ಷರು ಜನತೆಗೆ ಭ್ರಷ್ಟಾಚಾರ ರಹಿತ ಆಡಳಿತ ನೀಡಲು ಹೆಚ್ಚಿನ ಗಮನ ಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.