Spread the love

ಉಡುಪಿ: ದಿನಾಂಕ:31-08-2024 (ಹಾಯ್ ಉಡುಪಿ ನ್ಯೂಸ್)  ಫೈನಾನ್ಸ್ ಸಂಸ್ಥೆಯೊಂದರ ಮ್ಯಾನೇಜರ್ ಹಾಗೂ ಲೋನ್ ಆಫೀಸರ್ ಗಳು ಸಂಸ್ಥೆ ಗೆ ವಂಚಿಸಿರುವ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸ್ಪಂದನಾ ಸ್ಪೂರ್ತಿ ಫೈನಾನ್ಸಿಯಲ್‌ ಲಿಮಿಟೆಡ್‌ , ಉಡುಪಿ ಬ್ರಾಂಚ್‌ (ಕೆಎ1869)ನಲ್ಲಿ ಉತ್ತರ ಕನ್ನಡ ಜಿಲ್ಲೆಯ ನಿವಾಸಿ ಬಸವರಾಜ (26) ಎಂಬವರು ಒಂದೂವರೆ ತಿಂಗಳಿನಿಂದ ಏರಿಯಾ ಮ್ಯಾನೇಜರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಬ್ಯಾಂಕ್‌ನಲ್ಲಿ ಒಂದು ವರ್ಷದಿಂದ ಮ್ಯಾನೇಜರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಬ್ದುಲ್‌ ಲತೀಫ್‌ ಖಾಸಿಂ ಮುಲ್ಲಾರವರು ಸಂಘದ ಸದಸ್ಯರಿಂದ ಕಂತಿನ ಪ್ರಕಾರ ಸಾಲದ ಹಣವನ್ನು ವಸೂಲಿ ಮಾಡುವ ಕರ್ತವ್ಯವನ್ನು ಮಾಡಿಕೊಂಡಿರುತ್ತಾರೆ ಎನ್ನಲಾಗಿದೆ .ಅಬ್ದುಲ್‌ ಲತೀಫ್‌ ಖಾಸಿಂ ಮುಲ್ಲಾರವರು ಸಂಘದ ಸದಸ್ಯರು ಕಟ್ಟಿದ ಲೋನ್‌ ಹಣದಲ್ಲಿ ರೂಪಾಯಿ 1,25,787 ಹಣವನ್ನು ಸ್ಪಂದನಾ ಸ್ಪೂರ್ತಿ ಫೈನಾನ್ಸಿಯಲ್‌ ಲಿಮಿಟೆಡ್‌ ಸಂಸ್ಥೆಗೆ ಪಾವತಿಸದೇ ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡಿರುತ್ತಾರೆ ಎಂದು ಬಸವರಾಜ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಅದರಂತೆ ಲೋನ್‌ ಆಫೀಸರ್‌ಗಳಾದ ಅಕ್ಷಯ್‌ ರವರು 49,000/- ಮತ್ತು ದೀಕ್ಷಿತ್‌ ರವರು 3,00,000/- ಹಣವನ್ನು ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡು , ಸಂಸ್ಥೆಯ ಮ್ಯಾನೇಜರ್‌ರವರೊಂದಿಗೆ ಸೇರಿಕೊಂಡು ಈ ಮೂವರೂ ಒಟ್ಟು ರೂಪಾಯಿ 4,74,787/- ಹಣವನ್ನು ಸಂಸ್ಥೆಗೆ ಕಟ್ಟದೇ ಮೋಸ ಹಾಗೂ ನಂಬಿಕೆ ದ್ರೋಹ ಮಾಡಿರುತ್ತಾರೆ ಎಂದು ದೂರಿದ್ದಾರೆ.

ದಿನಾಂಕ 29.08.2024 ರಂದು  ಸಂಸ್ಥೆಯ ಹಿರಿಯ ಅಧಿಕಾರಿಗಳಾದ ಬಸವರಾಜ , ವೈಸ್‌ ಪ್ರೆಸಿಡೆಂಟ್‌ ಮತ್ತು ಸಹಾಯಕ ವೈಸ್‌ ಪ್ರೆಸಿಡೆಂಟ್‌ ಕೊಟ್ರೇಶ , ಸ್ಟೇಟ್‌ ವೈಸ್‌ ಪ್ರೆಸಿಡೆಂಟ್‌ ಆದ ಮಹೇಶ್‌ ರವರು ಸಂಸ್ಥೆಯ ಲೆಕ್ಕ ಪತ್ರಗಳನ್ನು ಪರಿಶೀಲನೆ ಮಾಡಿದಾಗ ಸಂಸ್ಥೆಯ ನಗದು ಕ್ಲೋಸಿಂಗ್‌ ಬ್ಯಾಲೆನ್ಸ್‌ ಕಡಿಮೆ ಇದ್ದ ಕಾರಣ ವಿಚಾರ ಬೆಳಕಿಗೆ ಬಂದಿದೆ ಎಂದು ಏರಿಯಾ ಮೆನೇಜರ್ ಬಸವರಾಜ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ  ಕಲಂ : 316(5), 318(4) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!